ಲೋಕಸಭೆ ಚುನಾವಣೆಯಲ್ಲಿ 'UPP' ಸ್ಪರ್ಧಿಸಬೇಕಾ? ಉಪ್ಪಿ ಕೇಳಿದ ಪ್ರಶ್ನೆಗೆ ಜನರು ಏನಂದ್ರು?
ಲೋಕಸಭೆ ಚುನಾವಣೆಗಾಗಿ ಕೌಂಟ್ ಡೌನ್ ಶುರುವಾಗಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎಲೆಕ್ಷನ್ ನಡೆಯಬಹುದು ಎಂಬ ನಿರೀಕ್ಷೆಯಿದೆ. ಈ ಮಹಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ದೇಶದ ಇತರೆ ಪಕ್ಷಗಳು ಸಜ್ಜಾಗುತ್ತಿವೆ.
ಈ ಮಧ್ಯೆ ನಟ ಉಪೇಂದ್ರ ಅವರ 'ಉತ್ತಮ ಪ್ರಜಾಕೀಯ ಪಾರ್ಟಿ' ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾ ಅಥವಾ ಇಲ್ವಾ ಎಂಬ ಕುತೂಹಲ ಈಗ ಸ್ಯಾಂಡಲ್ ವುಡ್ ಅಭಿಮಾನಿಗಳನ್ನ ಹಾಗೂ ಉಪೇಂದ್ರ ಅವರ ಬೆಂಬಲಿಗರನ್ನ ಕಾಡುತ್ತಿದೆ.
ಈಗಾಗಲೇ 'ಉತ್ತಮ ಪ್ರಜಾಕೀಯ ಪಾರ್ಟಿ' ಎಂದು ಪಕ್ಷದ ಹೆಸರು ರಿಜಿಸ್ಟರ್ ಮಾಡಿಸಿರುವ ಉಪೇಂದ್ರ, ಪಕ್ಷದ ಗುರುತನ್ನ ಪಡೆದುಕೊಂಡಿಲ್ಲ. ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಇಂತಹ ಸಮಯದಲ್ಲಿ UPP ಏನು ಮಾಡುತ್ತೆ ಎಂಬುದು ಚರ್ಚೆಯಾಗ್ತಿದೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ಜನರ ಅಭಿಪ್ರಾಯ ಕೇಳಿದ್ದಾರೆ. ಅದಕ್ಕೆ ಜನರು ಏನು ಹೇಳಿದ್ದಾರೆ? ಮುಂದೆ ಓದಿ....

UPP ಸ್ಪರ್ಧೆ ಮಾಡ್ಬೇಕಾ? ಬೇಡವಾ?
ಈ ಬರುವ 2019 ಲೋಕಸಭಾ ಚುನಾವಣೆಗೆ ''ಉತ್ತಮ ಪ್ರಜಾಕೀಯ ಪಾರ್ಟಿ'' ಸ್ಪರ್ದಿಸಬೇಕೆ? ಎಂದು ಪ್ರಶ್ನಿಸಿರುವ ಉಪೇಂದ್ರ ಹೌದು ಮತ್ತು ಇಲ್ಲ ಎಂದು ಎರಡು ಆಯ್ಕೆಗಳನ್ನ ನೀಡಿದ್ದಾರೆ. ಈ ಪೋಲ್ ಗೆ ಸುಮಾರು 11 ಸಾವಿರಕ್ಕಿಂತ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ಸ್ಪರ್ಧೆ ಮಾಡಲಿ ಎಂದ ಬೆಂಬಲಿಗರು
ಲೋಕಸಭೆ ಚುನಾವಣೆಯಲ್ಲಿ ''ಉತ್ತಮ ಪ್ರಜಾಕೀಯ ಪಾರ್ಟಿ'' ಸ್ಪರ್ಧೆ ಮಾಡಲಿ ಎಂದೇ ಹೆಚ್ಚು ಜನರು ಹೇಳ್ತಿದ್ದಾರೆ. ಶೇಕಡಾ 75 ರಷ್ಟು ಜನರು ಸ್ಪರ್ಧಿಸಲಿ ಎಂದು ಸಪೋರ್ಟ್ ಮಾಡ್ತಿದ್ರೆ, ಶೇಕಡಾ 25 ರಷ್ಟು ಜನ ಬೇಡ ಎಂದು ವಿರೋಧಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಮಿಸ್ ಆಗಿತ್ತು
ಕಳೆದ ವರ್ಷದಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಅವರ ಪಕ್ಷ (ಆಗ 'ಕೆಪಿಜೆಪಿ' ಪಕ್ಷದಲ್ಲಿದ್ದರು) ಸ್ಪರ್ಧೆ ಮಾಡುವ ತಯಾರಿ ನಡೆಸಿತ್ತು. ಕೊನೆಯ ಕ್ಷಣದಲ್ಲಿ ಪಕ್ಷದಲ್ಲಿ ಉಂಟಾದ ಆಂತಕರಿಕ ಕಲಹದಿಂದ ಉಪೇಂದ್ರ ಪಕ್ಷ ಬಿಟ್ಟು ಹೊರನಡೆದರು. ಹಾಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಉಪ್ಪಿ ಅಖಾಡಕ್ಕೆ ಇಳಿಯಲಿಲ್ಲ.

ಉಪೇಂದ್ರ ಕ್ಷೇತ್ರ ಯಾವುದು?
ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧೆ ಮಾಡಿದ್ರೆ, ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈ ಬಗ್ಗೆ ಎಲ್ಲಿಯೂ ಉಪೇಂದ್ರ ಅವರು ಮಾತನಾಡಿಲ್ಲ. ಸ್ಪರ್ಧೆ ಮಾಡ್ತಾರಾ ಅನ್ನೋದೇ ಅನುಮಾನವಾಗಿ ಉಳಿದಿದೆ.


Click it and Unblock the Notifications











