ಮಂಡ್ಯ ಮಹಾಯುದ್ಧ ; ರಾಜಕೀಯದ ರಣರಂಗಕ್ಕೆ ಮೋಹಕ ತಾರೆ ರಮ್ಯಾ ರೀ ಎಂಟ್ರಿ ?
ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನ ಹಾಗೂ ಭಗ್ನ ಪ್ರೇಮಿಗಳನ್ನ ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.
2012ರಲ್ಲಿ ಅನಿರೀಕ್ಷಿತವಾಗಿ ರಾಜಕೀಯ ರಂಗ ಪ್ರವೇಶಿಸಿದ ರಮ್ಯಾ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸೋತು ಇನ್ನೊಮ್ಮೆ ಗೆದ್ದು ಆ ನಂತರ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದರು. ಮಂಡ್ಯ ತೊರೆದು ಡೆಲ್ಲಿ ಸೇರಿದ್ದರು.

ಆ ನಂತರ ಕೆಲ ಕಾಲ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿ, ಆ ನಂತರ ಅದಕ್ಕೂ ದೀರ್ಘ ದಂಡ ನಮಸ್ಕಾರ ಹಾಕಿದ ರಮ್ಯಾ, ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇದೇ ಸಮಯದಲ್ಲಿ ರಮ್ಯಾ ರಾಜಕೀಯದ ರಣರಂಗಕ್ಕೆ ಮತ್ತೆ ಮರಳಿ ಬರಲಿದ್ದಾರೆ ಎಂಬ ಗುಸು ಗುಸು ಪಿಸು ಪಿಸು ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ. ಇದಕ್ಕೆ ಕಾರಣ ಮತ್ತದೇ ಮಂಡ್ಯ
ಹೌದು, ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮಂಡ್ಯದ ಮಹಾಯುದ್ಧದಲ್ಲಿ ಕಣಕ್ಕಿಳಿಯಲಿರುವ ಬಾಹುಬಲಿ ಯಾರು ಎಂಬ ಚರ್ಚೆ ಮೂರು ಪಕ್ಷದಲ್ಲಿಯೂ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹೋರಾಟಕ್ಕೆ ಕ್ಷೇತ್ರಗಳ ಪಟ್ಟಿ ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಎರಡೂ ಪಕ್ಷಗಳು ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ನಡೆ ಮತ್ತು ನಡವಳಿಕೆಯನ್ನು ಗಮನಿಸಿದಾಗ ಮಾತ್ರ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯುವ ಅನುಮಾನಗಳು ದಟ್ಟವಾಗುತ್ತಿವೆ.

ನಿಜಾ. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಎರಡರಲ್ಲಿಯೂ ಜೆ.ಡಿ.ಎಸ್ ಸೋಲನ್ನ ಕಂಡಿದೆ. ಆದರೂ ಇವತ್ತಿಗೂ ಕೂಡ ಮಂಡ್ಯ ಜೆ.ಡಿ.ಎಸ್ ನ ಭದ್ರಕೋಟೆ ಎಂದೇ ಕರೆಯಲಾಗುತ್ತಿದೆ. ಈ ಕಾರಣಕ್ಕಾಗಿ ಮಂಡ್ಯದಲ್ಲಿ ಕಳೆದು ಹೋದ ವರ್ಚಸ್ಸನ್ನು ಮಂಡ್ಯದಲ್ಲೇ ಪಡೆದುಕೊಳ್ಳುವ ಉತ್ಸಾಹದಲ್ಲಿ ಜೆಡಿಎಸ್ ಇದೆ. ಇದಕ್ಕೆ ಪೂರಕವಾಗಿ ಆಗಿರುವ ಮಾತುಕಥೆಯಂತೆ ಮಂಡ್ಯ ಕ್ಷೇತ್ರವನ್ನ ಈ ಬಾರಿ ಜೆ,ಡಿ.ಎಸ್ ಗೆ ಬಿಜೆಪಿ ಬಿಟ್ಟುಕೊಡಲಿದೆ ಎಂಬ ಮಾತು ಕೂಡ ಕಾಡ್ಗಿಚ್ಚಿನಂತೆ ಹಬ್ಬಿದೆ.
ಜೆಡಿಎಸ್ ನಿಂದ ಮಂಡ್ಯ ರಣರಂಗಕ್ಕೆ ಧುಮುಕುವ ಅಭ್ಯರ್ಥಿ ಯಾರು ಎಂಬ ಗುಟ್ಟು ಇನ್ನೂ ರಟ್ಟಾಗದೇ ಇದ್ದರೂ, ಈ ವಿಚಾರದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಅಸಮಾಧಾನ ಇದ್ದೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಸುಮಲತಾ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಅವರು ಸುಲಭದಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವ ಲಕ್ಷಣಗಳು ಕಾಣುತ್ತಿಲ್ಲ.

ಆದರೂ ಹಾಗೊಂದು ವೇಳೆ ಬಿಜೆಪಿ ಹೈಕಮಾಂಡ್ ಸುಮಲತಾ ಅವರ ಮನವೊಲಿಸಿ ಬದಲಿ ವ್ಯವಸ್ಥೆ ಮಾಡಿದ್ದೇ ಆದಲ್ಲಿ, ಈಗಾಗಲೇ ಸುದ್ದಿಯಲ್ಲಿರುವ ಹಾಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಸುಮಲತಾ ಅವರನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರವನ್ನೂ ಅನೇಕರು ಹಾಕ್ತಿದ್ದಾರೆ.
ಕಾಂಗ್ರೆಸ್ ನಿಂದ ಮಂಡ್ಯ ಅಖಾಡಕ್ಕೆ ಕಾಲಿಡ್ತಾರಾ ಮೋಹಕತಾರೆ ರಮ್ಯಾ..?
ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಮಂಡ್ಯ ವಿಚಾರದಲ್ಲಿ ಕಾಂಗ್ರೆಸ್ ಗೆ ಇನ್ನೂ ಸ್ಪಷ್ಟವಾದ ನಿಲುವು ಇದ್ದಂತೆ ಇಲ್ಲ.ಚೆಲುವರಾಯ ಸ್ವಾಮಿ ಅವರನ್ನ ಹೊರತು ಪಡಿಸಿದರೆ, ಕಾಂಗ್ರೆಸ್ ಗೂ ಬೇರೆ ಆಯ್ಕೆಗಳಿದ್ದಂತೆ ತೋರುತ್ತಿಲ್ಲ. ಇದೇ ಕಾರಣಕ್ಕಾಗಿ ಮಾಜಿ ಸಂಸದೆ ರಮ್ಯಾ ಅವರ ಮನವೊಲಿಕೆಗೆ ಪ್ರಯತ್ನಗಳು ನಡೆದಿವೆ ಎಂಬ ಮಾತು ರಾಜಕೀಯದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಆದರೆ ರಾಜಕೀಯದಲ್ಲಿ ರಮ್ಯಾ ಅವರಿಗೆ ಮೊದಲಿದ್ದ ಆಸಕ್ತಿ ಈಗಿದ್ದಂತೆ ಇಲ್ಲ. ಇದಕ್ಕೆ ಪುರಾವೆ ಎಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವಂತೆ ಆಹ್ವಾನ ಬಂದರೂ ಕೂಡ ರಮ್ಯಾ ತಿರಸ್ಕರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರವನ್ನೂ ಮಾಡಿದ್ದರು.

ಏತನ್ಮಧ್ಯೆ 15 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ಅದರಲ್ಲಿ ಮಂಡ್ಯಕ್ಕೆ ಅಚ್ಚರಿಯ ಅಭ್ಯರ್ಥಿಯಾಗಿ ಸ್ಟಾರ್ ಬಿಲ್ಡರ್ ಮಂಜು ಎಂಬವರ ಹೆಸರಿದೆ. ಬಹುತೇಕ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು. ಒಂದು ವೇಳೆ ಕುಮಾರಸ್ವಾಮಿ ಅವರು ಕಣಕ್ಕಿಳಿದರೆ ಮಾತ್ರ ಮರುಪರಿಶೀಲನೆ ಮಾಡುವ ಬಗ್ಗೆ ಪಕ್ಷ ತೀರ್ಮಾನ ಕೈಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳ್ತಿವೆ. ಯಾರಿಗೆ ಗೊತ್ತು, ಒಂದು ವೇಳೆ ಮೈತ್ರಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸ್ಫರ್ಧೆ ಖಚಿತವಾದ್ರೆ, ಕಾಂಗ್ರೆಸ್ ಪಕ್ಷದಿಂದ ರಮ್ಯಾ ಕಣಕ್ಕೆ ಇಳಿದರು ಇಳಿಯಬಹುದು. ಈ ಸಾಧ್ಯತೆಯನ್ನ ತಳ್ಳಿ ಹಾಕುವಂತೆ ಇಲ್ಲ
ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಮರಳಿರುವ ರಮ್ಯಾ, ಇನ್ನೇನು ಡಾಲಿ ಧನಂಜಯ್ ಅಭಿನಯದ ಉತ್ತರಾಕಾಂಡ ಚಿತ್ರಕ್ಕೆ ಬಣ್ಣ ಹಚ್ಚಬೇಕು. ಅಷ್ಟರಲ್ಲಿ ರಾಜಕೀಯಕ್ಕೆ ರಮ್ಯಾ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರ್ತಿದೆ. ರಾಜಕೀಯದಲ್ಲಿ ಎಷ್ಟು ಹೊತ್ತಿಗ ಏನು ಬೇಕಾದರೂ ಸಂಭವಿಸುವ ಸಾಧ್ಯತೆಗಳಿರುವುದರಿಂದ ಯಾವುದನ್ನೂ ಹಾಗೂ ಯಾರನ್ನೂ ಇಲ್ಲಿ ಕಡೆಗಣಿಸಲು ಸಾಧ್ಯ ಇಲ್ಲ.

ಮಂಡ್ಯ ಎಂದರೆ ಹಾಗೆ ಅಲ್ಲಿ ಚುನಾವಣೆಗೆ ನಿಲ್ಲಲು ಎಲ್ಲರೂ ತಾಮುಂದು ನಾಮುಂದು ಎಂದು ಮುಂದೆ ಬರುತ್ತಾರೆ. ಈ ಕ್ಷೇತ್ರಕ್ಕೆ ಹಾಗೂ ಚಿತ್ರರಂಗಕ್ಕೆ ಅವಿನಾಭವ ಸಂಬಂಧ ಇದೆ. ಈ ಕ್ಷೇತ್ರದಿಂದಲೇ ದಿವಂಗತ ಅಂಬರೀಷ್ ಸಹ ಕಣಕ್ಕೆ ಇಳಿದಿದ್ದರು. ಅಲ್ಲದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯ ಸರ್ಕಾರದಲ್ಲಿ ಮಂತ್ರಿ ಸಹ ಆಗಿದ್ದರು. ಇವರ ನಿಧನದ ಬಳಿಕ ಇವರ ಪತ್ನಿ ಹಾಗೂ ನಟಿ ಸುಮಲತಾ ಮಂಡ್ಯ ಜನರ ಆರ್ಶಿವಾದ ಕೇಳಿದ್ದರು. ಅಂತೆಯೆ ಅವರು ಡೆಲ್ಲಿ ಲೋಕಸಭೆ ಪ್ರವೇಶಿಸಿದರು. ಈಗ ಮತ್ತೊಮ್ಮೆ ಬಣ್ಣದ ಲೋಕದಿಂದ ಸ್ಟಾರ್ ನಟಿಯೊಬ್ಬರು ಅಖಾಡಕ್ಕೆ ಇಳಿಯುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.


Click it and Unblock the Notifications










