'ಸರ್ಫ್ ಪೌಡರ್ ಹಾಕಿ ಒಗೆಯಲಾದ ಬಟ್ಟೆಯಲ್ಲಿ ರಕ್ತದ ಕಲೆ ಇರಲು ಹೇಗೆ ಸಾಧ್ಯ',? ದರ್ಶನ್ ಜಾಮೀನಿಗೆ ಹತ್ತಾರು ಕಸರತ್ತು..!
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ಆದರೆ ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರ ಪಾತ್ರ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರ ಸದ್ಯದಲ್ಲಿಯೇ ಸಿಗಬೇಕಿದೆಯಾದರೂ ಇದು ಕ್ಲಾಸಿಕ್ ತನಿಖೆ ಅಲ್ಲ ಇದು ಕ್ಲಾಸಿಕ್ ವೈಫಲ್ಯ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಇಂದು ವಾದ ಮಂಡನೆ ಮಾಡಿದ್ದಾರೆ.
ಹೌದು, ಇಂದು ದರ್ಶನ್ ಅವರಿಗೆ ಜಾಮೀನು ನೀಡಬೇಕೆಂದು ವಾದವನ್ನು ಮಂಡಿಸಿದ್ದ ಹಿರಿಯ ವಕೀಲರಾದ ಸಿ ವಿ ನಾಗೇಶ್, ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಇದು ಕ್ಲಾಸಿಕ್ ತನಿಖೆಯಲ್ಲ ಬದಲಿಗೆ ಕ್ಲಾಸಿಕ್ ವೈಫಲ್ಯ ಎಂದು ಹೇಳಿದ್ದಾರೆ. ಇದಲ್ಲದೇ ದರ್ಶನ್ ಅವರ ವಿರುದ್ಧ ಕೆಲ ಸಾಕ್ಷ್ಯಗಳನ್ನು ಸೃಷ್ಟಿಮಾಡಲಾಗಿದೆ ಎನ್ನುವ ವಾದವನ್ನೂ ಕೂಡ ಹಿರಿಯ ವಕೀಲರಾದ ಸಿವಿ ನಾಗೇಶ್ ಇಂದು ವಾದ ಮಾಡಿದ್ದಾರೆ.

ಇನ್ನೂ ತಮ್ಮ ಸ್ವಇಚ್ಛಾ ಹೇಳಿಕೆಯ ಸಂದರ್ಭದಲ್ಲಿ ದರ್ಶನ್, ಕೃತ್ಯದ ದಿನ ನಾನು ಧರಿಸಿದ ವಸ್ತುಗಳನ್ನು ತೋರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ದರ್ಶನ್ ಅವತ್ತು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಶೂ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವಾಸ್ತವದಲ್ಲಿ ದರ್ಶನ್ ತಮ್ಮ ವಸ್ತುಗಳನ್ನು ತೋರಿಸುವುದಾಗಿ ಹೇಳಿದ್ದಾರೆಯೇ ಹೊರತು ಎಲ್ಲಿಯೂ ಅವತ್ತು ನಾನು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಶೂ ಧರಿಸಿದ್ದಾರೆ ಹೇಳಿಲ್ಲ ಎಂದು ಹೇಳಿದ್ದಾರೆ. ಅವತ್ತು ದರ್ಶನ್ ಶೂ ಅಲ್ಲ ಬದಲಿಗೆ ಚಪ್ಪಲಿಯನ್ನು ಧರಿಸಿದ್ದರು ಎಂದು ದರ್ಶನ್ ಹೇಳಿದ್ದಾರೆ. ಈ ಕುರಿತು ಪಂಚನಾಮೆಯಲ್ಲಿ ಉಲ್ಲೇಖವನ್ನೂ ಮಾಡಲಾಗಿದೆ ಆದರೂ ಕೂಡ ಶೂವನ್ನು ವಶಕ್ಕೆ ಪಡೆದಿದ್ದಾರೆ, ಶೂ ರಿಕವರಿ ಬಗ್ಗೆ ಯಾವುದೇ ಸ್ವಇಚ್ಛಾ ಹೇಳಿಕೆ ಇರಲಿಲ್ಲ ಎಂದು ವಾದವನ್ನು ಹಿರಿಯ ವಕೀಲ ಸಿವಿ ನಾಗೇಶ್ ಇಂದು ಮಂಡಿಸಿದ್ದಾರೆ.
ಇಷ್ಟೇ ಅಲ್ಲ ಹನ್ನೆರಡನೇ ತಾರೀಖಿಗೆ ದರ್ಶನ್ ಅವರ ಬಟ್ಟೆಯನ್ನು ವಶ ಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಪೊಲೀಸರು ವಶ ಪಡೆದ ಬಟ್ಟೆಯನ್ನು ಒಂಬತ್ತನೇ ತಾರೀಖಿನಂದೇ ಒಗೆಯಲಾಗಿತ್ತು. ಸರ್ಫ್ ಪೌಡರ್ ಹಾಕಿ ಒಗೆಯಲಾದ ಬಟ್ಟೆಯಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಸುಪ್ರಿಂ ಕೋರ್ಟ್ ಇಂತಹ ರಿಕವರಿಗೆ ಮಾನ್ಯತೆ ಇಲ್ಲ ಎಂದು ಸಿವಿ ನಾಗೇಶ್ ಉಲ್ಲೇಖಿಸಿದ್ದಾರೆ. ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಬೇಕೆಂದೇ ಕೆಲ ಸಾಕ್ಷ್ಯಗಳನ್ನು ಸೃಷ್ಟಿಮಾಡಲಾಗಿದೆ ಎಂಬ ವಾದವನ್ನೂ ಕೂಡ ಸಿವಿ ನಾಗೇಶ್ ಇಂದು ಮಾಡಿದ್ದಾರೆ.
ಇನ್ನೂ ಮರಣೋತ್ತರ ಪರೀಕ್ಷೆಯಲ್ಲಿರುವ ಲೋಪ ದೋಷಗಳನ್ನೂ ಕೂಡ ಉಲ್ಲೇಖ ಮಾಡಿರುವ ವಕೀಲರಾದ ಸಿವಿ ನಾಗೇಶ್, ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲಿಯೂ ಕೂಡ ದರ್ಶನ್ ಹೊಡೆದರು, ಒದ್ದರು ಈ ಕಾರಣಕ್ಕೆ ರೇಣುಕಾ ಸ್ವಾಮಿಯ ಪ್ರಾಣ ಪಕ್ಷಿ ಹಾರಿ ಹೋಯಿತು ಎನ್ನುವ ಉಲ್ಲೇಖ ಇಲ್ಲ ಎಂದು ಹೇಳಿದ್ದಾರೆ. ರೇಣುಕಾ ಸ್ವಾಮಿ ನಿಧನದ ಸಮಯದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೂಡ ವಾದ ಮಂಡಿಸಿರುವ ಸಿವಿ ನಾಗೇಶ್, ನಾಯಿಗಳು ಶವವನ್ನೂ ಎಳೆದಾಡಿದ ಪರಿಣಾಮ ಅವರ ದೇಹದ ಮೇಲೆ ಕಲೆ ಇವೆ ಹೊರತು ಆ ಎಲ್ಲ ಕಲೆಗಳು ದರ್ಶನ್ ಅವರಿಂದ ಆಗಿಲ್ಲ ಎಂದು ಹೇಳಿದ್ದಾರೆ.
ಒಟ್ನಲ್ಲಿ ಪೊಲೀಸರಿಂದ ತಪ್ಪಾಗಿದೆ ಎನ್ನುವ ಅಂಶಗಳ ಜೊತೆ ಇಂದು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಮಾಡಿದ್ದಾರೆ. ಸಿವಿ ನಾಗೇಶ್ ಅವರ ಈ ಸುಧೀರ್ಘ ವಾದವನ್ನು ಆಲಿಸಿದ ನ್ಯಾಯಾಧೀಶರು ಸದ್ಯ ಪ್ರಕರಣದ ವಿಚಾರಣೆಯನ್ನು ನಾಳೆ ಮಧ್ಯಾಹ್ನ 12-30ಕ್ಕೆ ಮುಂದೂಡಿದ್ದಾರೆ. ನಾಳೆ ಕೂಡ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಲಿದ್ದು, ಆ ನಂತರ ಪ್ರಸನ್ನು ಅವರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಆ ನಂತರವಷ್ಟೇ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತಂತೆ ತೀರ್ಪು ನೀಡುವ ಸಾಧ್ಯತೆ ಇದೆ.


Click it and Unblock the Notifications











