RRR ದಾಖಲೆ ಮುರಿಯುತ್ತದೆಯೇ 'ಕೆಜಿಎಫ್ 2'? ಯಶ್ ಕೊಟ್ಟರು ಖಡಕ್ ಉತ್ತರ
ಸಿನಿಮಾದ ಯಶಸ್ಸು ಅಳೆಯುವುದು ಬಾಕ್ಸ್ ಆಫೀಸ್ ಲೆಕ್ಕಾಚಾರದ ಮೇಲೆ ಎಂಬ ಸ್ಥಿತಿ ಈಗಿದೆ. ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆಯೋ ಅದು ಅತ್ಯುತ್ತಮ ಸಿನಿಮಾ ಎಂಬುದು ಈಗಿರುವ ಸಿದ್ಧ ಮಾದರಿ.
ಕೆಲವೇ ದಿನಗಳಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಿಡುಗಡೆ ಆಗಲಿದೆ. ಅಭಿಮಾನಿಗಳಿಗೆ ಮಾತ್ರವಲ್ಲ, ದೇಶದಾದ್ಯಂತದ ಸಿನಿ ಪಂಡಿತರಿಗೆ, ಬಾಕ್ಸ್ ಆಫೀಸ್ ವಿಶ್ಲೇಷಕರಿಗೆ ಸಿನಿಮಾದ ಕಲೆಕ್ಷನ್ ಮೇಲೆ ಕಣ್ಣು ನೆಟ್ಟಿದೆ. ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ಈಗಲೇ ಅಂದಾಜು ಮಾಡಲು ಆರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದ 'RRR' ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಿನ-ದಿನಕ್ಕೂ ದಾಖಲೆ ಬರೆಯುತ್ತಾ ಸಾಗಿದೆ. 'RRR' ನಂತೆ 'ಕೆಜಿಎಫ್ 2' ಸಹ 'ಬಿಗ್ ಕ್ಯಾನ್ವಸ್' ಸಿನಿಮಾ ಆಗಿದ್ದು, RRR ಕಲೆಕ್ಷನ್ ಅನ್ನು 'ಕೆಜಿಎಫ್ 2' ಬೀಟ್ ಮಾಡಲಿದೆಯಾ? ಎಂಬ ಸಹಜ ಕುತೂಹಲ ಎಲ್ಲರಲ್ಲೂ ಇದೆ. ಉತ್ತರ ಭಾರತದಲ್ಲಿ ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ಯಶ್‌ಗೂ ಸಹ ಈ ಪ್ರಶ್ನೆ ಸುದ್ದಿಗೋಷ್ಠಿಯೊಂದರಲ್ಲಿ ಎದುರಾಗಿದ್ದು, ಅದಕ್ಕೆ 'ರಾಕಿ ಭಾಯ್' ಮಾದರಿಯಲ್ಲಿ ಖಡಕ್ ಆಗಿ ಉತ್ತರ ನೀಡಿದ್ದಾರೆ ಯಶ್.

'RRR' ಸಿನಿಮಾದ ಯಶಸ್ಸು ಒತ್ತಡ ಹೇರಿಲ್ಲ: ಯಶ್
''RRR ಸಿನಿಮಾದ ಯಶಸ್ಸು ನಮ್ಮ ಮೇಲೆ ಒತ್ತಡ ಹೇರಿಲ್ಲ. ಅದಿನ್ನೂ ಖುಷಿ ಎನಿಸಿದೆ. ಹೆಚ್ಚು ಸಂಖ್ಯೆಯ ಜನರನ್ನು ಮನರಂಜಿಸುವುದು ಸಹಜವಾಗಿಯೇ ಸಂತೋಶದ ಸಂಗತಿ. ನಾವು ಸಹ ಅದೇ ಮಾದರಿಯಲ್ಲಿ ಹೆಚ್ಚು-ಹೆಚ್ಚು ಜನರಿಗೆ ಮನರಂಜನೆ ಒದಗಿಸಲಿದ್ದೇವೆ. ಹೌದು ಬಾಕ್ಸ್ ಆಫೀಸ್ ನಂಬರ್ ಬಗ್ಗೆ ನಾವು ಯೋಚಿಸುತ್ತೇವೆ. ಆದರೆ ನಮ್ಮ ನಂಬಿಕೆ ಎಂದರೆ ಸಿನಿಮಾ ಬಿಡುಗಡೆ ಆದಮೇಲೆ ನಮ್ಮ ಕೆಲಸ ಜನರಿಗೆ ಇಷ್ಟವಾದರೆ ಅವರೇ ಹೆಚ್ಚು-ಹೆಚ್ಚು ಪ್ರಚಾರವನ್ನು ಸಿನಿಮಾಕ್ಕೆ ನೀಡುತ್ತಾರೆ. ನಮಗಿಂತಲೂ ಹೆಚ್ಚು ಜನರಿಗೆ ಸಿನಿಮಾವನ್ನು ಅವರೇ ತಲುಪಿಸುತ್ತಾರೆ'' ಎಂದಿದ್ದಾರೆ ಯಶ್.

''ದಾಖಲೆ ನಿರ್ಮಿಸುವುದರೆಡೆ ನನ್ನ ಗಮನ, ಮುರಿಯುವುದಲ್ಲ''
''ಹೌದು ನಾವು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನು ಎದುರು ನೋಡುತ್ತಿದ್ದೇವೆ. ಆದರೆ ನಾನು ಯಾವಾಗಲೂ ಯಾವುದೇ ದಾಖಲೆಯನ್ನು ಮುರಿಯುವ ಬಗ್ಗೆ ಯೋಚನೆ ಮಾಡುವುದಿಲ್ಲ. ಬದಲಿಗೆ ಹೊಸ ದಾಖಲೆ ಬರೆಯುವ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತೇನೆ. ನಾನು ಸದಾ ನಮ್ಮ ಸಿನಿಮಾಕ್ಕೆ ಎಷ್ಟು ಶಕ್ತಿ ಇದೆ, ನಮ್ಮ ಉದ್ಯಮಕ್ಕೆ ಎಷ್ಟು ಶಕ್ತಿ ಇದೆ. ಹಾಗಾಗಿ ದಾಖಲೆ ಬರೆಯುವ ಬಗ್ಗೆ ಅಷ್ಟೆ ನನ್ನ ಯೋಚನೆ ಇರುತ್ತದೆ. ದಾಖಲೆ ಮುರಿಯುವ ಬಗ್ಗೆ ನಾನು ಯೋಚನೆ ಸಹ ಮಾಡುವುದಿಲ್ಲ'' ಎಂದಿದ್ದಾರೆ ಯಶ್.

''ನಮ್ಮ ಹಿಂದೆ ಬರುವ ಸಿನಿಮಾ, ನಮ್ಮನ್ನು ಬೀಟ್ ಮಾಡಲಿ''
''ಎಲ್ಲರೂ ಹೊಸ ದಾಖಲೆಗಳನ್ನು ಬರೆಯಬೇಕು. ನಮ್ಮ ನಂತರ ಬಿಡುಗಡೆ ಆಗುವ ಸಿನಿಮಾಗಳು ಸಹ ನಮಗಿಂತಲೂ ಹೆಚ್ಚು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡಬೇಕು. ಅವರ ಆಲೋಚನೆ ಸಹ ಹಾಗೆಯೇ ಇರಬೇಕು. ಹಾಗಿದ್ದಾಗ ಮಾತ್ರವೇ ನಾವು ಮುಂದಿನ ಬಾರಿ ಇನ್ನೂ ದೊಡ್ಡ ಗುರಿಯೊಂದಿಗೆ ಸಿನಿಮಾ ಮಾಡಬಹುದು. ಆಗ ಮಾತ್ರವೇ ಎಲ್ಲರೂ ದೊಡ್ಡದನ್ನು ಸಾಧಿಸಲು ಸಾಧ್ಯ'' ಎಂದಿದ್ದಾರೆ ಯಶ್.

ಸಿನಿಮಾ ಚೆನ್ನಾಗಿದ್ದರೆ ಸಾಕು, ಭಾಷೆ ಯಾವುದಾದರೇನು: ಯಶ್
ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಗಡಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯಶ್, ''ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಇದೆಲ್ಲ ಹಳೆಯ ಯೋಚನೆ ಅದನ್ನೆಲ್ಲ ನಾವು ಕೈಬಿಡಬೇಕಿದೆ. ನಾವು ಭಾರತೀಯರು, ಇದು ಭಾರತೀಯ ಚಿತ್ರರಂಗ ಎಂಬುದನ್ನಷ್ಟೆ ನೆನಪಿಟ್ಟುಕೊಂಡು ಕೆಲಸ ಮಾಡಬೇಕಿದೆ. ಸಿನಿಮಾ ಚೆನ್ನಾಗಿದ್ದಾರೆ ಸಾಕು ಭಾಷೆಯಾವುದಾದರೇನು ನೋಡೋಣ. ನಾನೊಬ್ಬ ಸಿನಿಮಾ ವೀಕ್ಷಕನಾಗಿ ಅದನ್ನೇ ಮಾಡುತ್ತೇನೆ. ಪ್ರೇಕ್ಷಕರು ಸಹ ಈ 'ವುಡ್'ಗಳ ಪರಿಕಲ್ಪನೆಯನ್ನು ಬಿಟ್ಟುಬಿಟ್ಟಿದ್ದಾರೆ. ಅವರಿಗೆ ಒಳ್ಳೆಯ ಸಿನಿಮಾ ಅಷ್ಟೆ ಬೇಕು. ಆದರೆ ನಾವದನ್ನು ಹಾಗೆಯೇ ಇಟ್ಟುಕೊಂಡಿದ್ದೇವೆ'' ಎಂದಿದ್ದಾರೆ.


Click it and Unblock the Notifications











