ಸಿದ್ಲಿಂಗು 02ದಲ್ಲಿ ಮೋಹಕತಾರೆ ರಮ್ಯಾ ; ವಿಜಯಪ್ರಸಾದ್ ಹೇಳಿದ ಆ ಅತಿಥಿ ಯಾರು..?
ಚಿತ್ರರಂಗಕ್ಕೆ ಮೋಹಕತಾರೆ ರಮ್ಯಾ ಮರಳಿ ಬರುತ್ತಾರೆ ಅನ್ನುವ ಆಸೆ ಆಗಾಗ ಚಿಗುರೊಡೆಯುತ್ತೆ. ಆದರೆ ಮರು ಕ್ಷಣ ಅಭಿಮಾನಿಗಳಲ್ಲಿ ಮತ್ತದೇ ನೋವು. ಯಾತನೆ. ರಮ್ಯಾ ಮನಸು ಬದಲಾಗಿರುತ್ತೆ. ಚಿತ್ರರಂಗದ ಕಡೆ ಹೊರಳಿದ್ದ ಮನಸು ಮತ್ತೆ ರಾಜಕೀಯದ ಕಡೆ ವಾಲುತ್ತೆ. ಮೊನ್ನೆಯ ಉತ್ತರಕಾಂಡ ಚಿತ್ರದ ವಿಚಾರದಲ್ಲಿಯೂ ಇದೇ ಆಗಿದ್ದು.
ಉತ್ತರಕಾಂಡ ಮೂಲಕ ಮರಳಿ ಬರುವ ಭರವಸೆಯನ್ನ ನೀಡಿ ಆ ನಂತರ ಮತ್ತೆ ನಿರಾಸೆಯನ್ನ ಮಾಡಿದ ರಮ್ಯಾ, ಈಗ ಸಿದ್ಲಿಂಗು ಚಿತ್ರದ ಮುಂದುವರೆದ ಭಾಗಕ್ಕೆ ಬಣ್ಣ ಹಚ್ತಿದ್ದಾರಾ ಅನ್ನುವ ಅನುಮಾನ ಅನೇಕರನ್ನ ಕಾಡುತ್ತಿದೆ. ಅದಕ್ಕೆ ಕಾರಣ.. ಯುಗಾದಿ ಹಬ್ಬ.

ಹೌದು, ಯುಗಾದಿ ಹಬ್ಬದಂದು ನಿನ್ನೆ ಎಲ್ಲರು ಬೇವು-ಬೆಲ್ಲ ತಿನ್ನುವ ಸಮಯದಲ್ಲಿ, ಸಿದ್ದಿಂಗು ಚಿತ್ರದ ಸೃಷ್ಟಿಕರ್ತ ವಿಜಯಪ್ರಸಾದ್, ಹಬ್ಬದ ಶುಭಾಶಯವನ್ನೊತ್ತ ಪೋಸ್ಟರ್‌ವೊಂದನ್ನ ಹಂಚಿಕೊಂಡರು. ಆ ಪೋಸ್ಟರ್ ನಲ್ಲಿದ್ದ ಬೇವು ಬೆಲ್ಲದೊಂದಿಗೆ ಅತಿಥಿಯಾಗಿ ಬಂದರೂ ಬರಬಹುದು. ಅವರ ಹೆಸರಿನ ಮೊದಲ ಅಕ್ಷರ 'ರ' ಎಂಬ ಸಾಲು ಅನೇಕರ ಕುತೂಹಲವನ್ನ ಕೆರಳಿಸಿತು.
ಹೀಗಾಗಿಯೇ ಪೋಸ್ಟರ್ ಹೊರ ಬರುತ್ತಿದ್ದಂತೆ ಊಹಿಸುವ ಆಟಕ್ಕೆ ಮುಂದಾದ ಅನೇಕರು, ಸಿದ್ಲಿಂಗು 02 ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರವನ್ನ ಮಾಡಬಹುದು ಎಂದು ಭವಿಷ್ಯವನ್ನ ಹೇಳುತ್ತಿದ್ದಾರೆ. ಒಳಗೊಳಗೆ ಸಂಭ್ರಮ ಪಡುತ್ತಿದ್ದಾರೆ.

ನಿಜಾ.. ''ರ'' ಹೆಸರಲ್ಲಿರುವ ನಾಯಕಿಯರು ಕನ್ನಡದಲ್ಲಿ ಇನ್ನೂ ಅನೇಕರು ಇದ್ದಾರೆ. ಅದು ರಮ್ಯಾ ಬದಲು ರಕ್ಷಿತಾ ಇರಬಹುದು. ಅಥವಾ ಆರ್ ಫಾರ್ ರಾಧಿಕಾ ಕುಮಾರಸ್ವಾಮಿ ಆಗಿರಬಹುದು ಇಲ್ಲವಾದಲ್ಲಿ ರಾಧಿಕಾ ಪಂಡಿತ್ ಇರಬಹುದು ರಚಿತಾ ರಾಮ್ ಕೂಡ ಆಗಿರಬಹುದು.
ಆದರೂ.. ಅನೇಕರಲ್ಲಿ ರಮ್ಯಾ ಅವರನ್ನೇ ಬೆಳ್ಳಿ ಪರದೆಯ ಮೇಲೆ ನೋಡುವ ಆಸೆ ಇನ್ನೊಮ್ಮೆ ಚಿಗುರೊಡೆದಿದೆ. ಈ ಕಾರಣಕ್ಕೆ ''ಬೇಕೆ ಬೇಕು.. ಸಿದ್ಲಿಂಗು 02 ಚಿತ್ರದಲ್ಲಿ ರಮ್ಯಾ ಬೇಕೆ ಬೇಕು'' ಎಂಬ ಘೋಷಣೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ಕೂಗುತ್ತಿದ್ಧಾರೆ.

ಇನ್ನೂ ಸಿದ್ಲಿಂಗು ಚಿತ್ರದ ಮೂಲಕ ರಮ್ಯಾ ಅನೇಕರ ಹೃದಯಕ್ಕೆ ಇನ್ನೂ ಹತ್ತಿರವಾಗಿದ್ದರು. ಖುದ್ದು ರಮ್ಯಾ ಅವರಿಗೂ ಕೂಡ ಸಿದ್ಲಿಂಗು ಚಿತ್ರದ ಮಂಗಳಾ ಪಾತ್ರ ಅಚ್ಚು ಮೆಚ್ಚು. ಎಲ್ಲೆಲ್ಲೋ ಓಡುವ ಮನಸೆ ಹಾಡು ಇವತ್ತು ಕೂಡ ಅನೇಕ ಸಿನಿಮಾ ಪ್ರೇಮಿಗಳ ಪಾಲಿನ ಫೇವರೆಟ್ ಗೀತೆಯಲ್ಲೊಂದು. ಹೀಗಾಗಿ ನಾಯಕಿಯ ಪಾತ್ರವನ್ನ ಮಾಡದೇ ಇದ್ದರೂ ಪರವಾಗಿಲ್ಲ. ಕೊನೆ ಪಕ್ಷ ಹೀಗೆ ಬಂದು ಹಾಗೇ ಹೋಗಿ ಎಂದು ರಮ್ಯಾ ಅವರಲ್ಲಿಯೂ ಕೂಡ ಅನೇಕರು ಮನವಿಯನ್ನ ಮಾಡಿಕೊಳ್ಳುತ್ತಿದ್ದಾರೆ.
ರಮ್ಯಾ ಬದಲು ಸಿದ್ಲಿಂಗು -02 ದಲ್ಲಿ ಸೋನು ಗೌಡ
ಅಂದ್ಹಾಗೇ ರಮ್ಯಾ ಬದಲು ಸೋನು ಗೌಡ ಈ ಬಾರಿ ಚಿತ್ರದಲ್ಲಿದ್ದಾರೆ. ಇನ್ನೂ ಯೋಗಿ ಈ ಬಾರಿ ಇಲ್ಲಿ ಹೆಚ್ಚು ಪೋಲಿ ಡೈಲಾಗ್ ಗಳನ್ನ ಹೇಳುವುದಿಲ್ಲ. ಆ ಭರವಸೆಯನ್ನ ಚಿತ್ರದ ಮುಹೂರ್ತ ಸಮಾರಂಭದಲ್ಲಿಯೇ ನಿರ್ದೇಶಕ ವಿಜಯ ಪ್ರಸಾದ್ ಕೊಟ್ಟಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಈ ಕಾರಣಕ್ಕೆ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲ ಇದ್ದೇ ಇದೆ
ಒಟ್ನಲ್ಲಿ ವಿಜಯಪ್ರಸಾದ್ ಸದ್ಯಕ್ಕೆ ತೆರೆದಿದೆ ಮನೆ ಓ ಬಾ ಅತಿಥಿ ಎಂದು ಹೇಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹೆಸರಿನ ಮೊದಲ ಅಕ್ಷರ ''ರ'' ಎಂದು ತಲೆಗೆ ಹುಳವನ್ನೂ ಬಿಟ್ಟಿದ್ದಾರೆ. ಆ ಅತಿಥಿ ರಮ್ಯಾನೇ ಆಗಿರಲಿ ಅನ್ನುವುದೇ ಅನೇಕರ ಆಶಯ. ನಿಜಕ್ಕೂ ರಮ್ಯಾ ಸಿದ್ಲಿಂಗುಗಾಗಿ ಬರುತ್ತಾರಾ ಉತ್ತರ ಸದ್ಯದಲ್ಲಿಯೇ ಸಿಗಲಿದೆ


Click it and Unblock the Notifications











