ರವಿಚಂದ್ರನ್ ಮಕ್ಕಳಿಗಾಗಿ ಸಿನಿಮಾ ಮಾಡುತ್ತಿಲ್ಲ ಏಕೆ: ಮಕ್ಕಳಿಗೆ ಯಶಸ್ಸು ಸಿಗೋದ್ಯಾವಾಗ?
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗ ಕಂಡ ಅದ್ಭುತ ಕಲಾವಿದ, ನಿರ್ದೇಶಕ, ನಿರ್ಮಾಪಕ. ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ರವಿಚಂದ್ರನ್ ಅವರ ಪಾತ್ರ ಕೂಡ ಅತ್ಯಂತ ಪ್ರಮುಖ. ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್ ಇಂದಿಗೂ ಹಾಗೆ ಇದೆ.
ಇನ್ನು ರವಿಚಂದ್ರನ್ ಬಳಿಕ ಅವರ ಮಕ್ಕಳು ಸಿನಿಮಾರಂಗದಲ್ಲಿ ತಮ್ಮ ಜರ್ನಿಯನ್ನು ಶುರುಮಾಡಿದ್ದಾರೆ. ಈಗಾಗಲೇ ಮನೋರಂಜನ್ ರವಿಚಂದ್ರನ್ ಕೆಲವು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮನೋರಂಜನ್ ಬಳಿಕ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಕ್ರೇಜಿ ಸ್ಟಾರ್ ಅಂತಹ ಸೂಪರ್ ಸ್ಟಾರ್ ಮಕ್ಕಳು ಸಿನಿಮಾರಂಗಕ್ಕೆ ಬರುವುದು ಎಂದರೆ ಸಣ್ಣ ಮಾತಲ್ಲ. ಅಪ್ಪನಂತೆ ಮಕ್ಕಳು ಕೂಡ ಸ್ಟಾರ್ ಗಿರಿಯಲ್ಲಿ ಮಿಂಚುತ್ತಾರೆ ಎನ್ನುವ ಹತ್ತಾರು ನಿರೀಕ್ಷೆಗಳು ಇರುತ್ತೆ. ಆದರೆ ರವಿಚಂದ್ರನ್ ಮಕ್ಕಳ ವಿಚಾರದಲ್ಲಿ ಅದು ಇನ್ನೂ ಸಾಕಾರಗೊಂಡಿಲ್ಲ.

ಮನೋರಂಜನ್ 4 ಸಿನಿಮಾಗಳು!
ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಈಗಾಗಲೇ ನಾಯಕ ನಟನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 'ಸಾಹೇಬ' ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾ ಅಷ್ಟೇನೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ಹಾಗಂತ 'ಸಾಹೇಬ' ಸಿನಿಮಾದ ಮೂಲಕ ಮನೋರಂಜನ್ ದೊಡ್ಡ ಹೆಸರೇನು ಮಾಡಲಿಲ್ಲ. ನಂತರ 'ಬೃಹಸ್ಪತಿ', 'ಮುಗಿಲ್ ಪೇಟೆ', 'ಪ್ರಾರಂಭ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಮನೋರಂಜನೆಗೆ ಸೂಪರ್ ಹಿಟ್ ಕೊಡುವ ಸಿನಿಮಾ ಇನ್ನೂ ಬಂದಿಲ್ಲ.

'ತ್ರಿವಿಕ್ರಮ'ನಾದ ವಿಕ್ರಂ ರವಿಚಂದ್ರನ್!
ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಇದೀಗ ಸಿನಿಮಾರಂಗಕ್ಕೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. 'ತ್ರಿವಿಕ್ರಮ' ಚಿತ್ರದ ಮೂಲಕ ಭರ್ಜರಿಯಾಗಿ ಬೆಳ್ಳಿ ಪರದೆಗೆ ವಿಕ್ರಮ್ ರವಿಚಂದ್ರನ್ ಬರ್ತಿದ್ದಾರೆ. ಈಗಾಗಲೆ ಚಿತ್ರದ ಟ್ರೈಲರ್, ಹಾಡುಗಳು ರಿಲೀಸ್ ಆಗಿದ್ದು ಚಿತ್ರದ ಮೇಲೆ ಭರವಸೆ ಮೂಡಿಸಿವೆ. ಜೊತೆಗೆ ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ ವಿಕ್ರಂ ರಗಡ್ ಲುಕ್ ಮೂಲಕವೇ ಗಮನ ಸೆಳೆದಿದ್ದಾರೆ. ಸಿನಿಮಾ ರಿಲೀಸ್ ಬಳಿಕ ವಿಕ್ರಂಗೆ ತ್ರಿವಿಕ್ರಮ ಎಷ್ಟರಮಟ್ಟಿಗೆ ಗೆಲುವು ತಂದು ಕೊಡುತ್ತೇನೆ ಎನ್ನುವುದನ್ನು ನೋಡಬೇಕಿದೆ.

ಅಪ್ಪನ ಹೆಸರಿಲ್ಲದೆ ಹೆಸರು ಮಾಡುವ ಆಸೆ!
ವಿಕ್ರಮ್ ರವಿಚಂದ್ರನ್ ಮತ್ತು ಮನೋರಂಜನ್ ರವಿಚಂದ್ರನ್ ಮನಸ್ಸು ಮಾಡಿದರೆ ಅಪ್ಪನ ಕೈಯಲ್ಲಿ ಸಿನಿಮಾ ನಿರ್ದೇಶನ ಮಾಡಿಸಿಕೊಳ್ಳಬಹುದಾಗಿತ್ತು. ಆದರೆ ಅಪ್ಪನ ಆಸರೆಯಿಲ್ಲದೆ ಚಿತ್ರರಂಗದಲ್ಲಿ ಸ್ವಂತವಾಗಿ ಬೆಳೆದು ನಿಲ್ಲಬೇಕು ಎನ್ನುವ ಆಸೆ ಇದೆಯಂತೆ. ಹಾಗಾಗಿ ಅಪ್ಪನ ಬಳಿ ನಮಗಾಗಿ ಹಿಟ್ ಸಿನಿಮಾ ಮಾಡು, ಎಂದು ಕೇಳದೆ ತಾವೇ ಸ್ವತಂತ್ರರಾಗಿ ಸಿನಿಮಾ ಮಾಡುತ್ತಿದ್ದಾರೆ. ಹಾಗಂತ ಇದು ಅವರ ಸೋಲು ಅಲ್ಲ, ಗೆಲುವಿಗಾಗಿ ಅವರು ಏರುತ್ತಿರುವ ಮೆಟ್ಟಿಲುಗಳು ಎನ್ನಬಹುದು.

ಮಕ್ಕಳ ಆಸೆಗೆ ಅಪ್ಪನ ಆಸರೆ!
ತಮ್ಮ ಮಕ್ಕಳ ಬಗ್ಗೆ ಮಾತನಾಡಿದ ರವಿಚಂದ್ರನ್. ನನ್ನ ಮಕ್ಕಳಿಗೆ ಅವರೇ ಸ್ವಂತವಾಗಿ ಬೆಳೆದು ತೋರಿಸುವ ಆಸೆ ಇದೆ. ನನ್ನ ಹೆಸರನ್ನು ಬಳಸಿಕೊಳ್ಳದೆ ತಾವೇ ಚಿತ್ರರಂಗದಲ್ಲಿ ನೆಲೆಯೂರ ಬೇಕು ಎನ್ನುವ ಛಲ ಇದೆ. ಹಾಗಾಗಿ ಸದ್ಯಕ್ಕೆ ನಾನು ಅವರನ್ನು ಅವರ ಪಾಡಿಗೆ ಬಿಟ್ಟಿದ್ದೇನೆ. ಮುಂದೆ ನಾನು ಅವರಿಗಾಗಿ ಸಿನಿಮಾ ಮಾಡುತ್ತೇನೆ. ಎಂದು ಕಾರ್ಯಕ್ರಮವೊಂದರಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ.


Click it and Unblock the Notifications











