ಯುವ ಚಿತ್ರದ ಮೂಲಕ ಮತ್ತೆ ಮೋಡಿ ಮಾಡ್ತಾರಾ ಕಾಂತಾರ ಚೆಲುವೆ ಸಪ್ತಮಿ ಗೌಡ..?
ಈ ಬಣ್ಣದ ಲೋಕದಲ್ಲಿ ಏನ್ ಬೇಕಾದರೂ ಆಗಬಹುದು. ಯಾಕೆಂದರೆ ಎಲ್ಲವೂ ಇಲ್ಲಿ ಅದೃಷ್ಟದ ಆಟ. ಈ ಅದೃಷ್ಟದ ಜೊತೆ ಅಭಿನಯದ ಕೌಶಲ್ಯವೂ ಇದ್ದರೆ ಸೋನೆ ಪೆ ಸುಹಾಗ. ಸಪ್ತಮಿ ಗೌಡ ಇದಕ್ಕೆ ಅತ್ಯುತ್ತಮ ಉದಾಹರಣೆ
ಹೌದು, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾದವರು ಸಪ್ತಮಿ ಗೌಡ. ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನವನ್ನ ಸಪ್ತಮಿ ಸೆಳೆದರೂ, ಎರಡು ವರ್ಷ ಖಾಲಿ ಕೂರಬೇಕಾಯಿತು. ಯಾಕೋ ಕನ್ನಡ ಚಿತ್ರರಂಗ ಇವರ ಕಡೆ ನೋಡಲೇ ಇಲ್ಲ.

ಆದರೆ ಅದ್ಯಾವಾಗ ಕಾಂತಾರ ಬಂತು. ಆಗ ಚಿತ್ರರಂಗಕ್ಕೆ ಚಿತ್ರರಂಗವೇ ನಿಬ್ಬೇರಗಾಯಿತು. ಸೀರೆಯುಟ್ಟು ಮಾದಕವಾಗಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ, ಖಾಕಿ ತೊಟ್ಟಾಗ ಮೋಹಕವಾಗಿ ನಟಿಸಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸಪ್ತಮಿ ಗೌಡ ಅವರ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು.
ಕಾಂತಾರದ ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಾನೇ, ಬಾಲಿವುಡ್ ಗೆ ತಲುಪಿದ ಸಪ್ತಮಿ ಗೌಡ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿಯೂ ನಟಿಸಿದರು. ನಾನಾ ಪಾಟೇಕರ್, ಅನುಪಮ್ ಖೇರ್ ಅವರಂತಹ ದಿಗ್ಗಜರ ಜೊತೆ ತೆರೆ ಹಂಚಿಕೊಂಡು ಸಂಭ್ರಮಿಸಿದರು.
ಇಂಥ ಸಪ್ತಮಿ ಗೌಡ ಸದ್ಯಕ್ಕೆ ಯುವ ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಇವತ್ತು ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಇನ್ನೂ ಯುವ ಕೇವಲ ಯುವರಾಜ್ ಕುಮಾರ್ ಅವರಿಗಷ್ಟೇ ಅಲ್ಲ, ಸಪ್ತಮಿ ಗೌಡ ಅವರಿಗೂ ತುಂಬಾನೇ ವಿಶೇಷವಾದ ಸಿನಿಮಾ. ಯಾಕೆಂದರೆ ಕಾಂತಾರ ನಂತರ ಸಪ್ತಮಿ ಅಭಿನಯಿಸಿರುವ ಕನ್ನಡ ಸಿನಿಮಾ ಇದು. ಇನ್ನೂ ಕಾಂತಾರದಲ್ಲಿ ತಮ್ಮ ಅಭಿನಯದಿಂದ ಮನಸೂರೆಗೊಂಡಿದ್ದ ಸಪ್ತಮಿ ಇಲ್ಲಿ ಯಾವ ಜಾದೂ ಮಾಡಿದ್ದಾರೆ ಅನ್ನುವ ಕುತೂಹಲ ಕೂಡ ಎಲ್ಲರಲ್ಲಿ ಇದೆ.

ಹೀಗೆ ನಾನಾ ಕಾರಣಗಳಿಂದ ವಿಶೇಷ ಬಿರುದು ಪಡೆದಿರುವ ಯುವ ಸಿನಿಮಾದ ಮೂಲಕ ಸಪ್ತಮಿ ಗೌಡ ಅವರ ವೃತ್ತಿ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳುವ ಭರವಸೆ ಇದೆ. ಇದಕ್ಕೆ ಪೂರಕವಾಗಿ ಚಿತ್ರದ ಟ್ರೇಲರ್ ಕೂಡ ಮೂಡಿ ಬಂದಿದೆ. ಯುವ, ಸಪ್ತಮಿ ಗೌಡ ವೃತ್ತಿ ಬದುಕಿನ ಮತ್ತೊಂದು ಮೈಲಿಗಲ್ಲಾಗುವ ಎಲ್ಲ ಲಕ್ಷಣ ಕಂಡು ಬರುತ್ತಿವೆ.
ಇನ್ನೂ ಟ್ರೇಲರ್ ನೋಡ್ತಿದ್ದರೆ, ಸಪ್ತಮಿ ಗೌಡ ಇಲ್ಲಿ ಕೇವಲ ಮರವನ್ನಷ್ಟೇ ಸುತ್ತಿಲ್ಲ ಬದಲಿಗೆ ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನೂ ಮಾಡಿದ್ದಾರೆ ಎನ್ನುವ ಸುಳಿವನ್ನೂ ಚಿತ್ರದ ಟ್ರೇಲರ್ ನೀಡಿದೆ.
ಒಟ್ಟಾರೆಯಾಗಿ ಯುವ ಚಿತ್ರದ ಮೂಲಕ ಸಪ್ತಮಿ ಗೌಡ ಪ್ರಬುದ್ದ ನಟಿಯಾಗಿ ಹೊರ ಹೊಮ್ಮುವ ನಿರೀಕ್ಷೆಗಳಿವೆ. ಸಪ್ತಮಿ ಗೌಡ ಹೆಸರನ್ನ ಯುವ ಇನ್ನಷ್ಟು ಪಸರಿಸುವ ಭರವಸೆಯೂ ಇದೆ. ಈ ನಿರೀಕ್ಷೆ ಹಾಗೂ ಭರವಸೆಗಳು ಹುಸಿಯಾಗದೇ ಇರಲಿ, ಯುವ ಚಿತ್ರದ ಮೂಲಕ ತಮ್ಮ ಸಾಮರ್ಥ್ಯವನ್ನ ಸಪ್ತಮಿ ಗೌಡ ಇನ್ನೊಮ್ಮೆ ಪ್ರದರ್ಶಿಸಿ ಜನ ಮನ ಗೆಲ್ಲಲಿ ಅನ್ನುವುದೇ ಕನ್ನಡ ಕಲಾಭಿಮಾನಿಗಳ ಆಶಯ


Click it and Unblock the Notifications











