ಡೆವಿಲ್ VS ಕೆಡಿ ಮಹಾಸಮರದ ನಡುವೆ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಉತ್ತರಕಾಂಡ..?
ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಹೊತ್ತಿಕೊಂಡ ಮನಸ್ತಾಪದ ಕಿಡಿ, ಈ ಡಿಸೆಂಬರ್‌ನಲ್ಲಿ ಕಾಡ್ಗಿಚ್ಚಾಗಿ ಕನ್ನಡ ಚಿತ್ರರಂಗವನ್ನ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಆ ವಾತಾವರಣ ಸದ್ಯಕ್ಕೆ ದಟ್ಟವಾಗಿ ಕಂಡು ಬರುತ್ತಿದೆ. ಇದರಿಂದ ಲಾಭ ಯಾರಿಗೆ ಅನ್ನುವುದು ಖುದ್ದು ಈ ಇಬ್ಬರಿಗೆ ಗೊತ್ತಾದರೂ, ಸದ್ಯಕ್ಕೆ.. ಈ ಸ್ಟಾರ್ ವಾರ್ ಸಹಜವಾಗಿ ಫ್ಯಾನ್ ವಾರ್‌ಗೆ ನಾಂದಿ ಹಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟದ ಕಾರ್ಯಕ್ರಮ ಶುರುವಾಗಿದೆ. ಕನ್ನಡ ಚಿತ್ರರಂಗವನ್ನ ಉದ್ಧಾರ ಮಾಡಬೇಕಿರುವ ಈ ಸ್ವಾರದ್ವಯರ ಸಮರಕ್ಕೆ ಟೀಕೆ-ಟಿಪ್ಪಣಿ ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಡಿಸೆಂಬರ್‌ನಲ್ಲಿಯೇ ಈ ಇಬ್ಬರ ಜೊತೆ ಡಾಲಿ ಧನಂಜಯ್ ಕೂಡ ಕಣಕ್ಕಿಳಿಯಲಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಪಸರ್ ಆಗಿದೆ
ಹೌದು..ದರ್ಶನ್ ಅಭಿನಯದ ಡೆವಿಲ್.. ಧ್ರುವಾ ಸರ್ಜಾ ಅಭಿನಯದ ಕೆ.ಡಿ .. ಇವೆರಡು ಚಿತ್ರಗಳ ಜೊತೆಯಲ್ಲಿ ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾ ಕೂಡ ಇದೇ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ ಅನ್ನುವ ಸುದ್ದಿ ಸದ್ಯಕ್ಕೆ ಹಬ್ಬಿದೆ. ಹಬ್ಬಿರುವ ಈ ಸುದ್ದಿ ನಿಜಾನಾ.. ಗೊತ್ತಿಲ್ಲ. ಆದರೆ.. ಬೆಂಕಿಯಿಲ್ಲದೆ ಹೊಗೆಯಾಡಲ್ಲ.

ಈ ಕಾರಣಕ್ಕೆ ಈ ಬಾರಿಯ ಕ್ರಿಸ್ಮಸ್ ಕದನ ಅನೇಕರ ಕಣ್ಣಿಗೆ ಕೌತುಕದ ಗೂಡಾಗಿದೆ. ಇನ್ನೂ ಅನೇಕರಲ್ಲಿ ಬೇಕಿತ್ತಾ ಇದೆಲ್ಲ ಅನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ.. ಕನ್ನಡ ಚಿತ್ರರಂಗದ ಕರುಣಾಜನಕ ಕಥೆ ನಿಮಗೆ ಗೊತ್ತು. ದೊಡ್ಡ ದೊಡ್ಡವರ ಸಿನಿಮಾ ಇಲ್ಲದೇ ಕಂಗಾಲಾದ ಉದ್ಯಮಕ್ಕೀಗ ಗ್ಲೂಕೋಸ್‌ನ ಅವಶ್ಯಕತೆ ಇದೆ. ಇಂತಹ ಸಮಯದಲ್ಲಿ ಮೊದಲ ಹನ್ನೊಂದು ತಿಂಗಳು ಎಲ್ಲರೂ ಸುಮ್ಮನೆ ಇದ್ದು, ಕೊನೆಯಲ್ಲಿ ಧುತ್ತನೆ ಎದ್ದು ಬಂದರೆ.. ನಷ್ಟ ಕನ್ನಡ ಚಿತ್ರರಂಗಕ್ಕೆ ಹೊರತು ಕನ್ನಡ ಪ್ರೇಕ್ಷಕರಿಗೆ ಅಲ್ಲ.
ಅಂದ್ಹಾಗೇ ಉತ್ತರಕಾಂಡದಲ್ಲಿ ಕೇವಲ ಡಾಲಿ ಧನಂಜಯ್ ಮಾತ್ರ ಅಲ್ಲ ಸೆಂಚ್ಯೂರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಕೂಡ ಇದ್ದಾರೆ. ಇನ್ನೂ.. ವಯಸ್ಸು 60 ಪ್ಲಸ್ ಆದರೂ ಶಿವಣ್ಣಗೆ ಇರುವ ಕ್ರೇಜ್ ಕರುನಾಡಿಗೆ ಗೊತ್ತು. ಉತ್ತರಕಾಂಡ ಕೂಡ ಇದೇ ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ ಅನ್ನುವ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಚಿಂತೆ ಹೆಚ್ಚಲು ಇದು ಕೂಡ ಒಂದು ಕಾರಣ.

ಉಳಿದಂತೆ ರೊಹೀತ್ ಪದಕಿ ನಿರ್ದೇಶನದ ಉತ್ತರಕಾಂಡದಲ್ಲಿ ದಿಗಂತ್ ಮತ್ತು ಚೈತ್ರಾ ಆಚಾರ್ ಕೂಡ ಇದ್ದಾರೆ. ಡಾಲಿ ಧನಂಜಯ್ ಎದುರು ನಾಯಕಿಯಾಗುವ ಮೂಲಕ ಐಶ್ವರ್ಯ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಬಂದಿದ್ಧಾರೆ. ಜಾಕಿ ಭಾವನಾ ಮತ್ತೊಮ್ಮೆ ಶಿವಣ್ಣಗೆ ಜೋಡಿಯಾಗಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರಲಿದೆ. ಆ ಪೈಕಿ ಸದ್ಯಕ್ಕೆ ಸುದ್ದಿಯಾಗ್ತಿರುವಂತೆ ಮೊದಲ ಭಾಗ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ.
ಒಟ್ನಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್, ಧ್ರುವ ಸರ್ಜಾ ಅಭಿನಯದ ಕೆಡಿ ಜೊತೆ ಡಿಸೆಂಬರ್ ನಲ್ಲಿ ಉತ್ತರಕಾಂಡ ಚಿತ್ರ ಕೂಡ ತೆರೆಗೆ ಬರಲಿದೆ ಅನ್ನುವ ಸುದ್ದಿ ಸದ್ದು ಮಾಡುತ್ತಿದೆ. ನಿಜವಾಗಿಯೂ ಉತ್ತರಕಾಂಡ ಡಿಸೆಂಬರ್ ನಲ್ಲಿ ಬರುತ್ತಾ, ಹೌದು ಎಂದಾದಲ್ಲಿ ಕೆಡಿ ಮತ್ತು ಡೆವಿಲ್ ಬಿಡುಗಡೆಯಾಗಲಿರುವ ದಿನದಂದೇ ಈ ಚಿತ್ರ ಬಿಡುಗಡೆಯಾಗುತ್ತಾ ಅಥವಾ ಆ ಎರಡು ಚಿತ್ರ ಬಿಡುಗಡೆಯಾಗುವ ಒಂದು ಹದಿನೈದು ದಿನದ ಮೊದಲು ಉತ್ತರಕಾಂಡ ತೆರೆಗೆ ಬರುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











