ರಜನಿಕಾಂತ್ ಅವರನ್ನು ವಿಷ್ಣುವರ್ಧನ್ ಫ್ಯಾನ್ಸ್ ಟ್ರೋಲ್ ಮಾಡುತ್ತಿರುವುದೇಕೆ?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ಟಾಪಿಕ್ ಸದ್ದು ಮಾಡುತ್ತದೆ ಎನ್ನುವುದು ಗೊತ್ತಾಗಲ್ಲ. ಯಾರೋ ಒಬ್ಬರು ಹಾಕಿದ ಪೋಸ್ಟ್ ಬಗ್ಗೆ ಇದ್ದಕ್ಕಿದಂತೆ ಪರ ವಿರೋಧ ಚರ್ಚೆ ಶುರುವಾಗಿಬಿಡುತ್ತದೆ. ಸದ್ಯ ಟ್ವಿಟ್ಟರ್‌ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ನಡುವೆ ಹೋಲಿಕೆ ಮಾಡಿ ಟ್ರೆಂಡ್ ನಡೀತಿದೆ. ಅದಕ್ಕೆ ಒಂದು ಕಾರಣ ಕೂಡ ಇದೆ.
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನೇ ಗ್ರೇಟ್. ಆ ನಟನಿಗಿಂಗ ನಮ್ಮ ನಟ ಹೆಚ್ಚು ಎಂದು ಯಾರಾದರೂ ಹೇಳುವುದನ್ನು ಸಹಿಸಲ್ಲ. ಆದರೆ ಸದ್ಯ ವಿಷ್ಣು ಹಾಗೂ ರಜನಿಕಾಂತ್ ನಡುವೆ ಯಾಕೆ ಹೋಲಿಕೆ ಶುರುವಾಯ್ತು? ಅಷ್ಟಕ್ಕೂ ಏನಿದು ಚರ್ಚೆ? ಇಷ್ಟೆಕ್ಕೆಲ್ಲಾ ಕಾರಣ ತಮಿಳು ನೆಟ್ಟಿಗನೊಬ್ಬ ಮಾಡಿದ್ದ ಅದೊಂದು ಪೋಸ್ಟ್. 'ಕೋಟಿಗೊಬ್ಬ' ಚಿತ್ರದ 'ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ' ಹಾಡಿನ ತುಣುಕನ್ನು ಹಂಚಿಕೊಂಡು 'ಅರುಣಾಚಲಂ' ರೀಮೆಕ್ ಎಂದು ಆತ ಬರೆದುಕೊಂಡಿದ್ದನು.

ಸದ್ಯ ಈ ಪೋಸ್ಟ್ ನೋಡಿ ಕೆಲ ವಿಷ್ಣುವರ್ಧನ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ರಜನಿಕಾಂತ್ ನಟನೆಯ 'ಅರುಣಾಚಲಂ' ಚಿತ್ರದ 'ಅಥಾಂಡ ಇಥಾಂಡ' ಹಾಡಿನ ಟ್ಯೂನ್ ಅನ್ನು 'ಕೋಟಿಗೊಬ್ಬ' ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು. ಅಂದಹಾಗೆ ಇದು ರಜನಿಕಾಂತ್ ನಟನೆಯ 'ಬಾಷಾ' ಚಿತ್ರದ ರೀಮೆಕ್ ಆಗಿತ್ತು. 'ಕೋಟಿಗೊಬ್ಬ' ರಜನಿಕಾಂತ್ ಸಿನಿಮಾ ರೀಮೆಕ್ ಎಂದಿದ್ದಕ್ಕೆ ವಿಷ್ಣು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ರೀಮೆಕ್ ಮಾಡಿದರೆ ತಪ್ಪೇನಿದೆ. ರೀಮೇಕ್ ಆಗಿದ್ದರೂ ರಜನಿಕಾಂತ್‌ಗಿಂತ ದಾದಾ ಚೆನ್ನಾಗಿ ನಟಿಸಿದ್ದಾರೆ ಎಂದು ತಿರುಗೇಟು ಕೊಡುತ್ತಿದ್ದಾರೆ.
"ವಿಷ್ಣುವರ್ಧನ್ ನನಗಿಂತಲೂ ಮೊದಲ ಚಿತ್ರರಂಗಕ್ಕೆ ಬಂದವರು. ನಾನು ಆಗ ಇನ್ನು ಹೊಸಬ, ಆಗಲೇ ವಿಷ್ಣುವರ್ಧನ್ ದೊಡ್ಡಸ್ಟಾರ್, ಆಗ ಅವರು ಕೊಟ್ಟ ಪ್ರೋತ್ಸಾಹ ನಾನು ಮರೆಯೋಕೆ ಸಾಧ್ಯವಿಲ್ಲ, ಆ ಪ್ರೀತಿ, ಒಂದರ್ಥದಲ್ಲಿ ನನ್ನ ಸಹೋದರನಂತೆ ನೋಡಿಕೊಂಡರು" ಎಂದು ಸ್ವತಃ ರಜನಿಕಾಂತ್ ಹೇಳಿದ್ದ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
ತಮಿಳು ನಟಿ ಸುಹಾಸಿನಿ ಕೂಡ ವಿಷ್ಣುವರ್ಧನ್ ಪ್ರತಿಭೆ ಬಗ್ಗೆ ಒಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ಕಮಲ್ ಹಾಸನ್ ಹಾಗೂ ರಜನಿಕಾಂತ್ ಇಬ್ಬರನ್ನು ಸೇರಿಸಿದರೆ ಒಬ್ಬರು ವಿಷ್ಣುವರ್ಧನ್. ಅವರು ಆಲ್‌ರೌಂಡರ್, ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ದಾದಾ ಕಂಪ್ಲೀಟ್ ಆಕ್ಟರ್" ಎಂದು ಸುಹಾಸಿನಿ ಹೇಳಿದ್ದ ವೀಡಿಯೋವನ್ನು ಕೂಡ ವಿಷ್ಣು ಅಭಿಮಾನಿಗಳು ತೇಲಿ ಬಿಟ್ಟಿದ್ದಾರೆ.
ಸದ್ಯ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅಭಿಮಾನಿಗಳ ನಡುವೆ ಟ್ವಿಟ್ಟರ್‌ನಲ್ಲಿ ಇದೇ ವಿಚಾರ ಟ್ರೆಂಡ್ ಆಗುತ್ತಿದೆ. 'ಕೋಟಿಗೊಬ್ಬ' ರಜನಿಕಾಂತ್ ನಟಿಸಿದ ರೀಮೇಕ್ ಹೌದು ತಾನೇ, ಅದರಲ್ಲಿ ತಪ್ಪೇನಿದೆ? ಅವರು ವಿಷ್ಣುವರ್ಧನ್ ಬಗ್ಗೆ ಏನು ಹೇಳಲಿಲ್ಲವಲ್ಲ, ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಈ ಟ್ವಿಟ್ಟರ್ ಥ್ರೆಡ್ ಸದ್ದು ಮಾಡ್ತಿದೆ.
2001ರಲ್ಲಿ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ಸಿನಿಮಾ ತೆರೆಗೆ ಬಂದಿತ್ತು. ನಾಗಣ್ಣ ಆಕ್ಷನ್ ಕಟ್ ಹೇಳಿದ್ದರು. ತಮಿಳಿನಲ್ಲಿ ರಜನಿಕಾಂತ್ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಬಹಳ ಸೊಗಸಾಗಿ ನಿಭಾಯಿಸಿದ ದಾದಾ ಗೆದ್ದಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ದೇವ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 'ಅರುಣಾಚಲಂ' ಚಿತ್ರಕ್ಕೂ ವರೇ ಟ್ಯೂನ್ ಹಾಕಿದ್ದರು. ಹಾಗಾಗಿ ಆ ಟ್ಯೂನ್ ಅನ್ನು 'ಬಾಷಾ' ರೀಮೆಕ್ 'ಕೋಟಿಗೊಬ್ಬ' ಚಿತ್ರಕ್ಕಾಗಿ ಬಳಸಿಕೊಂಡಿದ್ದರು. 'ಬಾಷಾ' ಚಿತ್ರಕ್ಕೂ ಅವರೇ ಸಂಗೀತ ಸಂಯೋಜಿಸಿದ್ದರು.
ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಡುವೆ ಆತ್ಮೀಯ ಒಡನಾಟ ಇತ್ತು. ಆರಂಭದ ದಿನಗಳಲ್ಲಿ ದಾದಾ ಜೊತೆ ಕೆಲ ಚಿತ್ರಗಳಲ್ಲಿ ರಜನಿಕಾಂತ್ ನಟಿಸಿದ್ದರು. ಬಳಿಕ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದು. ಆ ಬಳಿಕ ಕೂಡ ಇಬ್ಬರ ನಡುವೆ ಸ್ನೇಹ ಮುಂದುವರೆದಿತ್ತು.


Click it and Unblock the Notifications











