ರಾಜ್ ಮೊಮ್ಮಗನ ಚೊಚ್ಚಲ ಸಿನಿಮಾದ ಬಗ್ಗೆ ಹೀಗೊಂದು ಹೊಸ ಸುದ್ದಿ
Recommended Video

ರಾಜ್ ಕುಟುಂಬದ ಕುಡಿಗಳು ಬಂದರ ನಂತರ ಒಬ್ಬರಂತೆ ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ಈಗ ನಟ ಧೀರೇನ್ ರಾಮ್ ಕುಮಾರ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ರಾಜ್ ಪುತ್ರಿ ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ದಂಪತಿಯ ಮಗ ಧೀರೇನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಜೊತೆಗೆ ಹೊಸ ಹೊಸ ರೀತಿಯ ಫೋಟೋ ಶೂಟ್ ಗಳ ಮೂಲಕ ಧೀರೇನ್ ಗಮನ ಸೆಳೆದಿದ್ದರು. ಇದೀಗ ಅವರ ಮೊದಲ ಸಿನಿಮಾದ ಬಗ್ಗೆ ಕೆಲವು ಸಂಗತಿಗಳು ಸುದ್ದಿ ಮಾಡುತ್ತಿವೆ.
ಅಂದಹಾಗೆ, ಧೀರೇನ್ ರಾಮ್ ಕುಮಾರ್ ಅವರ ಸಿನಿಮಾವನ್ನು ಯಾರು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ ಒಂದು ಕಡೆ ಇದೆ. ಈಗ ಒಬ್ಬ ನಿರ್ದೇಶಕ ಹಾಗೂ ನಿರ್ಮಾಪಕರ ಹೆಸರು ಕೇಳಿ ಬಂದಿದೆ. ಮುಂದೆ ಓದಿ...

ಜಯಣ್ಣ ನಿರ್ಮಾಣ
ರಾಜ್ ಕುಟುಂಬದ ಕುಡಿ ಧೀರೇನ್ ರಾಮ್ ಕುಮಾರ್ ಅವರನ್ನು ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಯಣ್ಣ ಅವರು ಲಾಂಚ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ರವಿಚಂದ್ರನ್ ಪುತ್ರ ಮನೋರಂಜನ್ ಸಹ ಜಯಣ್ಣ ಕಂಬೈನ್ಸ್ ನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಪುನೀತ್ ನಿರ್ಮಾಣ ಮಾಡಲ್ವಾ?
ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರೇ ತಮ್ಮ ಪಿ ಆರ್ ಕೆ ಬ್ಯಾನರ್ ನಲ್ಲಿ ಧೀರೇನ್ ರಾಮ್ ಕುಮಾರ್ ಅವರನ್ನ ಪರಿಚಯ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಈಗ ಜಯಣ್ಣ ಈ ಸಿನಿಮಾಗೆ ಬಂಡವಾಳ ಹಾಕುತ್ತಾರೆ ಎಂಬ ಮಾಹಿತಿ ಬಂದಿದೆ.

ಅನಿಲ್ ಕುಮಾರ್ ನಿರ್ದೇಶನ
'ರಾಂಬೋ 2' ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಅನಿಲ್ ಕುಮಾರ್ ಗೆ ಅದೃಷ್ಟ ಖುಲಾಯಿಸಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆಗೆ 'ಮೈ ನೇಮ್ ಈಸ್ ಕಿರಾತಕ' ಸಿನಿಮಾದಲ್ಲಿ ಅವರು ಬ್ಯುಸಿ ಇದ್ದಾರೆ. ವಿಶೇಷ ಅಂದರೆ, ಈಗ ಧೀರೇನ್ ರಾಮ್ ಕುಮಾರ್ ಚಿತ್ರಕ್ಕೆ ಸಹ ಅನಿಲ್ ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿದೆ.

ಅಧಿಕೃತ ಘೋಷಣೆ ಯಾವಾಗ?
ಧೀರೇನ್ ರಾಮ್ ಕುಮಾರ್ ಮೊದಲ ಸಿನಿಮಾದ ಬಗ್ಗೆ ಸದ್ಯ ಕೇಳಿ ಬಂದಿರುವ ಈ ಸುದ್ದಿ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಸದ್ಯ 'ಮೈ ನೇಮ್ ಈಸ್ ಕಿರಾತಕ' ಚಿತ್ರದಲ್ಲಿ ಅನಿಲ್ ಬ್ಯುಸಿ ಇದ್ದು, ಈ ಚಿತ್ರಕ್ಕೆ ಸಹ ಜಯಣ್ಣ ಹಣ ಹಾಕುತ್ತಿದ್ದಾರೆ. ಆ ಸಿನಿಮಾದ ಕೆಲಸಗಳು ಮುಗಿದ ನಂತರ ಈ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.

ಬಣ್ಣದ ಲೋಕದಲ್ಲಿ ರಾಜ್ ಕುಟುಂಬದ ಕುಡಿಗಳು
ರಾಜ್ ಕುಮಾರ್ ಕುಟುಂಬದ ಕುಡಿಗಳು ಈಗ ಚಿತ್ರರಂಗಕ್ಕೆ ಬಂದರ ನಂತರ ಒಬ್ಬರು ಬರುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಪುತ್ರಿ ನಿವೇದಿತಾ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಕಿ ಗೋಪಾಲ್ ಶಿವಣ್ಣನಿಗೆ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











