'ಸಾರಥಿ' ರೀತಿ ದರ್ಶನ್ 'ಡೆವಿಲ್' ಸಿನಿಮಾ ಬಿಡುಗಡೆ? ಫಸ್ಟ್ ಸಾಂಗ್ ಕಥೆಯೇನು?
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ. ಸಂಜೆ ವೇಳೆಗೆ ತಾವೇ ಶರಣಾಗುವುದಾಗಿ ದರ್ಶನ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ. ಪ್ರಕರಣದ ವಿಚಾರಣೆ ಬೇಗ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಸದ್ಯಕ್ಕೆ ದರ್ಶನ್‌ಗೆ ಜೈಲೇ ಗತಿ ಎನ್ನುವಂತಾಗಿದೆ.
ಕಳೆದ ವರ್ಷ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಬಳಿಕ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದರು. ಚಿಕಿತ್ಸೆ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು 131 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆಗಿದ್ದರು. ಬಳಿಕ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಆದರೆ ಈ ಬಾರಿ ಮತ್ತೆ ಜಾಮೀನು ಸಿಗುವುದು ಕಷ್ಟ ಎಂದೇ ಹೇಳಲಾಗ್ತಿದೆ. ಕುಂಟು ನೆಪವೊಡ್ಡಿ ಜಾಮೀನು ಕೇಳಲು ಅವಕಾಶ ಇಲ್ಲ ಎನ್ನುವಂತಾಗಿದೆ. ಇದೆಲ್ಲದರ ನಡುವೆ 'ಡೆವಿಲ್' ಸಿನಿಮಾ ಕಥೆ ಏನು? ಎನ್ನುವ ಚರ್ಚೆ ಶುರುವಾಗಿದೆ.

'ಡೆವಿಲ್' ಚಿತ್ರದ ಒಂದು ವಾರದ ಚಿತ್ರೀಕರಣದ ಬಳಿಕ ದರ್ಶನ್ ಕೈಗೆ ಪೆಟ್ಟಾಗಿತ್ತು. ಬಳಿಕ ದರ್ಶನ್ ಕೈಗೆ ಸರ್ಜರಿ ಮಾಡಲಾಗಿತ್ತು. ಬಳಿಕ ವಿಶ್ರಾಂತಿ ಪಡೆದು 2ನೇ ಶೆಡ್ಯೂಲ್ ಆರಂಭಿಸುವ ವೇಳೆಗೆ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. ದರ್ಶನ್ ಜೈಲು ಸೇರಿ 'ಡೆವಿಲ್' ಸಿನಿಮಾ ನಿಂತು ಹೋಗಿತ್ತು. ಜೈಲಿನಿಂದ ಬಿಡುಗಡೆಯಾಗಿದ್ದ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದರು. 5 ತಿಂಗಳ ಹಿಂದೆ ಮತ್ತೆ ಚಿತ್ರೀಕರಣ ಆರಂಭವಾಗಿತ್ತು.
ಮೈಸೂರು, ರಾಜಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲಾಗಿತ್ತು. ಬಳಿಕ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಿ ಸಾಂಗ್ ಶೂಟ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ದರ್ಶನ್ ಅಲ್ಲಿಗೆ ತೆರಳಲು ವೀಸಾ ಸಿಕ್ಕಿರಲಿಲ್ಲ. ಬಳಿಕ ಥಾಯ್ಲೆಂಡ್ ವೀಸಾ ಪಡೆದು ಹೋಗಿ ಚಿತ್ರೀಕರಣ ನಡೆಸಿದ್ದರು. 10 ದಿನಗಳ ಕಾಲ ಅಲ್ಲಿ ದರ್ಶನ್ ಉಳಿದುಕೊಂಡಿದ್ದರು. 'ಡೆವಿಲ್' ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ದರ್ಶನ್ ಡಬ್ಬಿಂಗ್ ಸಹ ಮುಗಿಸಿದ್ದಾರೆ. ಅಕ್ಟೋಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ.
ನಾಳೆ(ಆಗಸ್ಟ್ 15) ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ದರ್ಶನ್ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಚಾರ ಮಾಡುತ್ತಿದ್ದರು. ಅಷ್ಟರಲ್ಲೇ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದೆ. ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾಗಿದೆ. ಇದೆಲ್ಲದರ ನಡುವೆ ನಾಳೆ ಸಾಂಗ್ ಬಿಡುಗಡೆ ಆಗುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಆಪ್ತ ಮೂಲಗಳ ಪ್ರಕಾರ ಅಂದುಕೊಂಡ ಸಮಯಕ್ಕೆ ಸರಿಯಾಗಿ ಸಾಂಗ್ ಹೊರಬರಲಿದೆ.
'ಡೆವಿಲ್' ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿಯಿದೆ. ಹಾಗಾಗಿ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ. ದರ್ಶನ್ ಸದ್ಯಕ್ಕೆ ಜೈಲಿನಿಂದ ಹೊರಬರುವುದು ಕಷ್ಟ ಎನ್ನಲಾಗ್ತಿದ್ದು 'ಡೆವಿಲ್' ಸಿನಿಮಾ ಬಿಡುಗಡೆ ಆಗುತ್ತಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. 14 ವರ್ಷಗಳ ಹಿಂದೆ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅವರು ಜೈಲಿನೊಳಗೆ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ರಾಜ್ಯಾದ್ಯಂತ ವಿಜಯಯಾತ್ರೆ ನಡೆಸಿದ್ದರು. ದರ್ಶನ್ ಜೈಲಿನಲ್ಲಿ ಇದ್ದರೂ 'ಡೆವಿಲ್' ಸಿನಿಮಾ ಬಿಡುಗಡೆ ಆಗುತ್ತಾ? ಅಥವಾ ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್ ಜೈಲಿನಿಂದ ಹೊರಬರ್ತಾರಾ? ಕಾದು ನೋಡಬೇಕಿದೆ.
ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಸ್ವತಃ ಮಿಲನಾ ಪ್ರಕಾಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.


Click it and Unblock the Notifications











