ತಮಿಳು ಮಾತನಾಡುವುದೇ ತಪ್ಪಾ? ಯಾಕೆ ಹೆದರಬೇಕು? ನಟ ಶಿವರಾಜ್‌ಕುಮಾರ್ ಪ್ರಶ್ನೆ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ತಮಿಳು ಚಿತ್ರಗಳಲ್ಲಿ ಕೂಡ ನಟಿಸೋಕೆ ಆಸಕ್ತಿ ತೋರಿಸುತ್ತಿದ್ದಾರೆ. ಯೋಗಿ ಬಾಬು ಜೊತೆಗೂ ಒಂದು ಸಿನಿಮಾ ಮಾಡುತ್ತಿದ್ದಾರೆ.
ಚೆನ್ನೈನಲ್ಲೇ ಹುಟ್ಟಿಬೆಳೆದ ಶಿವಣ್ಣ ಸಾಕಷ್ಟು ಬಾರಿ ಆ ದಿನಗಳ ಬಗ್ಗೆ ಮಾತನಾಡಿದ್ದಾರೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದರು. ಅವರ ಪರ್ಫಾರ್ಮನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ತಮಿಳು, ತೆಲುಗು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಬಳಿಕ ಸಾಕಷ್ಟು ತಮಿಳು ಸಂದರ್ಶನಗಳಲ್ಲಿ ಶಿವಣ್ಣ ಭಾಗಿ ಆಗಿದ್ದರು.

ತಮಿಳು ಸಂದರ್ಶನಗಳಲ್ಲಿ ತಮಿಳಿನಲ್ಲಿ ಮಾತನಾಡುವುದಕ್ಕೆ ಭಯ ಯಾಕೆ? ಎಂದು ಶಿವಣ್ಣ ಹೇಳಿದ್ದಾರೆ. ಕೈರಂ ವಾಶಿ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಾನ ಇರುವುದೇ ಹೀಗೆ? ನಾಟಕ ಎಲ್ಲಾ ಮಾಡೋಕೆ ಸಾಧ್ಯವಿಲ್ಲ, ಹೆದರಿಕೊಂಡು ಬದುಕುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ನಾನು ಚಿಕ್ಕಂದಿನಿಂದಲೂ ಇರುವುದೇ ಹೀಗೆ. ಹೆದರಬೇಕು, ಆದರೆ ಒಳ್ಳೆಯದಕ್ಕೆ ಹೆದರಬೇಕು, ಬೇಡದ ವಿಚಾರಗಳಿಗೆ ಯಾಕೆ ಹೆದರಬೇಕು? ಎಂದು ಶಿವಣ್ಣ ಪ್ರಶ್ನಿಸಿದ್ದಾರೆ.
ನಾವು ಬೇರೆ ದೇಶದಲ್ಲಿ ಇಲ್ಲ. ನಾವು ಭಾರತದಲ್ಲಿದ್ದೀವಿ. ಭಾರತ ನಮ್ಮದು, ಎಲ್ಲಾ ರಾಜ್ಯಗಳು ನಮ್ಮದು. ಏನೇ ಸಮಸ್ಯೆ ಇದ್ದರೂ ನಮ್ಮ ನಡುವೆ ಇರುತ್ತದೆ. ಭಾಷೆ ಅಥವಾ ಮತಗಳ ಕಾರಣಕ್ಕೆ ಯಾಕೆ ಕಿತ್ತಾಡಬೇಕು, ತಪ್ಪಲ್ಲವೇ? ನಾವು ಮನುಷ್ಯರು, ಅವ್ರು ಮನುಷ್ಯರು. ಮನುಷ್ಯ ಮನುಷ್ಯನಿಗೆ ಬೆಲೆ ಕೊಡಬೇಕು. ಈ ಭಾಷೆ ಮಾತನಾಡಬಾರದು, ಆ ಭಾಷೆ ಮಾತನಾಡಬಾರದು ಎಂದರೆ ಯಾವ ನ್ಯಾಯ? ಆ ಭಾಷೆ ಏನು ಮಾಡಿತ್ತು ಪಾಪ? ತಮಿಳು ಮಾತನಾಡುವುದೇ ತಪ್ಪಾ? ಎಂದು ಶಿವಣ್ಣ ಕೇಳಿದ್ದಾರೆ.
ಅಣ್ಣಾವ್ರ ಮಕ್ಕಳೆಲ್ಲಾ ಹುಟ್ಟಿದ್ದು ತಮಿಳುನಾಡಿನಲ್ಲಿ. ಹುಟ್ಟಲು ಜಾಗ ಕೊಡ್ತು, ಓದೋಕೆ ವಿದ್ಯೆ ಕೊಡ್ತು. ಚಿತ್ರರಂಗ ಅನ್ನ ಕೊಟ್ಟಿದೆ. ಎಲ್ಲಾ ಮರೆತು, ನಾನು ಅದು ಕೆಟ್ಟ ಜಾಗ ಎನ್ನುವುದಕ್ಕೆ ಸಾಧ್ಯವೇ? ಅದು ಎಷ್ಟು ನ್ಯಾಯ? ಎಂದು ಶಿವರಾಜ್‌ಕುಮಾರ್ ಮನದಾಳ ಬಚ್ಚಿಟ್ಟಿದ್ದಾರೆ. ಹೆದರುತ್ತಲೇ ಇದ್ದರೆ ಬದುಕಲು ಆಗಲ್ಲ, ಸತ್ಯ ಏನೇ ಇದ್ದರೂ ಅದನ್ನು ಒಪ್ಪಿಕೊಂಡು ಮುಂದೆ ಸಾಗುವವನೇ ಮನುಷ್ಯ ಎಂದು ಶಿವಣ್ಣ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ ನಿಮಗೆ ಚೆನ್ನೈ, ಸದಾಶಿವನಗರ ಅಥವಾ ಮಾನ್ಯತಾ ಟೆಕ್‌ಪಾರ್ಕ್ ಯಾವ ಜಾಗ ಮನಸ್ಸಿಗೆ ಹತ್ತಿರವಾಗುತ್ತದೆ ಎನ್ನುವ ಪ್ರಶ್ನೆಗೆ ಶಿವಣ್ಣ ಚೆನ್ನೈ ಎಂದು ಉತ್ತರಿಸಿದ್ದಾರೆ. ಚೆನ್ನೈ ನನಗೆ ಯಾವಾಗಲೂ ಇಷ್ಟ, ಸುಳ್ಳು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕಂದೆ ಆ ಊರು ನಮಗೆ ಎಲ್ಲಾ ಕೊಟ್ಟಿದ್ದು. ಅದು ಬಿಟ್ಟರೆ ಈಗ ಮಾನ್ಯತಾ ಟೆಕ್‌ಪಾರ್ಕ್ ನನ್ನ ಬದುಕು. ಎಲ್ಲವೂ ಇಲ್ಲೇ ಇದೆ ಎಂದು ಶಿವಣ್ಣ ಹೇಳಿದ್ದಾರೆ. ಶಕ್ತಿಧಾಮ ಕೂಡ ಈಗ ಮತ್ತೊಂದು ಮನೆಯಂತಾಗಿದೆ. ಆಗಾಗ್ಗೆ ಹೋಗುತ್ತಿರುತ್ತೇವೆ ಎಂದಿದ್ದಾರೆ.
ಅಂದಹಾಗೆ ಶಿವಣ್ಣ 1962, ಜುಲೈ 12ರಂದು ಚೆನ್ನೈನಲ್ಲಿ ಹುಟ್ಟಿದ್ದರು. ಮೊದಲಿಗೆ ಕನ್ನಡ ಚಿತ್ರರಂಗ ಅಲ್ಲೇ ನೆಲೆಗೊಂಡಿತ್ತು. ಹಾಗಾಗಿ ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು ಅಲ್ಲೇ ನೆಲೆಸಿದ್ದರು. ಹಾಗಾಗಿ ಶಿವಣ್ಣ ಕೂಡ ಅಲ್ಲೇ ಶಾಲಾ, ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮಿಳು ಭಾಷೆಯಲ್ಲೇ ಓದಿದರು. ಬಿಎಸ್‌ಸಿ ಪದವಿ ಪಡೆದ ಬಳಿಕ ಚೆನ್ನೈನಲ್ಲೇ ಆಕ್ಟಿಂಗ್ ಸ್ಕೂಲ್‌ಗೆ ಸೇರಿದ್ದರು. ಬಳಿಕ 'ಆನಂದ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅದೇ ಸಮಯದಲ್ಲಿ ಕನ್ನಡ ಚಿತ್ರರಂಗ ಬೆಂಗಳೂರಿಗೆ ಶಿಫ್ಟ್ ಆಗಿತ್ತು.


Click it and Unblock the Notifications











