'ಕಾಟೇರ' 200 ಕೋಟಿ ರೂ. ಗಳಿಸೋದು ಸಾಧ್ಯವೇ? ಚಿತ್ರತಂಡದ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 17ನೇ ದಿನವೂ ಸಿನಿಮಾ ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಇಂದು ಕೂಡ ದೊಡ್ಡಮಟ್ಟದ ಗಳಿಕೆ ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಸಿನಿಮಾ ಅಂದಾಜು 160 ಕೋಟಿ ರೂ. ಬಾಚಿಕೊಂಡಿದೆ.
'ಕಾಟೇರ' ಅಬ್ಬರ ನೋಡುತ್ತಿದ್ದರೆ 200 ಕೋಟಿ ರೂ. ಕ್ಲಬ್ ಸೇರೋದು ಸಾಧ್ಯವೇ? ಎನ್ನುವ ಚರ್ಚೆ ಶುರುವಾಗಿದೆ. ಸಂಕ್ರಾಂತಿ ಬಳಿಕ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ? ಎನ್ನುವ ವಿಚಾರ ಮುಖ್ಯವಾಗುತ್ತದೆ. 17 ದಿನಗಳಿಂದ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ವಾರದ ದಿನಗಳಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಇದೆ. ವೀಕೆಂಡ್‌ಗಳಲ್ಲಿ ದರ್ಬಾರ್ ಜೋರಾಗಿಯೇ ಕಂಡುಬರುತ್ತಿದೆ.

ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿ 'ಕಾಟೇರ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 2 ವಾರಕ್ಕೆ 158 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡದ ಆಪ್ತರು ಮಾಹಿತಿ ನೀಡಿದ್ದರು. ಕನ್ನಡ ಒಂದೇ ಭಾಷೆಯಲ್ಲಿ 15 ದಿನಗಳಲ್ಲಿ ಇಷ್ಟು ಗಳಿಕೆ ಕಂಡಿರುವುದು ದಾಖಲೆಯೇ ಸರಿ.
ನಟ ದರ್ಶನ್ ಕರಿಯರ್‌ನಲ್ಲೇ 'ಕಾಟೇರ' ಹೊಸ ದಾಖಲೆ ಬರೆದಿದೆ. ಅಷ್ಟೇ ಅಲ್ಲ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಅಕ್ಕಪಕ್ಕದ ಭಾಷೆಗಳಿಂದ ಡಬ್ಬಿಂಗ್‌ಗೆ ಬೇಡಿಕೆ ಶುರುವಾಗಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ ಚಿಂತಕರು, ಸಾಹಿತಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡುತ್ತಿದ್ದಾರೆ. ಫ್ಯಾಮಿಲಿ ಸಮೇತ ಥಿಯೇಟರ್‌ಗೆ ಬರುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗದೇ ಇರುವುದು 'ಕಾಟೇರ'ನಿಗೆ ವರವಾಗಿದೆ. ಕನ್ನಡ ಸಿನಿರಸಿಕರು ಮತ್ತೆ 'ಕಾಟೇರ'ನ ಕಹಾನಿ ನೋಡಿ ತಲೆದೂಗುತ್ತಿದ್ದಾರೆ.

'KGF' ಸರಣಿ, 777 ಚಾರ್ಲಿ, ವಿಕ್ರಾಂತ್ ರೋಣ ಸಿನಿಮಾಗಳು ಏಕಕಾಲಕ್ಕೆ 5 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದವು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಂಡಿದ್ದವು. ಆದರೆ 'ಕಾಂತಾರ' ಸಿನಿಮಾ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಅದ್ಭುತ ಪ್ರತಿಕ್ರಿಯೆ ಪಡೆದಿತ್ತು. ಬಳಿಕ ಬೇಡಿಕೆಗೆ ತಕ್ಕಂತೆ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು.
'ಕಾಂತಾರ' ಹಾದಿಯಲ್ಲೇ 'ಕಾಟೇರ' ಸಿನಿಮಾ ಸದ್ದು ಮಾಡ್ತಿದೆ. ಅದೇ ರೀತಿ ಡಬ್ಬಿಂಗ್‌ಗೆ ಬೇಡಿಕೆ ಶುರುವಾಗಿದೆ. ಚಿತ್ರತಂಡ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ದೊಡ್ಡಮಟ್ಟಕ್ಕೆ ಡಬ್ಬಿಂಗ್ ಮಾಡಿ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದೆ. ಅದೇ ಕಾರಣಕ್ಕೆ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಇನ್ನು ಸಿನಿಮಾ ರಿಲೀಸ್ ಮಾಡಿಲ್ಲ.
'ಕಾಟೇರ' ತಮಿಳು, ತೆಲುಗು ವರ್ಷನ್ ರಿಲೀಸ್ ಕೊಂಚ ತಡವಾಗಬಹುದು. ಆದರೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡುತ್ತಿರುವುದಾಗಿ ಗುಸುಗುಸು ಕೇಳಿಬರ್ತಿದೆ. ಕನ್ನಡ ಮಣ್ಣಿನ ಕಥೆಯನ್ನು ದೊಡ್ಡಮಟ್ಟದಲ್ಲಿ ದೇಶದ ಮೂಲೆ ಮೂಲೆಗೆ ತಲುಪಿಸುವ ಪ್ರಯತ್ನ ನಡೀತಿದೆ. ನಟ ದರ್ಶನ್ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲ್ಲ ಎನ್ನುತ್ತಿದ್ದಾರೆ. ಕರ್ನಾಟಕ ಮಾತ್ರ ನನಗೆ ಸಾಕು ಎಂದು ಹೇಳಿದ್ದು ಇದೆ. ಆದರೆ 'ಕಾಟೇರ' ತಾನಾಗಿಯೇ ಹೊರ ರಾಜ್ಯಗಳಿಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಪರಭಾಷೆಯ ದೊಡ್ಡ ಸಿನಿಮಾಗಳಿಗೆ 'ಕಾಟೇರ' ಸೆಡ್ಡು ಹೊಡೆಯುತ್ತಿದೆ. 3ನೇ ವಾರವೂ 400ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಹಾಗೂ 70ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸಹಜವಾಗಿಯೇ ಬೇರೆ ಭಾಷೆಯ ದೊಡ್ಡ ಸಿನಿಮಾಗಳು ಬಂದರೆ ಕನ್ನಡ ಸಿನಿಮಾಗಳ ಸ್ಕ್ರೀನ್‌ಗಳನ್ನು ಕಬಳಿಸುತ್ತಿದ್ದವು. ಆದರೆ ಚಿತ್ರಮಂದಿರದ ಮಾಲೀಕರು 'ಕಾಟೇರ' ತೆಗೆದು ಬೇರೆ ಸಿನಿಮಾ ಹಾಕಲು ಒಪ್ಪುತ್ತಿಲ್ಲ.


Click it and Unblock the Notifications











