3 ದಿನ ಶೂಟಿಂಗ್ ಬಳಿಕ ಉಪ್ಪಿ ನಿರ್ದೇಶನದ "?" ಸಿನಿಮಾ ನಿಂತಿದ್ದೇಕೆ? ಚಿತ್ರದ ಹೀರೊ ಯಾರಾಗಿದ್ರು?
ತಮ್ಮ ವಿಚಿತ್ರ ಆಲೋಚನೆ ಹಾಗೂ ವಿಭಿನ್ನ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಗೆದ್ದವರು ಉಪೇಂದ್ರ. ಒಂದಕ್ಕಿಂತ ಒಂದು ಹುಬ್ಬೇರಿಸುವಂತಹ ಚಿತ್ರಗಳನ್ನು ಉಪ್ಪಿ ಕಟ್ಟಿಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಸಿನಿಮಾಗಳು ವಿವಾದ ಸೃಷ್ಟಿಸಿದ್ದು ಇದೆ. ಅದನ್ನೆಲ್ಲಾ ಮೀರಿ ತಮ್ಮದೇ ವಿಭಿನ್ನ ಶೈಲಿಯ ಚಿತ್ರಗಳಿಂದ ಸಂಚಲನ ಸೃಷ್ಟಿಸಿದರು.
ಸದ್ಯ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತಮ್ಮ ಸಿನಿಮಾಗಳಿಗೆ ವಿಚಿತ್ರ ಟೈಟಲ್ ಇಟ್ಟು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿ ಉಪೇಂದ್ರ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಯಾವುದೇ ಅಕ್ಷರ, ಪದ ಇಲ್ಲದೇ ಬರೀ ಚಿಹ್ನೆಗಳನ್ನು ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದು ಇದೆ. 'ಓಂ', 'ಸ್ವಸ್ತಿಕ್', 'ಸೂಪರ್', 'ಯುಐ' ಹೀಗೆ ಚಿಹ್ನೆಗಳ ಟೈಟಲ್‌ಗಳಿಂದ ರಿಯಲ್ ಸ್ಟಾರ್ ಸದ್ದು ಮಾಡಿದವರು.

2 ದಶಕದ ಹಿಂದೆ "?" (ಪ್ರಶ್ನಾರ್ಥಕ) ಚಿಹ್ನೆಯ ಟೈಟಲ್ ಇರುವ ಚಿತ್ರವನ್ನು ಉಪೇಂದ್ರ ಆರಂಭಿಸಿದ್ದರು. ಅದಾಗಲೇ ಶ್, ಓಂ, 'ಆಪರೇಷನ್ ಅಂತ' ಚಿತ್ರಗಳನ್ನು ನೋಡಿದ್ದವರು ಉಪ್ಪಿ ಹೊಸ ಸಿನಿಮಾ ಬಗ್ಗೆ ಕೇಳಿ ಥ್ರಿಲ್ಲಾಗಿದ್ದರು. ಸಿನಿಮಾ ನೋಡಲಿ ಉತ್ಸುಕರಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತೇ ಹೋಯಿತು.
'ಆಪರೇಷನ್ ಅಂತ' ಸಿನಿಮಾ ಬೆನ್ನಲ್ಲೇ "?" ಸಿನಿಮಾ ಆರಂಭಿಸಿದ್ದರು. ಆದರೆ 3 ದಿನಗಳ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಯಿತು. ನಂತರ ಸಿನಿಮಾವನ್ನು ಉಪ್ಪಿ ಮರೆತುಬಿಟ್ಟರು. ಅಷ್ಟಕ್ಕೂ ಆ ಸಿನಿಮಾ ನಿಂತಿದ್ದೇಕೆ? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇನ್ನು ಚಿತ್ರದ ನಾಯಕ-ನಾಯಕಿ ಯಾರಾಗಿದ್ದರು ಎನ್ನುವುದನ್ನು ಮರೆತುಬಿಟ್ಟಿದ್ದಾರೆ.

1996ರಲ್ಲಿ "?" ಹೆಸರಿನ ಸಿನಿಮಾ ಶುರುವಾಗಿತ್ತು. 'ಆಪರೇಷನ್ ಅಂತ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಹರ್ಷ ದರ್ಬಾರ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಬೇಕಿತ್ತು. ಇತ್ತೀಚೆಗೆ ರಘುರಾಮ್ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ನಟ, ನಿರ್ಮಾಪಕರ ಹರ್ಷ ದರ್ಬಾರ್ ಮಾತನಾಡಿದ್ದಾರೆ. ಉಪ್ಪಿ ಜೊತೆಗಿನ ಒಡನಾಟ ಹಾಗೂ ಸಿನಿಮಾಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಶಂಕರ್ ನಾಗ್ ಅವರ 'ಜೊತೆ ಜೊತೆಯಲಿ' ಚಿತ್ರದ 'ಕೇಳದೇ ನಿಮಗೀಗ' ಹಾಡಿನಿಂದ ಪ್ರೇರಣೆಗೊಂಡು ಉಪೇಂದ್ರ "?" ಚಿತ್ರದ ಕಥೆ ಮಾಡಿದ್ದರು. ಸಾಂಗ್ ರೆಕಾರ್ಡಿಂಗ್ ಕೂಡ ಆಗಿತ್ತು. 3 ದಿನಗಳ ಚಿತ್ರೀಕರಣ ನಡೆದಿತ್ತು. ಅದೊಂದು ಟೀನೇಜ್ ಲವ್ ಸ್ಟೋರಿ. ನಾನು ನಟಿಸಬೇಕಿತ್ತು. ಸಿನಿಮಾ ಶುರುವಾದ ಬಳಿಕ ಉಪೇಂದ್ರ ತೆಲುಗಿನಲ್ಲಿ 'ಓಂಕಾರಂ' ಸಿನಿಮಾ ಮಾಡಲು ಹೋದರು.
ಕನ್ನಡದ 'ಓಂ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಲು ಹೋದ ಉಪೇಂದ್ರ ಬಳಿಕ ಬಹಳ ಬ್ಯುಸಿ ಆಗಿಬಿಟ್ಟರು. ಇತ್ತ ನಾನು 'ನಂಬರ್-1' ಚಿತ್ರದಲ್ಲಿ ತೊಡಗಿಸಿಕೊಂಡೆ. ಹಾಗಾಗಿ ಬಳಿಕ ನಮ್ಮ "?" ಸಿನಿಮಾ ಟೇಕಾಫ್ ಆಗಲಿಲ್ಲ. ನಾನು ಕಾದು ಕಾದು ಸುಮ್ಮನಾಗಿಬಿಟ್ಟೆ. ಉಪ್ಪಿ ತೆಲುಗಿಗೆ ಹೋಗದೇ ಇದ್ದರೆ ನಮ್ಮ ಸಿನಿಮಾ ಆಗುತ್ತಿತ್ತು ಎಂದು ಹರ್ಷ ದರ್ಬಾರ್ ವಿವರಿಸಿದ್ದಾರೆ.
90ರ ದಶಕದಲ್ಲಿ ಹರ್ಷ ದರ್ಬಾರ್ ಕನ್ನಡ ಚಿತ್ರರಂಗದ ದೊಡ್ಡ ಫೈನಾನ್ಶಿಯರ್ ಆಗಿ ಗುರ್ತಿಸಿಕೊಂಡಿದ್ದರು. ಗುಜರಾತ್ ಮೂಲದ ಹರ್ಷ ಬಿಜಾಪುರದಲ್ಲಿ ಹುಟ್ಟಿ ಬೆಳೆದವರು. ಕನ್ನದಲ್ಲಿ 'ಆಪರೇಷನ್ ಅಂತ', 'ನಂಬರ್-1' ಹಾಗೂ 'ಝೆಡ್' ರೀತಿಯ ಸಿನಿಮಾಗಳನ್ನು ನಿರ್ಮಿಸಿದ್ದರು. ಕೊಡವ ಚಿತ್ರವೊಂದರಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದ ಹರ್ಷ ಬಳಿಕ ತಾವೇ ನಿರ್ಮಿಸಿದ 'ಆಪರೇಷನ್ ಅಂತ' ಚಿತ್ರದಲ್ಲಿ ಅಂಬಿ ಜೊತೆ ಸಣ್ಣ ಪಾತ್ರ ಮಾಡಿದ್ದರು.
ತಮ್ಮ 19 ವರ್ಷ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಹರ್ಷ ದರ್ಬಾರ್ 21ನೇ ವಯಸ್ಸಿನಲ್ಲೇ 'ಆಪರೇಷನ್ ಅಂತ' ಚಿತ್ರ ನಿರ್ಮಿಸಿದ್ದರು. ಉದ್ಯಮಿಗಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಹರ್ಷ 90ರ ದಶಕದಲ್ಲಿ ಒಂದು ಆಲ್ಬಮ್ ಸಾಂಗ್ ಮಾಡಿದ್ದರು. ಅದೇ ಸಮಯದಲ್ಲಿ ಸಾಧುಕೋಕಿಲ ಹಾಗೂ ಉಪೇಂದ್ರ ಪರಿಚಯವಾಗಿ ಚಿತ್ರರಂಗಕ್ಕೆ ಬಂದರು.


Click it and Unblock the Notifications











