ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಯಶ್, ಸುದೀಪ್ ಪ್ರಚಾರ?
ಮತ್ತೆ ಮಂಡ್ಯ ಲೋಕಸಭೆ ಚುನಾವಣ ಅಖಾಡ ರಂಗೇರುತ್ತಿದೆ. 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಚುನಾವಣೆ ಎದುರಿಸಿದ್ದರು. ಜೆಡಿಎಸ್ ಅಭ್ಯರ್ಥಿ ನಟ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಗೆದ್ದು ಬೀಗಿದ್ದರು. ಆಕೆಯ ಪರ ನಟ ದರ್ಶನ್ ಹಾಗೂ ಯಶ್ ಭರ್ಜರಿ ಪ್ರಚಾರ ನಡೆಸಿದ್ದರು.
ಈ ಬಾರಿ ಲೋಕಸಭಾ ಚುನಾವಣೆಯ ಸಂಪೂರ್ಣ ಚಿತ್ರಣ ಬದಲಾಗಿದೆ. ಕಾರಣ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಹಾಗಾಗಿ ಈ ಬಾರಿ ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುತ್ತಾರಾ? ಟಿಕೆಟ್ ಸಿಗುತ್ತಾ? ಎನ್ನುವ ಚರ್ಚೆ ಶುರುವಾಗಿದೆ.

ಬಿಜೆಪಿ ಕೂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಿದ್ಧವಾಗಿದೆ. ಆದರೆ ಶತಾಯಗತಾಯ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಂಡು ಅಲ್ಲೇ ಚುನಾವಣೆಗೆ ಸ್ಪರ್ಧಿಗಳು ಸುಮಲತಾ ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ(ಫೆಬ್ರವರಿ 26) ತಮ್ಮ ನಿವಾಸದಲ್ಲಿ ಮಂಡ್ಯ ರಾಜಕೀಯ ಮುಖಂಡರ ಸಭೆ ನಡೆಸಿದರು. ನಟ ದರ್ಶನ್ ಸಹ ಭಾಗಿ ಆಗಿದ್ದರು.
ಸಭೆಯ ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮಗಳ ಜೊತೆ ಮಾತನಾಡಿದರು. "ಮಂಡ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಈಗ ಪೂರಕ ವಾತಾವರಣ ಇದೆ. ಮಂಡ್ಯದ ಮುಖಂಡರು ನಮ್ಮ ಜೊತೆ ಚರ್ಚಿಸಿದ್ದಾರೆ. ಇಲ್ಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾವು ಬಂಬಲಿಸುತ್ತೇವೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕೊಟ್ಟೋಣ, ಬಾವುಟ ಹಾರಿಸೋಣ ಎಂದಿದ್ದಾರೆ. ಬೆಂಬಲಿಗರು ಯಾವುದೇ ಕಾರಣಕ್ಕೂ ಮಂಡ್ಯ ಬಿಡಬೇಡಿ ಎಂದಿದ್ದಾರೆ" ಎಂದು ಸುಮಲತಾ ಹೇಳಿದ್ದಾರೆ.
ಮಂಡ್ಯ ಬಿಟ್ಟರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧಿಸಬಹುದು ಎನ್ನುವ ಗುಸುಗುಸು ಕೂಡ ಶುರುವಾಗಿದೆ. ಇದೆಲ್ಲದರ ನಡುವೆ ಸುಮಲತಾ ಪರ ಈ ಬಾರಿಗೂ ನಟ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಕಳೆದ ಬಾರಿ ಇವರಿಬ್ಬರ ಬೆಂಬಲ ಸುಮಲತಾ ಗೆಲುವಿಗೆ ಸಹಕಾರಿಯಾಗಿತ್ತು.

ಈ ಬಾರಿ ದರ್ಶನ್ ನಿಮ್ಮ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯಿಸಿದರು. "ದರ್ಶನ್ಗೆ ಯಾವುದೇ ಪಕ್ಷದ ಹಂಗಿಲ್ಲ, ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಹೀಗೆ ವಿವಿಧ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಈ ಬಾರಿಯೂ ಸಹ ಅವರು ನನ್ನ ಪರವಾಗಿ ಪ್ರಚಾರಕ್ಕೆ ಬರ್ತಾರೆ. ಪಕ್ಷ ಯಾವುದಾದರೂ ಸರಿಯೇ ನೀವು ಮುಖ್ಯ ನಿಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತೀನಿ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಸುಮಲತಾ ತಿಳಿಸಿದ್ದಾರೆ.
ಇನ್ನು ದರ್ಶನ್ ಜೊತೆ ಯಶ್ ಕೂಡ ಪ್ರಚಾರದ ಕಣಕ್ಕೆ ಇಳಿಯುತ್ತಾರಾ? ಎನ್ನುವ ಪ್ರಶ್ನೆಗೆ "ಯಶ್ ಬಳಿ ಈ ಬಗ್ಗೆ ನಾನಿನ್ನೂ ಮಾತನಾಡಿಲ್ಲ. ಯಶ್ ಲಂಡನ್‌ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಅವರೊಟ್ಟಿಗೆ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಮುಂದೆ ಚರ್ಚಿಸುತ್ತೇನೆ" ಎಂದರು. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಬೆಂಬಲಿಸಿದ್ದರು. ಈ ಬಾರಿ ಸಮಲತಾ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೆ ಸುದೀಪ್ ಕೂಡ ಪ್ರಚಾರ ನಡೆಸುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಸುದೀಪ್ ಅವರು ನಿಮ್ಮ ಪರ ಪ್ರಚಾರ ಮಾಡುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸುಮಲತಾ ನಕ್ಕು ಸುಮ್ಮನಾದರು.
ಇತ್ತೀಚೆಗೆ ಪಾನಿಪುರಿ ಕಿಟ್ಟಿ ಜಿಮ್ ಉದ್ಘಾಟನೆ ಸಮಾರಂಭಕ್ಕೆ ನಟ ಯಶ್ ಬಂದಿದ್ದರು. ಈ ವೇಳೆ ಸುಮಲತಾ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಯಶ್ ಉತ್ತರ ನೀಡಿರಲಿಲ್ಲ. ನನ್ನ ಸಂಪೂರ್ಣ ಗಮನ ಸಿನಿಮಾ ಕಡೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಪ್ರಚಾರಕ್ಕೆ ಹೋಗುವಂತಿದ್ದರೆ ಪ್ರತಿಕ್ರಿಯಿಸುತ್ತಿದ್ದರು ಎನ್ನುವ ಚರ್ಚೆ ಶುರುವಾಗಿದೆ.
ಮಂಡ್ಯದಲ್ಲಿ ಜೆಡಿಎಸ್‌ಗೆ ಟಿಕೆಟ್ ಸಿಗುವ ಬಗ್ಗೆ ನಟ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. "ಈ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಕೇಂದ್ರ ನಾಯಕರು, ರಾಷ್ಟ್ರೀಯ ನಾಯಕರು ಈ ಬಗ್ಗೆ ತೀರ್ಮಾನ ಕೈಒಳ್ಳುತ್ತಾರೆ" ಎಂದು ಹೇಳಿದ್ದಾರೆ.


Click it and Unblock the Notifications











