ಕರ್ನಾಟಕದಲ್ಲೇ ಶಿವಣ್ಣನ 'ಭೈರತಿ ರಣಗಲ್'ಗೆ ತಮಿಳು 'ಕಂಗುವ' ಸವಾಲು
ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೊಸದೇನು ಅಲ್ಲ. ತೆಲುಗು, ತಮಿಳಿನ ಸ್ಟಾರ್ ನಟರ ಚಿತ್ರಗಳು ದೊಡ್ಡಮಟ್ಟದಲ್ಲೇ ಇಲ್ಲಿ ತೆರೆಗಪ್ಪಳಿಸುತ್ತವೆ. ಆದರೆ ಕೆಲವೊಮ್ಮೆ ಕನ್ನಡ ಸಿನಿಮಾಗಳನ್ನು ಮೀರಿಸಿ ಸ್ಕ್ರೀನ್‌ಗಳನ್ನು ಪಡೆದುಕೊಳ್ಳುತ್ತವೆ. ಈ ವಾರ ಕನ್ನಡದ 'ಭೈರತಿ ರಣಗಲ್' ಜೊತೆ ತಮಿಳಿನ 'ಕಂಗುವ' ಸಿನಿಮಾ ತೆರೆಗೆ ಬರಲಿದೆ.
ಶಿವ ನಿರ್ದೇಶನದಲ್ಲಿ ಸೂರ್ಯ ನಟನೆಯ 'ಕಂಗುವ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಗುರುವಾರವೇ(ನವೆಂಬರ್ 14) ಕಂಗುವ ಆರ್ಭಟ ಶುರುವಾಗಲಿದೆ. ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಶುಕ್ರವಾರ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ 'ಕಂಗುವ' ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ.

ತಮಿಳು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ರಾಜ್ಯಾದ್ಯಂತ 'ಕಂಗುವ' ಸಿನಿಮಾ ತೆರೆಗೆ ಬರ್ತಿದೆ. ಆದರೆ 'ಭೈರತಿ ರಣಗಲ್' ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಹೆಚ್ಚು ಸ್ಕ್ರೀನ್ ಹಾಗೂ ಶೋಗಳು ತಮಿಳು ಚಿತ್ರಕ್ಕೆ ಸಿಕ್ಕಿರುವುದು ಗೊತ್ತಾಗುತ್ತಿದೆ. ಅದನ್ನು ಮೀರಿ 'ಭೈರತಿ ರಣಗಲ್' ಶೋಗಳನ್ನು ಗಿಟ್ಟಿಸಿಕೊಳ್ಳುತ್ತಾ ಕಾದು ನೋಡಬೇಕಿದೆ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮೊದಲಿನ ಆದ್ಯತೆ ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.
ಕಲೆಗೆ ಭಾಷೆಯ ಗಡಿಯಿಲ್ಲ. ಬೇಡಿಕೆಗೆ ತಕ್ಕಂತೆ ಚಿತ್ರಮಂದಿರದವರು ಸಿನಿಮಾ ಪ್ರದರ್ಶನ ನಡೆಸುತ್ತಾರೆ ಎನ್ನುವುದು ಕೆಲವರ ವಾದ. ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಭವ್ಯ ಸ್ವಾಗತ ಸಿಗುತ್ತದೆ. ಅದೇ ರೀತಿ ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಯಾಕೆ ಪ್ರಮುಖ್ಯತೆ ಕೊಡಲ್ಲ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಕಂಗುವ' ಸುದ್ದಿಗೋಷ್ಠಿಯಲ್ಲಿ ನಟ ಸೂರ್ಯಗೆ ಇದೇ ಪ್ರಶ್ನೆ ಕೇಳಲಾಯಿತು. ಆಗ ಅವರು ಆ ವಿಚಾರವನ್ನು ವಿತರಕರ ನಿರ್ಧಾರಕ್ಕೆ ಬಿಟ್ಟರು.

'ಕಂಗುವ' ಚಿತ್ರಕ್ಕೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹೆಚ್ಚು ಶೋಗಳು ಕೊಡಬಾರದು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಸೂರ್ಯ ನಟನೆಯ ಕಾಸ್ಟ್ಯೂಮ್ ಡ್ರಾಮಾಗೆ ನಿರೀಕ್ಷಿತ ಮಟ್ಟದಲ್ಲಿ ಹೈಪ್ ಸಿಕ್ಕಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಬೆಳಗ್ಗೆ 4 ಗಂಟೆ ಶೋಗಳು ಕೂಡ ರದ್ದಾಗಿದೆ. ಗುರುವಾರ ಬೆಳಗ್ಗೆ 6.30ರಿಂದ ಸಿನಿಮಾ ಮೊದಲ ಪ್ರದರ್ಶನ ಆರಂಭವಾಗಲಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ಸಿಗುತ್ತಿದೆ. ಆದರೂ ಯಾವ ಚಿತ್ರಕ್ಕೆ ಹೆಚ್ಚು ಧೋಗಳು ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
'ಕಂಗುವ' ಅಡ್ವಾನ್ಸ್ ಬುಕ್ಕಿಂಗ್ ನೋಡುತ್ತಿದ್ದರೆ 'ಭೈರತಿ ರಣಗಲ್' ಕೈ ಮೇಲಾಗುವ ಲಕ್ಷಣಗಳು ಕಾಣುತ್ತಿದೆ. 6 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ನರ್ತನ್ ನಿರ್ದೇಶನದಲ್ಲಿ ಶಿವಣ್ಣನ ಖಡಕ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಅದರ ಹಿಂದಿನ ಕಥೆ ಎಂದರೆ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ.
'ಮಫ್ತಿ' ಚಿತ್ರದ ಸೆಕೆಂಡ್ ಹಾಫ್‌ನಲ್ಲಿ ಮಾತ್ರ 'ಭೈರತಿ ರಣಗಲ್' ಆರ್ಭಟ ನೋಡಿದ್ದರು. ಈ ಬಾರಿ ಇಡೀ ಸಿನಿಮಾ ಶಿವಣ್ಣದ ದರ್ಬಾರ್ ನಡೆಯಲಿದೆ. ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಕಾದಿದೆ. ವಕೀಲನಾಗಿದ್ದ ರಣಗಲ್ ಯಾಕೆ ಮಾಫಿಯಾ ಡಾನ್ ಆಗಿ ಬದಲಾದ ಎನ್ನುವ ಕಥೆ ಚಿತ್ರದಲ್ಲಿ ಇರಲಿದೆ.
ತಮಿಳಿನ 'ಕಂಗುವ' ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ದ್ವಿಪಾತ್ರದಲ್ಲಿ ಸೂರ್ಯ ಕಿಕ್ ಕೊಡಲು ಬರ್ತಿದ್ದಾರೆ. ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದು ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. 10ಕ್ಕೂ ಅಧಿಕ ಭಾಷೆಗಳಿಗೆ ಡಬ್ ಆಗಿ ಸಿನಿಮಾ ತೆರೆಗೆ ಬರಲಿದೆ. 2ಡಿ ಜೊತೆಗೆ 3ಡಿಯಲ್ಲಿ ಕೂಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಚಿತ್ರದ ಟ್ರೈಲರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ.
ಒಟ್ಟಾರೆ ಬಾಕ್ಸಾಫೀಸ್‌ನಲ್ಲಿ 'ಭೈರತಿ ರಣಗಲ್' ವರ್ಸಸ್ 'ಕಂಗುವ' ಫೈಟ್ ಜೋರಾಗಿ ಇರಲಿದೆ. ಯಾವ ಸಿನಿಮಾ ಗೆಲ್ಲುತ್ತದೆ ಕಾದು ನೋಡಬೇಕಿದೆ. 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಭೈರತಿ ರಣಗಲ್' ಬಿಡುಗಡೆ ಆಗುವ ನಿರೀಕ್ಷೆಯಿದ್ದು ಕೆಲವೇ ಕ್ಷಣಗಳಲ್ಲಿ ಅಡ್ವಾನ್ ಬುಕ್ಕಿಂಗ್ ಶುರುವಾಗಲಿದೆ.


Click it and Unblock the Notifications











