ಮತ್ತೆ ಬಿಗ್ ಬಾಸ್‌ಗೆ ರಾಯಲ್ ಎಂಟ್ರಿ ನೀಡಿದ ಬಾದ್‌ಶಾ ? ರೂಪೇಶ್ ರಾಜಣ್ಣ ಹೇಳಿದ್ದೇನು...?
ಸುದೀಪ್.. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್.
ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಬಿಗ್ ಬಾಸ್ ಕೇವಲ ಸೈಡ್ ಪ್ರಾಜೆಕ್ಟ್ ಅಲ್ಲ. ಬದಲಿಗೆ ಅದು ಅವರ ಎರಡನೇ ಮನೆ. ಈ ವರ್ಷ ಬಿಗ್ ಬಾಸ್ ನ ಹನ್ನೊಂದನೇ ಸೀಸನ್ ಆರಂಭವಾಗುವ ಮುನ್ನ ಖುದ್ದು ಸುದೀಪ್ ಈ ಮಾತನ್ನು ಹೇಳಿದ್ದರು ಕೂಡ.

ಆದರೆ ಈಗ ಸುದೀಪ್ ತಮ್ಮ ಬದುಕಿನ ಬಹುಮುಖ್ಯ ಭಾಗವಾದ ಬಿಗ್ ಬಾಸ್‌ನ ತೊರೆಯಲು ಮುಂದಾಗಿದ್ದಾರೆ. ಸಹಜವಾಗಿ ಸುದೀಪ್ ಅವರ ನಡೆಯಿಂದ ಅನೇಕರು ಬೇಸರಗೊಂಡಿದ್ದಾರೆ. ಕಾರ್ಯಕ್ರಮದಿಂದ ಸುದೀಪ್ ಹೊರ ಬರಲು ನಿರ್ಧಾರ ಮಾಡಿದ್ದಾದರೂ ಯಾಕೆ ಎನ್ನುವ ಚರ್ಚೆಯನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರೂಪೇಶ್ ರಾಜಣ್ಣ ನಿನ್ನೆ ಸಿಡಿಸಿದ ಬಾಂಬ್ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಬಿಗ್ ಬಾಸ್ ಆಯೋಜಕರಿಂದ ಸುದೀಪ್ ಅವರಿಗೆ ನೋವಾಗಿದೆ ಎಂಬ ಚರ್ಚೆಗೆ ಕೂಡ ಮುನ್ನುಡಿ ಬರೆದಿದೆ.
ಇನ್ನೂ.. ಸುದೀಪ್ ಗೌರವ ಇಲ್ಲದ ಕಡೆ ಒಂದು ಕ್ಷಣ ಕೂಡ ಇರುವವರಲ್ಲ. ಯಾಕೆಂದರೆ ಸುದೀಪ್ ವ್ಯಕ್ತಿಯಾಗಿ ಗಳಿಸಿರುವ ಜನಪ್ರಿಯತೆಯ ಅಂಥದ್ದು. ಹೀಗಾಗಿಯೇ ಸುದೀಪ್ ಅವರ ಸಹನೆಯನ್ನು ಮೀರಿ ಅವರನ್ನು ನಡೆಸಿಕೊಳ್ಳಲಾಗಿದೆಯಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದರ ನಡುವೆ ಈಗ ರೂಪೇಶ್ ರಾಜಣ್ಣ ಸುದೀಪ್ ಬಿಗ್ ಬಾಸ್ ನ ಮುಂದುವರೆಸಬಹುದು ಎಂಬ ಅರ್ಥದಲ್ಲಿ ಸುಳಿವು ನೀಡಿದ್ದಾರೆ. ಬದಲಾವಣೆಯನ್ನು ಸದ್ಯದಲ್ಲಿಯೇ ನೀವೇ ನೋಡುವಿರಿ ಎಂದು ಹೇಳಿದ್ದಾರೆ.

ಹೌದು, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರೂಪೇಶ್ ರಾಜಣ್ಣ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ಧಾರೆ ಎಂದು ಹೇಳಿದ್ದಾರೆ. ಕನ್ನಡದ ಪರವಾಗಿ ನಿಂತ ಕಿಚ್ಚ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ, ಬದಲಾವಣೆ ನೀವೇ ನೋಡುವಿರಿ ಎಂದು ಹೇಳಿದ್ದಾರೆ. ರೂಪೇಶ್ ರಾಜಣ್ಣ ಅವರ ಈ ಸಾಲುಗಳು ಈಗ ಬಿಗ್ ಬಾಸ್ ಆಯೋಜಕರಿಂದ ಆದ ಆ ಪ್ರಮಾದವಾದರೂ ಏನು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಕುರಿತು ರೂಪೇಶ್ ರಾಜಣ್ಣ ಸ್ಪಷ್ಟವಾಗಿ ವಿವರಣೆಯನ್ನು ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಜಕ್ಕೂ ಆಗಿದ್ದೇನು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಒಟ್ನಲ್ಲಿ ಸದ್ಯಕ್ಕೆ ರೂಪೇಶ್ ರಾಜಣ್ಣ ಬಿಗ್ ಬಾಸ್ ಆಯೋಜಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಾಗಿ ಹೇಳಿದ್ಧಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಬಿಗ್ ಬಾಸ್‌ನಿಂದ ದೂರವಾಗುವುದಾಗಿ ಹೇಳಿದ್ದ ಸುದೀಪ್, ತಮ್ಮ ಮನಸು ಬದಲಿಸುತ್ತಾರಾ ಎನ್ನುವ ಕುತೂಹಲ ಗರಿಗೆದರಿದೆ. ಸುದೀಪ್ ತಮ್ಮ ನಿರ್ಧಾರವನ್ನು ಬದಲಿಸಿ ಮುಂದಿನ ವರ್ಷ ಕೂಡ ಬಿಗ್ ಬಾಸ್‌ನ ವಾರದ ಕಥೆಯನ್ನು ಹೇಳಬಹುದು ಎಂಬ ಆಶಾಭಾವನೆ ಸುದೀಪ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳಲ್ಲಿ ಮೂಡಿದೆ. ಈ ವಿಚಾರವಾಗಿ ಸುದೀಪ್ ಪ್ರತಿಕ್ರಿಯೆ ನೀಡುತ್ತಾರಾ..? ತಮ್ಮ ನಿರ್ಧಾರ ಬದಲಿಸುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











