'ಸಲಾರ್' ಟೈಟಲ್ ಕಾರ್ಡ್‌ನಲ್ಲಿ ಯಶ್: ಶೌರ್ಯಾಂಗ ಪರ್ವದಲ್ಲಿ ರಾಕಿಂಗ್ ಸ್ಟಾರ್?
'ಉಗ್ರಂ' ಕಥೆಯನ್ನು 'ಸಲಾರ್' ಆಗಿ ಮತ್ತೆ ಹೇಳುವ ಪ್ರಯತ್ನದಲ್ಲಿ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಸಿನಿಮಾ ಧೂಳೆಬ್ಬಿಸಿದೆ. ಪ್ರಭಾಸ್- ಪೃಥ್ವಿರಾಜ್ ಸುಕುಮಾರನ್ ಬ್ರೊಮ್ಯಾನ್ಸ್ ಸಿನಿರಸಿಕರಿಗೆ ಇಷ್ಟವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಮತ್ತೆ ಈ ಬಾರಿ ಗೆಲ್ಲುವ ಸುಳಿವು ಸಿಗುತ್ತಿದೆ.
ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಕಳೆದ 3 ವರ್ಷಗಳಿಂದ ಭಾರೀ ಸದ್ದು ಮಾಡಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಏಪ್ರಿಲ್ 14ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಆ ದಿನ 'KGF- 2' ಸಿನಿಮಾ ತೆರೆಗಪ್ಪಳಿಸಿತ್ತು. ಬಹಳ ತಡವಾಗಿಯೇ 'ಸಲಾರ್' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಈ ವರ್ಷ ಸೆಪ್ಟೆಂಬರ್ 28ಕ್ಕೆ ಬರಬೇಕಿದ್ದ ಸಿನಿಮಾ 3 ತಿಂಗಳ ಬಳಿಕ ಬಿಡುಗಡೆಯಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಖಾನ್ಸರ್ ಪ್ರಪಂಚದಲ್ಲಿ ದೇವ- ವರದ ಕಾರುಬಾರು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. 'ಉಗ್ರಂ' ಕಥೆಯನ್ನೇ ಸಾಕಷ್ಟು ಬದಲಾವಣೆಯೊಂದಿಗೆ ಬಹಳ ದೊಡ್ಡಮಟ್ಟದಲ್ಲಿ ನೀಲ್ ಕಟ್ಟಿಕೊಟ್ಟಿದ್ದಾರೆ. ಮೊದಲ ಭಾಗ ನೋಡಿದವರು ಎರಡನೇ ಭಾಗ ನೋಡಲು ಬಹಳ ಉತ್ಸುಕರಾಗುವಂತಾಗಿದೆ.
'ಸಲಾರ್' ಚಿತ್ರದ ಟೈಟಲ್ ಕಾರ್ಡ್ ಆರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಇದು ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ. ಹೊಂಬಾಳೆ ಸಂಸ್ಥೆ 'ಸಲಾರ್' ಚಿತ್ರದಲ್ಲಿ ಯಾಕೆ ನಟ ಯಶ್‌ಗೆ ಥ್ಯಾಂಕ್ಸ್ ಹೇಳಿದ್ರು ಎನ್ನುವ ಕುತೂಹಲ ಕೆಲವರಲ್ಲಿದೆ. ಮೊದಲಿನಿಂದಲೂ 'ಸಲಾರ್' ಚಿತ್ರಕ್ಕೂ 'KGF' ಚಿತ್ರಕ್ಕೂ ಲಿಂಕ್ ಇದೆ, ರಾಕಿಭಾಯ್ ಆಗಿ ಯಶ್ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಚಿತ್ರದ ಮುಹೂರ್ತದಲ್ಲಿ ಯಶ್ ಭಾಗಿ ಆಗಿದ್ದು, ಮಲಯಾಳಂನ ಬಾಲ ಗಾಯಕಿ ನೀಡಿದ್ದ ಹೇಳಿಕೆ, 2ನೇ ಟ್ರೈಲರ್‌ನಲ್ಲಿ ಕಂಡ ಅದೊಂದು ಫ್ರೇಮ್ ಊಹಾಪೋಹಕ್ಕೆ ರೆಕ್ಕೆಪುಕ್ಕ ಕಟ್ಟಿತ್ತು. ಆದರೆ ಇತ್ತೀಚೆಗೆ ಎಲ್ಲದಕ್ಕೂ ನಿರ್ದೇಶಕರು ಬ್ರೇಕ್ ಹಾಕಿದ್ದರು.
'KGF' ಚಿತ್ರಕ್ಕೂ 'ಸಲಾರ್'ಗೂ ಯಾವುದೇ ಲಿಂಕ್ ಇಲ್ಲ. ಅದೆಲ್ಲ ಬರೀ ವದಂತಿ. ನಾವು ಆ ಬಗ್ಗೆ ಚರ್ಚಿಸಿದ್ದೆವು. ಆದರೆ ನಾನು ಸಿನಿಮ್ಯಾಟಿಕ್ ಯೂನಿವರ್ಸ್ ಮಾಡಲ್ಲ. ಆ ಸಾಮರ್ಥ್ಯ ನನಗಿಲ್ಲ ಎಂದು ಎಲ್ಲದ್ದಕ್ಕೂ ಫುಲ್‌ಸ್ಟಾಪ್ ಇಟ್ಟಿದ್ದರು. ಆದರೂ ಕೂಡ ಕೆಲವರು 'ಸಲಾರ್' ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎಂದು ಮಾತನಾಡುತ್ತಲೇ ಇದ್ದಾರೆ. ಇದೀಗ ಟೈಟಲ್ ಕಾರ್ಡ್‌ನಲ್ಲಿ ಯಶ್ ಹೆಸರು ನೋಡಿ ಮತ್ತೆ ಈ ಚರ್ಚೆ ಜೀವ ಬಂದಿದೆ.

'ಸಲಾರ್' ಎರಡನೇ ಭಾಗ ಶೌರ್ಯಾಂಗ ಪರ್ವದಲ್ಲಿ ಯಶ್ ಇರ್ತಾರಾ? ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಪ್ರಶಾಂತ್ ನೀಲ್ ಮಾತ್ರ 'ಸಲಾರ್' ಕಥೆಗೂ 'KGF' ಕಥೆಗೂ ಯಾವುದೇ ಲಿಂಕ್ ಇಲ್ಲ ಎಂದು ಖಚಿತಪಡಿಸಿದ್ದಾರೆ. ಎರಡೂ ಕಥೆಗಳು ನಡೆಯುವ ಕಾಲಘಟ್ಟ ಬೇರೆ ಬೇರೆ. ಹಾಗಾಗಿ ಎರಡನ್ನೂ ಸೇರಿಸಲು ಸಾಧ್ಯವಿಲ್ಲ. ನನಗೆ ಸಿನಿಮ್ಯಾಟಿಕ್ ಯೂನಿವರ್ಸ್ ನೋಡೋಕೆ ಇಷ್ಟ. ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ನಟ ಯಶ್, ವಿಜಯ್ ಕಿರಗಂದೂರ್ ಹಾಗೂ ಪ್ರಶಾಂತ್ ನೀಲ್ ನಡುವೆ ಆತ್ಮೀಯ ಒಡನಾಟವಿದೆ. ಹೊಂಬಾಳೆ ಸಂಸ್ಥೆಯ 2 ದೊಡ್ಡ ಸಿನಿಮಾಗಳಲ್ಲಿ ಯಶ್ ನಟಿಸಿದ್ದಾರೆ. ನಟಿಸಿದ್ದು ಮಾತ್ರವಲ್ಲ ಪ್ಯಾನ್ ಇಂಡಿಯಾ ಮಟ್ಟಕ್ಕೆ ಚಿತ್ರವನ್ನು ಕೊಂಡೊಯ್ಯುವಲ್ಲಿ ಯಶ್ ಪಾತ್ರ ಮಹತ್ವದ್ದು. ಅದೇ ಕಾರಣಕ್ಕೆ ಯಶ್ ಚಿತ್ರದ ಮುಹೂರ್ತದಲ್ಲಿ ಭಾಗಿ ಆಗಿ ಶುಭ ಕೋರಿದ್ದರು. ಅದೇ ಕಾರಣಕ್ಕೆ ಈಗ 'ಸಲಾರ್' ಟೈಟಲ್ ಕಾರ್ಡ್‌ನಲ್ಲಿ ಯಶ್‌ಗೆ ಧನ್ಯವಾದ ತಿಳಿಸಲಾಗಿದೆ.
ಬರೀ ಯಶ್ ಮಾತ್ರವಲ್ಲ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕೂಡ ಹೊಂಬಾಳೆ ಸಂಸ್ಥೆ ಚಿತ್ರದ ಆರಂಭದಲ್ಲಿ ನೆನಪಿಸಿಕೊಂಡಿದೆ. ಹಾಗಾಗಿ ಯಶ್‌ಗೆ ಧನ್ಯವಾದ ಹೇಳಿದ ಮಾತ್ರಕ್ಕೆ ಚಿತ್ರದಲ್ಲಿ ನಟಿಸಿದ್ದಾರೆ ಎಂದುಕೊಳ್ಳುವುದು ತಪ್ಪು. 'ಸಲಾರ್' ಪಾರ್ಟ್-2ನಲ್ಲಿ ಕೂಡ ಯಶ್ ಅತಿಥಿ ಪಾತ್ರ ಇರುವುದಿಲ್ಲ ಎನ್ನುವುದು ಸ್ಪಷ್ಟ.


Click it and Unblock the Notifications











