Loksabha Election 2024 ; ರಮ್ಯಾ ಮೇಡಂ ಈ ಬಾರಿಯಾದರೂ ವೋಟ್ ಹಾಕ್ತಾರಾ ..?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಕೆಲವರಿಗೆ ಈ ಮಾತು ಅರ್ಥವಾಗುವುದಿಲ್ಲ. ಜನಸಾಮಾನ್ಯರು ಬಿಡಿ, ಸೆಲೆಬ್ರಿಟಿ ಅನಿಸಿಕೊಂಡವರು ಕೂಡ ''Every Vote Matters'' ಎಂಬ ಮಾತನ್ನ ಮರೆತು ಬಿಡ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ರಮ್ಯಾ
ಹೌದು. ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಎಂದಾಕ್ಷಣ ಚಿಕ್ಕ ಮಕ್ಕಳು ರಮ್ಯಾ ಎಂದು ಹೇಳುವ ಅದೊಂದು ಕಾಲವಿತ್ತು. ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಉರುಫ್ ದಿವ್ಯ ಸ್ಪಂದನ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ತನ್ನದೇ ಆದ ಅಭಿಮಾನಿ ಬಳಗವನ್ನು ಭಗ್ನ ಪ್ರೇಮಿಗಳನ್ನು ಒಮ್ಮಿದೊಮ್ಮೆಲೆ ಸೃಷ್ಟಿಸಿಕೊಂಡುಬಿಟ್ಟಿದ್ದರು. ಅದಾದ ಮೇಲೆ ಅದಾವ ಮಾರಿ ಮಸಣಿ ಕಣ್ಣು ಬಿತ್ತೋ ಪಾಪ ಪದ್ಮಾವತಿಗೆ ಕನ್ನಡ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆಯಾಗಿ ಪೂರ್ಣ ಪ್ರಮಾಣದಲ್ಲಿ ರಾಜಕಾರಣದ ಕಡೆ ಮುಖ ಮಾಡಿದರು. ಮೇಲಾಗಿ ನಟಿಯಾಗಿದ್ದ ಅವರು ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡು ಎಲ್ಲೆಡೆ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾದರು

ಇಂಥ ರಮ್ಯಾ ರಾಜಕೀಯಕ್ಕೆ ಬಂದ ನಂತರ, ಪ್ರತಿಬಾರಿ ಮತದಾನದ ಅರಿವು ಮೂಡಿಸುತ್ತಾನೇ ಬಂದಿದ್ದಾರೆ.ಆದರೆ..ಮತಗಟ್ಟೆಯವರೆಗೆ ಬಂದು ಖುದ್ದು ಮತದಾನ ಮಾಡುವುದನ್ನ ರಮ್ಯಾ ಮರೆಯುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ 2018ರ ನಂತರ ರಮ್ಯಾ ಮತದಾನದ ಹಕ್ಕನ್ನ ಚಲಾಯಿಸಿಲ್ಲ.
ಹೌದು.. 2012ರಲ್ಲಿ ಅನಿರೀಕ್ಷಿತವಾಗಿ ರಾಜಕೀಯರಂಗ ಪ್ರವೇಶಿಸಿದ ರಮ್ಯಾ, 2018ರಿಂದ ಈವರೆಗೆ ಮತ ಚಲಾಯಿಸಿಲ್ಲ. ಎರಡು ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ನಡೆದಿದ್ದರೂ ಕೂಡ ಮಂಡ್ಯಗೆ ಬಂದು ಮತ ಹಾಕಲಿಲ್ಲ.

ಮಂಡ್ಯದ ವಿದ್ಯಾನಗರದ ಮತಗಟ್ಟೆ ವ್ಯಾಪ್ತಿಯ ಮತದಾರರಾಗಿರುವ ರಮ್ಯಾ, 2018 ರಿಂದ ಎರಡು ಎಂಎಲ್ ಎ ಚುನಾವಣೆ, ತಲಾ ಒಂದು ಎಂಪಿ ಬೈ ಎಲೆಕ್ಷನ್ ಹಾಗೂ ಸಾರ್ವತ್ರಿಕ ಚುನಾವಣೆ ನಡೆದರು ಕೂಡ ಮತದಾನ ಹಾಕಲು ಬಂದಿಲ್ಲ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯವರೆಗೆ ಬಂದು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರೂ ಕೂಡ ರಮ್ಯಾ ಮತ ಹಾಕದಿರುವುದು, ದಿವ್ಯ ಸ್ಪಂದನ ಅವರ ದಿವ್ಯ ನಿರ್ಲಕ್ಷ್ಯದ ನಡೆಗೆ ಹಿಡಿದ ಕೈಗನ್ನಡಿ
ಇನ್ನೂ ರಮ್ಯಾ ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚೇನು ಮಾತನಾಡಿಲ್ಲ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯವನ್ನೂ ಮಾಡಿಲ್ಲ. ಆದರೆ, ಇದೇ ರಮ್ಯಾ.. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೈಪರ್ ಆಕ್ಟಿವ್ ಆಗಿದ್ದರು. ಲೋಕಸಭಾ ಚುನಾವಣೆಯ ಹಿಂದಿನ ದಿನ ಟ್ವಿಟ್ಟರ್ ನಲ್ಲಿ ''Every vote matters'' ಎಂದು ಬರೆದುಕೊಂಡಿದ್ದರು. ತಮ್ಮ ಟ್ವಿಟ್ಟರ್ ಖಾತೆಯ ಫ್ರೊಫೈಲ್ ಹಾಗೂ ಕವರ್ ಚಿತ್ರವನ್ನು ವೋಟ್ ಫಾರ್ ಕಾಂಗ್ರೆಸ್ ಎಂದು ಬದಲಾಯಿಸಿಕೊಂಡಿದ್ದರು ಕೂಡ.
ದುರಂತ ಅಂದರೆ, ಇಷ್ಟೆಲ್ಲ ಮಾಡಿದ್ದ ರಮ್ಯಾ, ಆ ನಂತರ ತಾವು ಮತದಾನ ಮಾಡುವುದನ್ನ ಮರೆತು ಬಿಟ್ಟಿದ್ದರು. ಈ ಕಾರಣಕ್ಕೆ ಅವತ್ತು ಕೆರಳಿ ಕೆಂಡವಾಗಿದ್ದ ಜನಸಾಮಾನ್ಯರು ಉಪದೇಶ ಮಾಡುವ ನೀವು ಮೊದಲು ಮತದಾನ ಮಾಡಿ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು. ''ಮೊದ್ಲು ನೀವು ವೋಟ್ ಹಾಕೋದನ್ನು ಕಲಿಯಿರಿ, ಆಮೇಲೆ ಬೇರೆಯವರಿಗೆ ಹೇಳಲು ಬನ್ನಿ'' ಎಂದು ಕಿಡಿ ಕಾರಿದ್ದರು.ಸಿಕ್ಕಾಪಟ್ಟೆ ಟ್ರೋಲ್‌ಗೆ ಕೂಡ ಒಳಗಾಗಿದ್ದರು ರಮ್ಯಾ.
ಹೀಗೆ ಕಾಲ ..ಕಾಲಕ್ಕೆ.. ಮತದಾನದಿಂದ ಅಂತರ ಕಾಪಾಡಿಕೊಂಡು ಬಂದ ಇತಿಹಾಸವನ್ನ ಹೊಂದಿರುವ ರಮ್ಯಾ ಈ ಬಾರಿಯಾದರೂ ಮತದಾನ ಮಾಡ್ತಾರಾ ಅನ್ನುವ ಪ್ರಶ್ನೆ ಈಗ ಎದ್ದಿದೆ. ಈ ಬಾರಿಯಾದರೂ ಮಾಜಿ ಸಂಸದೆ ಕೂಡ ಆಗಿರುವ ರಮ್ಯಾ, ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುತ್ತಾರಾ, ಯುವ ಜನತೆಗೆ ಮಾದರಿಯಾಗ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











