2009ರಲ್ಲೇ ಬಂದಿತ್ತು 'ಯುವ' ಟೈಟಲ್‌ನಲ್ಲಿ ಚಿತ್ರ; ಇದನ್ನೇ ಮತ್ತೆ ಬಳಸಲು ಕಾರಣವೇನು?
ಸಿನಿಮಾ ರಂಗದಲ್ಲಿ ಪ್ರತಿ ಸಿನಿಮಾಗಳಿಗೂ ವಿಭಿನ್ನವಾದ ಟೈಟಲ್ ಇಡಬೇಕು ಎಂದು ಸಿನಿ ರಸಿಕರು ನಿರೀಕ್ಷಿಸುತ್ತಾರೆ. ಹಾಗೆಯೇ ತಾವು ನಿರ್ಮಿಸುವ ಪ್ರತಿ ಸಿನಿಮಾಗೂ ಹೊಸ ಶೀರ್ಷಿಕೆಯನ್ನೇ ಇಡಬೇಕು ಎಂದು ಚಿತ್ರತಂಡಗಳು ಇಚ್ಛಿಸುತ್ತವೆ. ಆದರೆ ಹಲವಾರು ಬಾರಿ ಚಿತ್ರಗಳ ಟೈಟಲ್‌ಗಳು ರಿಪೀಟ್ ಆದ ಉದಾಹರಣೆಗಳಿವೆ. ಕೆಲವೊಮ್ಮೆ ಬಲಿಷ್ಠ ಕಾರಣವಿಲ್ಲದೇ ಚಿತ್ರಗಳಿಗೆ ವಿಂಟೇಜ್ ಚಿತ್ರಗಳ ಶೀರ್ಷಿಕೆಯನ್ನು ಇಟ್ಟರೆ, ಇನ್ನೂ ಕೆಲವೊಮ್ಮೆ ನಿರ್ದಿಷ್ಟ ಕಾರಣದಿಂದಾಗಿ ಹಳೇ ಚಿತ್ರಗಳ ಟೈಟಲ್‌ಗಳನ್ನು ಸಿನಿಮಾಗಳಿಗೆ ಇಡಲಾಗುತ್ತದೆ.
ಹೌದು, ಚಿತ್ರದ ಕಥೆಗೆ ಹಳೆಯ ಶೀರ್ಷಿಕೆಗಳೇ ಸರಿಯಾಗಿ ಹೊಂದಿಕೊಳ್ಳುತ್ತಿವೆ, ಹೀಗಾಗಿ ಕಡ್ಡಾಯವಾಗಿ ಅದೇ ಶೀರ್ಷಿಕೆಯನ್ನು ಚಿತ್ರಕ್ಕೆ ಇಟ್ಟ ಉದಾಹರಣೆಗಳು ಸಾಕಷ್ಟಿವೆ. ದರ್ಶನ್ ಅಭಿನಯದ ಯಜಮಾನ, ಪುನೀತ್ ರಾಜ್‌ಕುಮಾರ್ ಚಕ್ರವ್ಯೂಹ ಹಾಗೂ ಸುದೀಪ್ ನಟನೆಯ ಕೋಟಿಗೊಬ್ಬ ಚಿತ್ರಗಳ ಶೀರ್ಷಿಕೆಗಳು ಹಳೆಯ ಚಿತ್ರಗಳ ಶೀರ್ಷಿಕೆಗಳಾದರೂ ಆ ಕಥೆಗಳಿಗೆ ಹೊಂದಿಕೊಳ್ಳುತ್ತವೆ ಎಂಬ ಕಾರಣದಿಂದಾಗಿ ಮತ್ತೊಮ್ಮೆ ಆ ಟೈಟಲ್‌ಗಳನ್ನು ಬಳಸಲಾಯಿತು.

ಇದೀಗ ರಾಜ್‌ವಂಶದ ಮೂರನೇ ತಲೆಮಾರಿನ ಮತ್ತೊಂದು ಕುಡಿ ಯುವ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲಿರುವ ಚೊಚ್ಚಲ ಚಿತ್ರಕ್ಕೂ ಸಹ ಹಳೆಯ ಚಿತ್ರದ ಟೈಟಲ್ ಅನ್ನೇ ಇಡಲಾಗಿದೆ. ಹೌದು, ಯುವ ರಾಜ್‌ಕುಮಾರ್ ಮೊದಲ ಸಿನಿಮಾಗೆ ಯುವ ಎಂದು ಹೆಸರಿಡಲಾಗಿದೆ. ಈ ಟೈಟಲ್ ಕಂಡ ದೊಡ್ಮನೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಹಾಗೂ ಸಿನಿ ರಸಿಕರೂ ಸಹ ಒಳ್ಳೆ ಟೈಟಲ್ ಎಂದಿದ್ದಾರೆ.
ಇನ್ನು ಹೊಸ ಚಿತ್ರವೊಂದು ಘೋಷಣೆಯಾದಾಗ ಪಾಸಿಟಿವ್ ಜತೆ ನೆಗೆಟಿವ್ ಕಾಮೆಂಟ್ ಬಾರದಿದ್ದರೆ ಅದು ದೊಡ್ಡ ಚಿತ್ರ ಎನಿಸಿಕೊಳ್ಳುವುದಿಲ್ಲ. ಅದೇ ರೀತಿ ಈ ಯುವ ಚಿತ್ರದ ಬಗ್ಗೆ ಸಹ ಪಾಸಿಟಿವ್ ಕಾಮೆಂಟ್ಸ್ ಮಧ್ಯ ನೆಗೆಟಿವ್ ವ್ಯಕ್ತವಾಗಿವೆ. ಕೆಲವರು ಈ ಹೆಸರಿನಲ್ಲಿ ಈಗಾಗಲೇ ಚಿತ್ರ ಬಂದಿದೆ ಎಂದಿದ್ದಾರೆ. ಆದರೆ ಇದೇ ಶೀರ್ಷಿಕೆಯನ್ನು ಚಿತ್ರತಂಡ ಆಯ್ದುಕೊಳ್ಳಲು ಬಲಿಷ್ಠ ಕಾರಣವೂ ಸಹ ಇದೆ.
ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅವರನ್ನು ಪುನೀತ್ ರಾಜ್‌ಕುಮಾರ್ ಮಾದರಿಯಲ್ಲಿಯೇ ಲಾಂಚ್ ಮಾಡಲು ನಿರ್ಧರಿಸಲಾಗಿದೆ. ಹೇಗೆ ಅಪ್ಪು ಎಂದು ಮೊದಲೇ ಕರೆಸಿಕೊಳ್ಳುತ್ತಿದ್ದ ಪುನೀತ್ ಅಭಿನಯದ ಚಿತ್ರಕ್ಕೆ ಅದೇ ಹೆಸರನ್ನು ಶೀರ್ಷಿಕೆಯನ್ನಾಗಿ ಇಡಲಾಗಿತ್ತೋ, ಅದೇ ರೀತಿ ಯುವ ಎಂಬ ಹೆಸರನ್ನೇ ಯುವ ರಾಜ್‌ಕುಮಾರ್ ಮೊದಲ ಸಿನಿಮಾಗೆ ಇಡಲಾಗಿದೆ.

ಮೊದಲಿಗೆ ಈ ಚಿತ್ರಕ್ಕೆ ಅಣ್ಣಾವ್ರ ಸೂಪರ್ ಹಿಟ್ ಚಿತ್ರ ಜ್ವಾಲಾಮುಖಿ ಹಾಗೂ ಕುಮಾರ್ ಬಂಗಾರಪ್ಪ ನಟಿಸಿದ್ದ ಅಶ್ವಮೇಧ ಚಿತ್ರಗಳ ಶೀರ್ಷಿಕೆಗಳನ್ನೇ ಮರುಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರತಂಡ ಫಿಲ್ಮ್ ಚೇಂಬರ್‌ನಲ್ಲಿ ಜ್ವಾಲಾಮುಖಿ, ಅಶ್ವಮೇಧ ಹಾಗೂ ಯುವ ಈ ಮೂರು ಶೀರ್ಷಿಕೆಗಳನ್ನು ನೋಂದಾಯಿಸಿ ಅಂತಿಮವಾಗಿ ಮೇಲಿನ ನಿರ್ದಿಷ್ಟ ಕಾರಣಕ್ಕೆ ಯುವ ಎಂಬ ಟೈಟಲ್ ಅನ್ನು ಅಂತಿಮಗೊಳಿಸಲಾಯಿತು ಎಂಬ ಸುದ್ದಿ ಇದೆ.
ಇನ್ನು 2009ರಲ್ಲಿ ಬಿಡುಗಡೆಗೊಂಡಿದ್ದ ಕಾರ್ತಿಕ್ ಶೆಟ್ಟಿ ಹಾಗೂ ಮಧು ಶರ್ಮಾ ಎಂಬ ಯುವ ನಟ ಹಾಗೂ ನಟಿ ಅಭಿನಯಿಸಿದ್ದ ಚಿತ್ರಕ್ಕೆ ಯುವ ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಈ ಹೆಸರಿನ ಕನ್ನಡ ಚಿತ್ರವೊಂದು ಇದೆ ಎಂಬ ಸಮಾಚಾರವೇ ಬಹುತೇಕರಿಗೆ ತಿಳಿದಿರಲಿಲ್ಲ. ಆದರೆ ಯುವ ರಾಜ್‌ಕುಮಾರ್ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಈ ಹೆಸರಿನ ಚಿತ್ರ ಕನ್ನಡದಲ್ಲಿ ಬಂದಿತ್ತು ಎಂದು ಅರ್ಥವಿಲ್ಲದ ಟ್ರೋಲ್‌ಗಳು ನಡೆಯುತ್ತಿವೆ. ಈ ರೀತಿ ಹಲವಾರು ಸ್ಟಾರ್ ನಟರ ಚಿತ್ರಗಳೇ ಟೈಟಲ್ ಮರುಬಳಕೆ ಮಾಡಿರುವಾಗ ಈ ಚಿತ್ರವನ್ನು ಟ್ರೋಲ್ ಮಾಡುವುದರಲ್ಲಿ ಅರ್ಥವಿಲ್ಲ.


Click it and Unblock the Notifications











