ಚುನಾವಣೆಯಲ್ಲಿ ಬಿಜೆಪಿಗೆ ನಟ ಕಿಚ್ಚ ಸುದೀಪ್ ಬೆಂಬಲ? ಸುದೀಪ್ ಆಪ್ತ ಜಾಕ್ ಮಂಜು ಹೇಳಿದ್ದಿಷ್ಟು
ನಟ ಕಿಚ್ಚ ಸುದೀಪ್ ರಾಜಕೀಯ ಎಂಟ್ರಿ ಬಗ್ಗೆ ಸಾಕಷ್ಟು ದಿನಗಳಿಂದ ಗುಸು ಗುಸು ಶುರುವಾಗಿದೆ. ಸಾಕಷ್ಟು ರಾಜಕೀಯ ಮುಖಂಡರು ಸುದೀಪ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸ್ವತ: ಕಿಚ್ಚ ಕೂಡ ಇತ್ತೀಚೆಗೆ ಒಪ್ಪಿಕೊಂಡಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಸುದೀಪ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಶೀಘದಲ್ಲೇ ಅವರು ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗ್ತಿದೆ.
ಸುದೀಪ್ ನೇರವಾಗಿ ಬಿಜೆಪಿ ಸೇರುತ್ತಾರಾ? ಅಥವಾ ಪಕ್ಷದ ಪರ ಪ್ರಚಾರ ಮಾಡುತ್ತಾರಾ? ಎನ್ನುವುದು ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಸುದ್ದಿ ಆಗುತ್ತಿದೆ. ಸುದೀಪ್ ಅವರನ್ನು ತಮ್ಮ ತಮ್ಮ ಪಕ್ಷಗಳಿಗೆ ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸುದೀಪ್ ನಡೆ ಏನು ಅನ್ನುವುದು ಕುತೂಹಲ ಕೆರಳಿಸಿದೆ. ಈ ಬಗ್ಗೆ ಸುದೀಪ್ ಆಪ್ತ ನಿರ್ಮಾಪಕ ಜಾಕ್ ಮಂಜು ಫಿಲ್ಮಿಬೀಟ್‌ಗೆ ಜೊತೆ ಮಾತನಾಡಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ, ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.

"ಸದ್ಯ ಸುದೀಪ್ ಸರ್, ಹೈದರಾಬಾದ್‌ನಲ್ಲಿ ಜಾಹೀರಾತು ಒಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರನ್ನು ರಾಜಕೀಯ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಸುದ್ದಿ ಹೇಗೆ ಹರಡಿತು ಎನ್ನುವುದು ಕೂಡ ಗೊತ್ತಿಲ್ಲ. ಸುದೀಪ್ ಸರ್ ಬೆಂಗಳೂರಿಗೆ ಬಂದ ಮೇಲೆ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ" ಎಂದು ಜಾಕ್ ಮಂಜು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಟ ಸುದೀಪ್ ರಾಜಕೀಯ ನಾಯಕ ಭೇಟಿ ಬಗ್ಗೆ ಟಿವಿ9 ವಾಹಿನಿ ಜೊತೆ ಮಾತನಾಡಿದ್ದರು. "ನಾನೊಬ್ಬ ಕಲಾವಿದ. ನನ್ನ ಮೇಲೆ ಎಲ್ಲರಿಗೂ ಪ್ರೀತಿ ವಿಶ್ವಾಸ ಇದೆ. ಎಲ್ಲರೂ ನನ್ನ ಸ್ನೇಹಿತರು. ಅವರು ಬರೀ ಸ್ನೇಹಿತರಾಗಿ ಬಂದಿದ್ದರು ಎಂದು ಹೇಳಲ್ಲ. ರಾಜಕೀಯದ ಬಗ್ಗೆಯೂ ಚರ್ಚೆ ನಡೀತಿತ್ತು. ಆದರೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಕೆಲಸ ನೋಡಿ ಅವರಿಗೆ ನಂಬಿಕೆ ಬಂದಿರಬಹುದು. ಡಿಕೆ ಶಿವಕುಮಾರ್ ಸರ್, ಸುಧಾಕರ್, ಬೊಮ್ಮಾಯಿ ಅಂಕಲ್, ಸ್ನೇಹಿತೆ ರಮ್ಯಾ ಎಲ್ಲರೂ ಬಂದು ಮಾತನಾಡಿದ್ದಾರೆ. ಆದರೆ ನಾನು ನಿರ್ಧಾರ ತೆಗೆದುಕೊಂಡಿಲ್ಲ.
"ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಬರ್ತಿದೆ. ಎಲ್ಲರಿಗಿಂತ ನನಗೆ ಜನರು ಮುಖ್ಯ. ಜನರಿಗೆ ನಾನು ರಾಜಕೀಯಕ್ಕೆ ಬರುವುದು ಇಷ್ಟ ಇಲ್ಲದೇ ಇರಬಹುದು. ಸಿನಿಮಾದಲ್ಲೇ ಚೆನ್ನಾಗಿರಲಿ ಎನಿಸಬಹುದು. ಜನರ ಪಕ್ಷ ಕೂಡ ಇದೆ. ಅವರು ಹೇಳಿದಂತೆ ನಡೆಯಬೇಕು. ರಾಜಕೀಯಕ್ಕೆ ಯಾಕೆ ಹೋಗಬೇಕು. ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಅವರ ಪರ ನಿಲ್ಲಬಹುದು ಅಲ್ಲವೇ. ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತೇನೆ."
"ಪ್ರಧಾನಿ ಮೋದಿ ಔತಣಕೂಟಕ್ಕೆ ನನಗೂ ಆಹ್ವಾನ ಇತ್ತು. ಆದರೆ ಆಗ ಹುಷಾರಿರಲಿಲ್ಲ. ಅಲ್ಲಿ ಪ್ರೊಟೊಕಾಲ್ ಇತ್ತು. ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ" ಎಂದು ಸುದೀಪ್ ವಿವರಿಸಿದ್ದರು.


Click it and Unblock the Notifications