ಕಾವೇರಿ ಬಗ್ಗೆ ಮಾತನಾಡಿದ ಸಿಂಬು ಕನ್ನಡ ಸಿನಿಮಾ ಮಾಡ್ತಾರಾ?
ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ತಮಿಳು ನಟ ಸಿಂಬು ಮಾತನಾಡಿದ್ದರು. ''ನೀವು ಬಳಸಿ ಉಳಿದ ನೀರನ್ನು ನಮಗೆ ಕೊಡಿ. ಕನ್ನಡಿಗರು ಒಂದು ಲೋಟ ನೀರಿನ ವಿಡಿಯೋ ಮಾಡಿ'' ಎಂದಿದ್ದರು. ಅದೇ ರೀತಿ ನಿನ್ನೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ #uniteforhumanity ಹ್ಯಾಷ್ ಟ್ಯಾಗ್ ಬಳಸಿ ಒಂದು ಲೋಟ ನೀರು ನೀಡುವ ವಿಡಿಯೋ ಮಾಡಿದ್ದರು.
ಸಿಂಬು ಮಾತು ಕನ್ನಡಿಗರ ಮನ ಮುಟ್ಟಿತ್ತು. ತಮಿಳುನಾಡಿನಲ್ಲಿ ನಿಂತು ಈ ರೀತಿ ಮಾತನಾಡಿದ ಸಿಂಬು ಧೈರ್ಯವನ್ನು ಎಲ್ಲರು ಮೆಚ್ಚಿಕೊಂಡರು. ಆದರೆ ಕಾವೇರಿ ಬಗ್ಗೆ ಮಾತನಾಡಿದ್ದ ಈ ನಟ ಈಗ ಕನ್ನಡ ಸಿನಿಮಾ ಮಾಡುವ ಸಾಧ್ಯತೆ ಇದೆ. ಕನ್ನಡದಲ್ಲಿ ಬರುತ್ತಿರುವ 'ಇರುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದಲ್ಲಿ ಸಿಂಬು ನಟಿಸುತ್ತಾರ ಎನ್ನುವ ಕುತೂಹಲ ಮೂಡಿದೆ.

'ಇರುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಚಿತ್ರದ ನಿರ್ದೇಶಕ ಕಾಂತ ಕನ್ನಲ್ಲಿ ಈ ರೀತಿಯ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಸಿನಿಮಾದ ಒಂದು ವಿಶೇಷ ಹಾಡಿಗೆ ಸಿಂಬು ಅವರನ್ನು ಕರೆ ತರಬೇಕು ಎನ್ನುವುದು ಕಾಂತ ಪ್ಲಾನ್ ಆಗಿದೆ. ಸದ್ಯದಲ್ಲಿಯೇ ಚಿತ್ರತಂಡ ಸಿಂಬು ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಿದೆ. ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.
'ಇರುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾ ಸಂಬಂದಗಳ ಸುತ್ತ ಸುತ್ತಲಿದ್ದು, ವಾಸ್ತವಕ್ಕೆ ತುಂಬ ಹತ್ತಿರವಾಗುವ ವಿಷಯ ಚಿತ್ರದಲ್ಲಿದೆಯಂತೆ. ಮೊದಲ ಬಾರಿಗೆ ಮೇಘನಾ ರಾಜ್ ಮತ್ತು ತಿಲಕ್ ಒಟ್ಟಿಗೆ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಊಟಿ, ಮಂಗಳೂರು ನಲ್ಲಿ 45 ದಿನ ಚಿತ್ರೀಕರಣ ಮಾಡಲಾಗಿದೆ. ಅಚ್ಚುತ್ ಕುಮಾರ್ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. 'ಡ್ರಾಮಾ ಜೂನಿಯರ್ಸ್' ರನ್ನರ್ ಅಪ್ ಅಭಿಶೇಕ್ ರಾಯನ್ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











