ವಿವಾದಾತ್ಮಕ 'ಹಿಂದೂ' ಚಿತ್ರವನ್ನ ಉಪೇಂದ್ರ ಮಾಡಲೇ ಇಲ್ಲ ಯಾಕೆ.?
Recommended Video

ಉಪೇಂದ್ರ ಅಭಿನಯದ 'ಹಿಂದೂ' ಚಿತ್ರ ಯಾವತ್ತಿಗೂ ಅಭಿಮಾನಿಗಳು ನೋಡಲು ಸಾಧ್ಯವಾಗುವುದೇ ಇಲ್ಲ ಅನ್ಸುತ್ತೆ. ಉಪೇಂದ್ರ ಅವರ ಭಾರಿ ಮಹತ್ವಾಕಾಂಕ್ಷೆಯ ಈ ಚಿತ್ರ ಕೇವಲ ಪೇಪರ್ ನಲ್ಲಿ ಉಳಿದು ಹೋಗಿರುವುದಂತೂ ಸತ್ಯ.
ಸುಮಾರು ವರ್ಷಗಳ ಹಿಂದೆ ಈ ಚಿತ್ರ ಸೆಟ್ಟೇರಿತ್ತು. ಮುನಿರತ್ನ ಈ ಚಿತ್ರವನ್ನು ನಿರ್ಮಾಣ ಮಾಡಬೇಕಾಗಿತ್ತು. ಉಪೇಂದ್ರ ಅವರದೇ ಕಥೆ-ಚಿತ್ರಕಥೆ-ಸಂಭಾಷಣೆ ಇತ್ತು. ನಿರ್ದೇಶನ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದಾಗಿ ಚಿತ್ರ ಮುಂದುವರಿಯಲೇ ಇಲ್ಲ.
ಉಪೇಂದ್ರ ಅವರ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದ ಕಾಲದಲ್ಲಿ ಇಂಥದ್ದೊಂದು ಚಿತ್ರವನ್ನ ಉಪೇಂದ್ರ ಮಾಡಲು ಆಗದಿದ್ದುದು ಏಕೆ.? ಎಂಬ ಪ್ರಶ್ನೆ ಕಾಡಿತ್ತು. ಉಪೇಂದ್ರ 'ಹಿಂದೂ' ಚಿತ್ರ ಅನೌನ್ಸ್ ಮಾಡಿದ ತಕ್ಷಣ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾಯಿತು. ಏನದು ವಿವಾದ ಮುಂದೆ ಓದಿ....

ಮುಹೂರ್ತಕ್ಕೆ ಬಾಳಾ ಠಾಕ್ರೆ ಬರಬೇಕಿತ್ತು.!
ಅಯೋಧ್ಯೆ-ಗುಜರಾತ್ ವಿವಾದಗಳನ್ನು ಮುಂದಿಟ್ಟುಕೊಂಡು 'ಹಿಂದೂ' ಚಿತ್ರ ನಿರ್ಮಿಸಲು ಮುನಿರತ್ನ-ಉಪ್ಪಿ ನಿರ್ಧರಿಸಿದ್ದರು. ಅದಕ್ಕಾಗಿ ಶ್ರೀರಾಮನ ಭಾವಚಿತ್ರದ ತಲೆಯ ಭಾಗಕ್ಕೆ ಉಪೇಂದ್ರ ತಲೆಯನ್ನು ಜೋಡಿಸಿ ಜಾಹೀರಾತುಗಳು ಪ್ರಕಟವಾಗಿದ್ದವು. 'ಹಿಂದೂ' ಚಿತ್ರದ ಮುಹೂರ್ತಕ್ಕೆ ಶಿವಸೇನೆ ವರಿಷ್ಠ ಬಾಳಾ ಠಾಕ್ರೆ ಬರಲಿದ್ದಾರೆ ಎಂದೂ ಮುನಿರತ್ನ ಹೇಳಿಕೊಂಡಿದ್ದರು. ಅಷ್ಟರಲ್ಲೇ ಎಲ್ಲವೂ ಮುಗಿದು ಹೋಗಿತ್ತು.

ಹಿಂದೂ ಪರ ಸಂಘಟನೆಗಳ ವಿರೋಧ
ಪತ್ರಿಕೆಗಳಲ್ಲಿ ಜಾಹೀರಾತು ನೋಡಿದ 'ಹಿಂದೂ' ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಸ್ವತಃ ಉಪೇಂದ್ರರನ್ನು ಭೇಟಿ ಮಾಡಿದ 'ಹಿಂದೂ' ಪರ ಸಂಘಟನೆಗಳು ಈ ಚಿತ್ರವನ್ನು ಮಾಡದಂತೆ ಉಪೇಂದ್ರ ಅವರಲ್ಲಿ ಕೇಳಿಕೊಂಡಿದ್ದರು. ನಂತರ ಅವರ ಮನವಿಗೆ ಓಗೊಟ್ಟ ಉಪೇಂದ್ರ ಚಿತ್ರವನ್ನು ಮುಂದುವರೆಸಲಿಲ್ಲ ಎನ್ನಲಾಗಿದೆ.

ಅಷ್ಟಕ್ಕೂ ಚಿತ್ರದಲ್ಲಿ ಅಂತದ್ದೇನಿತ್ತು.?
ಉಪೇಂದ್ರ ಅವರ 'ಹಿಂದೂ' ಚಿತ್ರ 2002ರಲ್ಲಿ ನಡೆದ ಗುಜರಾತ್ ನರಮೇಧದ ಗೋಧ್ರಾ ಹತ್ಯಾಕಾಂಡದ ಕಥೆಯನ್ನು ಒಳಗೊಂಡಿತ್ತು. ಸಾವಿರಾರು ಹಿಂದೂ ಮುಸ್ಲಿಂ ಸಾವಿಗೆ ಕಾರಣವಾದ ಆ ಹತ್ಯೆಯ ಎಳೆಯನ್ನಿಟ್ಟುಕೊಂಡು ಉಪೇಂದ್ರ ಅವರು 'ಹಿಂದೂ' ಕತೆಯನ್ನು ಸಿದ್ಧಪಡಿಸಿದ್ದರು. ಚಿತ್ರದ ಪೋಸ್ಟರ್ ನಲ್ಲಿ ಕಾಣುವಂತೆ ಉಪೇಂದ್ರ ರಾಮನ ಅವತಾರದಲ್ಲಿದ್ದರೆ ಕೆಳಗಡೆ ನರಮೇಧದಲ್ಲಿ ಸುಟ್ಟ ರೈಲಿನ ಚಿತ್ರವಿರೋದು ಗಮನಿಸಬಹುದು.

ಉಪ್ಪಿಯ ಪಾತ್ರವೇ ವಿವಾದಾತ್ಮಕವಾಗಿತ್ತು
ಇನ್ನು ಉಪೇಂದ್ರ ಆಪ್ತರು ಹೇಳುವ ಪ್ರಕಾರ ಉಪೇಂದ್ರ ಅವರ ಚಿತ್ರದ ಕ್ಯಾರೆಕ್ಟರೇ ಬಹಳ ವಿಶೇಷವಾಗಿತ್ತು. ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ಐವತ್ತು ಪರ್ಸೆಂಟ್ ಪಾಸಿಟಿವ್ ಇದ್ದರೆ ಐವತ್ತು ಪರ್ಸೆಂಟ್ ನೆಗೆಟಿವ್ ಆಗಿತ್ತು. ಒಬ್ಬ ಪಾಕಿಸ್ತಾನಿ ಭಯೋತ್ಪಾದಕನಿಂದ ಹಿಡಿದು ಮಹಾನ್ ಹಿಂದೂ ನಾಯಕನವರೆಗೆ ಉಪೇಂದ್ರರ ಪಾತ್ರ ಕೂಡಿತ್ತು ಎಂದು ಹೇಳಲಾಗಿತ್ತು.

ಮತ್ತೆ ಬರುತ್ತಾ?
ಚಿತ್ರದ ಟೈಟಲ್ ಹಿಂದೂ ಮತ್ತು ಚಿತ್ರದಲ್ಲಿ ಉಪೇಂದ್ರ ರಾಮನ ಪಾತ್ರ ವೇಷವನ್ನು ಧರಿಸಿದ್ದರಿಂದ ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಡುವೆ ಈ ಚಿತ್ರ ಮಾಡಲು ಸಾಧ್ಯವಿಲ್ಲ ಅಂತ ಚಿತ್ರ ಕೈ ಬಿಟ್ಟಿದ್ದರು. ಈ ಘಟನೆ ನಡೆದ ಸುಮಾರು ವರ್ಷಗಳು ಆಗಿವೆ. ಈಗ ಕಾಲ ಬದಲಾಗಿದೆ. ಬಹುಶಃ ಉಪ್ಪಿ ಮನಸ್ಸು ಮಾಡಿದ್ರೆ ಮತ್ತೆ ಈ ಪ್ರಾಜೆಕ್ಟ್ ಗೆ ಚಾಲನೆ ನೀಡಬಹುದೇ.? ಉಪ್ಪಿ ಮನಸ್ಸು ಮಾಡ್ತಾರಾ.? ಗೊತ್ತಿಲ್ಲ.


Click it and Unblock the Notifications











