ವಿರಾಟ್ ಕೊಹ್ಲಿ ಬ್ಯಾಟ್ ಕೆಳಗಿಟ್ಟಿದ್ದು ಒಳ್ಳೆಯದೇ ಆಯಿತು ; ಕವಿರಾಜ್ ಕಂಡಂತೆ ಕೊಹ್ಲಿ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಂತಹ ಉದ್ಯಮಗಳಲ್ಲಿ ಹಲವಾರು ಜನ ಹಲವರಿಗೆ ಅಭಿಮಾನಿಗಳಾಗಿದ್ದಾರೆ. ತಾರೆಯರು ಕ್ರಿಕೆಟ್ ಆಟಗಾರರ ಆಟಕ್ಕೆ ಮನ ಸೋತಿದ್ದರೆ, ಕ್ರಿಕೆಟ್ ಪ್ಲೇಯರ್ಸ್ ಸ್ಟಾರ್‌ಗಳ ಅಭಿನಯಕ್ಕೆ ಮನ ಸೋತಿದ್ದಾರೆ. ಅಭಿಮಾನಿಗಳಾಗಿದ್ದಾರೆ. ಒಟ್ನಲ್ಲಿ ಇಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಅಭಿಮಾನಿಗಳೇ. ಉದಾಹರಣೆಗೆ ಕವಿರಾಜ್.
ಹೌದು, ಕವಿರಾಜ್, ಕನ್ನಡ ಚಿತ್ರರಂಗಕ್ಕೆ ವೈವಿಧ್ಯಮಯ ಹಾಡುಗಳನ್ನು ನೀಡಿದ ಚಿತ್ರ ಸಾಹಿತಿ. ಸಾಹಿತ್ಯ ರಚನೆಕಾರರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಮಾನ ಹೊಂದಿರುವ ಕವಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿ ಕೂಡ ಹೌದು. ಭಾರತ ತಂಡದ ದಂತಕತೆ ವಿರಾಟ್ ಕೊಹ್ಲಿಯ ಅಭಿಮಾನಿ ಕೂಡ ಹೌದು.

ಇಂಥಾ ಕವಿರಾಜ್ ಸದ್ಯ ರನ್ ಮೆಷಿನ್ ಕಿಂಗ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ತಮ್ಮ ಮನದ ಮಾತುಗಳನ್ನು ಅಕ್ಷರದ ರೂಪದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮೇಲೆ ತಮಗಿರುವ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ. ಹಾಗಿದ್ದರೆ ಕವಿರಾಜ್ ಬರೆದ ಲೇಖನದಲ್ಲೇನಿದೆ ಎಂದು ತಿಳಿಯಲು ಮುಂದೆ ಓದಿ.
ಕವಿರಾಜ್ ಬರೆದ ಲೇಖನ
ಕೆಲವೊಮ್ಮೆ ಕೆಲವರೊಂದಿಗೆ ಯಾಕೆ ಇಷ್ಟು ಕನೆಕ್ಟ್ ಆಗಿ ಬಿಡುತ್ತೇವೆ. ಯಾಕಿಷ್ಟು ಭಾವುಕರಾಗಿ ಬಿಡುತ್ತೇವೆ. ಕೆಲವರನ್ನು ನಾವು ಭೇಟಿಯೇ ಆಗದಿದ್ದರೂ, ಒಮ್ಮೆಯೂ ಮಾತಾಡದೇ ಇದ್ದರೂ ಅವರು ನಮ್ಮೊಂದಿಗೆ ನಮ್ಮ ಬದುಕಿನುದ್ದಕ್ಕೂ ಸಾಗಿ ಬಂದು ಬಿಡುತ್ತಾರೆ. ಅಥವಾ ಅವರ ಬದುಕಿನೊಂದಿಗೆ ನಾವು ಸಾಗುತ್ತಿರುತ್ತೇವೆ.
ಅವರ ಸಾಧನೆ,ವಿಫಲತೆ, ನೋವು- ನಲಿವು, ಅವರ ಬದುಕಿನ ಏರಿಳಿತಗಳು ನಮ್ಮವೇ ಆಗಿಬಿಡುತ್ತವೆ. ಅವರ ಗೆಲುವಿಗಾಗಿ ನಾವು ಹಪಹಪಿಸಲು ಶುರು ಇಡುತ್ತೇವೆ. ಇಂಥಾ ಆರಾಧನೆಗೆ ಒಳಪಡುವವರು ಬಹುತೇಕ ಸಾಧಕ ಸೆಲೆಬ್ರಿಟಿಗಳಾಗಿರುತ್ತಾರೆ.
ಬಹುಶಃ ನಾವು ಸಾಧಿಸಲಾಗದ ಏನನ್ನೋ ಸಾಧಿಸಲು ನಾವೊಂದು ಪರ್ಯಾಯ 'ನಮ್ಮನ್ನು' ಅವರಲ್ಲಿ ಹುಡುಕಿಕೊಳ್ಳುತ್ತೇವೇನೋ. ಇಲ್ಲಿ ವರ್ಗ ಭೇದಗಳೇನು ಇಲ್ಲ. ಕಾಮನ್ ಮ್ಯಾನ್ ಒಬ್ಬ ಸಿನಿಮಾ ಸ್ಟಾರ್ ಜೊತೆಗೆ ತನ್ನದೊಂದು ಪರ್ಯಾಯ ಕಾಲ್ಪನಿಕ ಬದುಕನ್ನು ಹೆಣೆದುಕೊಂಡರೆ, ಸ್ವಲ್ಪ ಆರ್ಥಿಕವಾಗಿ ಮೇಲುಸ್ತರದ ವ್ಯಕ್ತಿಗಳು ಕೂಡಾ ಸಿನಿಮಾ ಸ್ಟಾರ್ ಗಿಂತಲೂ ಇನ್ನೊಂದು ಸ್ತರ ಮೇಲಿರುವ ಬೇರೆ ಆಯಾಮದ ಕ್ರೀಡೆ, ರಾಜಕೀಯ, ಕಲೆ ಇನ್ನಿತರ ಕ್ಷೇತ್ರದ ಸೆಲೆಬ್ರಿಟಿಗಳನ್ನು ಈ ಆಯಾಮದಲ್ಲೇ ಆಯ್ದುಕೊಳ್ಳಬಹುದು.
ಈ ದಿಸೆಯಲ್ಲಿ ನನ್ನ ಸುಪ್ತಮನಸು ಆಯ್ದುಕೊಂಡಿದ್ದು ನಿಗಿನಿಗಿ ಕೆಂಡದಂತ ಕೊಹ್ಲಿಯನ್ನು. ಅದರಲ್ಲೂ ಆತ ನಮ್ಮ ಬೆಂಗಳೂರು ತಂಡಕ್ಕೆ ಸೇರಿದ್ದು, ಆರ್‌ಸಿಬಿ ಬಿಟ್ಟರೆ ಬೇರೆ ತಂಡಕ್ಕೆ ಆಡುವುದಿಲ್ಲ ಎಂಬ ಅವನ ಲಾಯಲ್ಟಿ. ಅವನ ಮೇಲಿನ ಅಭಿಮಾನ ಗಟ್ಟಿಯಾಗಲು ಇನ್ನಷ್ಟು ಸಿಮೆಂಟ್ ಹಾಕಿತು.
ಯಾವುದೇ 'ಓವರ್' ಆದ ವಿಷಯಗಳನ್ನ ಇಷ್ಟಪಡದ ನನಗೇ ಅದೇಕೋ ಕೊಹ್ಲಿಯ ಓವರ್ ಅಗ್ರೇಷನ್, ಸೆಲೆಬ್ರೇಶನ್ ಎರಡೂ ಇಷ್ಟ ಆಗಿಬಿಟ್ಟಿದ್ದವು. ಅವನು ಆಡುವಾಗೆಲ್ಲ ಅದು ನಾನೇ ಎಂಬಂತೆ ಸುಪ್ತ ಮನಸ್ಸು ಸಂಭ್ರಮಿಸಿತ್ತು. ಅವನು ವಿಕೆಟ್ ಗಳ ನಡುವೆ ಒಂದು ರನ್ ಜಾಗದಲ್ಲಿ ಎರಡು ರನ್ ಗಳಿಸಲು ಚಿಗರೆಯಂತೆ ಓಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅವನ ಒಂದೊಂದು ಶತಕಗಳನ್ನು ಲೆಕ್ಕ ಹಾಕುತ್ತಾ ತೆಂಡೂಲ್ಕರ್ ಮಾಡಿರುವ ನೂರು ಶತಕಗಳ ದಾಖಲೆ ಮುರಿಯಲು ಇನ್ನೆಷ್ಟು ಶತಕಗಳು ಬಾಕಿ ಎಂದು ಎಣಿಸೋದೆ ಒಂದು ಗೀಳಾಗಿತ್ತು.
ಆಗ. ಕ್ಯಾಪ್ಟನ್ ಆಗಿ ಕೊಹ್ಲಿ ಯಾವುದೇ ಐಸಿಸಿ ಟ್ರೋಫಿ ಗೆಲ್ಲಿಸದಿದ್ದರೂ ಅವನ ಕ್ಯಾಪ್ಟನ್ಸಿ ಅಡಿಯಲ್ಲಿ ತಂಡದ ಅಪ್ರೋಚ್, ಸಾಧನೆ ಅಮೋಘವಾಗೆ ಇತ್ತು. SENA ದೇಶಗಳಲ್ಲಿ ಅಧಿಕಾರಯುತ ಸರಣಿ ಗೆಲುವುಗಳು ಯಾವುದೇ ಟ್ರೋಫಿಗೂ ಕಡಿಮೆಯಿಲ್ಲದ ಸಾಧನೆಗಳೆಂಬುದು ನಿಸ್ಸಂಶಯ. ಕೊಹ್ಲಿಯಿಂದ ಕ್ಯಾಪ್ಟನ್ಸಿ ಕಸಿದಾಗ ಅತೀವ ಸಂಕಟವಾಗಿತ್ತು. ಕೊಹ್ಲಿ ಇತರರ ಕ್ಯಾಪ್ಟನ್ಸಿಯಲ್ಲಿ ತನ್ನನ್ನು ಅರ್ಪಿಸಿಕೊಂಡಂತೆ, ಕೊಹ್ಲಿ ಕ್ಯಾಪ್ಟನ್ ಆದಾಗ ಇತರ ಕೆಲವು ಪ್ರಮುಖ ಆಟಗಾರರು ತಮ್ಮನ್ನು ಅರ್ಪಿಸಿಕೊಳ್ಳದೇ ಕೊಹ್ಲಿಗೆ ಕೈ ಕೊಟ್ಟರು ಅಂತಲೂ ಅನಿಸಿ ವಿಷಾದವಾಗಿತ್ತು.
ಈ ನನ್ನ ಅನಿಸಿಕೆ ತಪ್ಪಿರಲೂಬಹುದು ಆದರೆ ಹೀಗನಿಸಿದ್ದಂತೂ ಸತ್ಯ. ಕೆಲವು ಇನ್ನಿಂಗ್ಸ್ ಗಳಲ್ಲಿ ಅವನ ಬ್ಯಾಟ್ ಮಾತಾಡದಿದ್ದಾಗ, ಇನ್ನು ಕೊಹ್ಲಿಯ ಕಾಲ ಮುಗಿಯಿತು ಎಂದು ಯಾರೋ ಗೊಣಗುತ್ತಿದ್ದಾಗಲೇ, ಅಮೋಘ ಇನ್ನಿಂಗ್ಸ್ ಒಂದನ್ನು ಕಟ್ಟಿ ಟೀಕಾಕಾರಿಗೆ ಬ್ಯಾಟಿನಿಂದಲೇ ಉತ್ತರ ಕೊಟ್ಟಾಗ ನಾವನುಭವಿಸಿದ ಧನ್ಯತೆ ಪದಗಳಲ್ಲಿ ವಿವರಿಸಲಾಗದ್ದು.
ಅಂಗಣದಲ್ಲಿ ಅಗ್ರೆಸ್ಸಿವ್ ಆದರೂ ಕೊಹ್ಲಿ ತುಂಬಾ ವಿಚಾರವಂತ, ಮಾನವೀಯ ಚಿಂತನೆ ಉಳ್ಳವನೆಂದು ಇನ್ನೂ ಭೇಷ್ ಅನಿಸಿದ್ದು ಕೊಹ್ಲಿಯ struggle ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಗೆಗೆ. "ನಮ್ಮದೆಲ್ಲ stuggle ಅಲ್ಲಾ, struggle ಯಾರದೆಂದರೆ ಯಾರಿಗೆ ಎರಡು ಹೊತ್ತಿನ ರೋಟಿ ಸಿಗುತ್ತಿಲ್ಲವೋ ಅವರದು. ನಾವೆಲ್ಲಾ previlaged position ಅಲ್ಲಿ ಇದ್ದು ನಮಗೆ ಇಷ್ಟವಾದದ್ದನ್ನು ಮಾಡುತ್ತಿರುವವರು. ಕ್ರೀಡೆಯಲ್ಲಿ ನಮ್ಮ ಹಾರ್ಡವರ್ಕ್ ಅನ್ನು stuggle ಎಂದು glorify ಮಾಡುವುದು ಸರಿಯಲ್ಲ. ಜನ ದಿನನಿತ್ಯದ ಬದುಕಿಗೆ ನಡೆಸುತ್ತಿರುವ ಹೋರಾಟದ ಮುಂದೆ ನಮ್ಮದೇನೂ ಅಲ್ಲಾ" ಈ ಉತ್ತರ ಕೇಳಿದ ದಿನ ಅಷ್ಟು ಎತ್ತರ ಏರಿದವನಿಗೆ ತಳದಲ್ಲಿರುವ ಜನಸಾಮಾನ್ಯರ ಸಂಕಷ್ಟದ ಸ್ಪಷ್ಟ ಅರಿವು , ಸಹಾನುಭೂತಿ ಇರುವುದನ್ನು ಕಂಡು ಮನಸು ತುಂಬಿ ಬಂದು ಕೊಹ್ಲಿಯ ಬಗ್ಗೆ ಗೌರವ ಇಮ್ಮಡಿ ಆಗಿತ್ತು.
ಒಟ್ಟಿನಲ್ಲಿ ನನ್ನಂತೆ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ 'ನಾವೇ' ಆಗಿ ಬೆಳೆದು ಆಡುತ್ತಾ ಬಂದ ಕೊಹ್ಲಿ ವಯಸಾಯಿತೆಂದು ಒಂದೊಂದೇ ಫಾರ್ಮ್ಯಾಟ್ ಅಲ್ಲಿ ಬ್ಯಾಟ್ ಕೆಳಗಿಡುವಾಗ ಅವನೊಂದಿಗೆ ನಮಗೂ ವಯಸಾಗಿದ್ದು ಅರಿವಿಗೆ ಬರುತ್ತಾ ಅವನ ಆಟದೊಂದಿಂಗೆ ನಮ್ಮ ಬದುಕು ಸಾಗಿ ಬಂದ ಬಗೆಗೆ ಸೋಜಿಗವಾಗುತ್ತದೆ. T 20 ನಂತರ.
ಇದೀಗ ಟೆಸ್ಟ್ ಕ್ರಿಕೆಟಿಗೂ ವಿದಾಯ ಘೋಷಿಸಿದ್ದಾರೆ. ಇನ್ನು ಎರಡು ಮೂರು ವರ್ಷ ಆಡಬಹುದಿತ್ತು ಅಂತ ಅನ್ನಿಸಿದರೂ ನಮ್ಮ ಕಿಂಗ್ ಬೇಡಿಕೆ ಇದ್ದಾಗಲೇ ಬ್ಯಾಟ್ ಕೆಳಗಿಟ್ಟಿದ್ದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಅನಿಸುತ್ತಿದೆ.
ಬಹುಶಃ ನಾವಿನ್ನು ಲೈವ್ ಮ್ಯಾಚ್ ನೋಡುವುದಕ್ಕಿಂತ ಆತನ ಹಳೇ ರೆಕಾರ್ಡೆಡ್ ವೀಡಿಯೋಗಳನ್ನು ನೋಡುತ್ತಾ ಕಾಲ ಕಳೆಯುವುದೇ ಹೆಚ್ಚಾಗಬಹುದು. ಈಗಾಗಲೇ ಮುಂದೆ ಅವನಿಲ್ಲದ ಕ್ರಿಕೆಟ್ ಮೇಲೆ ಒಂದು ವೈರಾಗ್ಯ ಶುರುವಾಗಿದೆ.
ಇನ್ನು ಟೆಸ್ಟ್ ಕ್ರಿಕೆಟಿನಲ್ಲಿ ಎರಡು ಫೀಲ್ಡರ್‌ಗಳ ನಡುವೆ ಭೂಮಿ ಸೀಳಿಕೊಂಡು ಮುನ್ನುಗುವ ಕವರ್ ಡ್ರೈವ್ ಮೋಹಕತೆ ನೋಡಲು ಸಿಗುವುದಿಲ್ಲ. ಯಾರೇ ವಿಕೆಟ್ ಪಡೆದರೂ ತಾನೇ ಪಡೆದಂತೆ ಎದೆ ಗುದ್ದಿಕೊಂಡು, ಮುಷ್ಟಿ ಬಿಗಿ ಹಿಡಿದು ಬಲಿಷ್ಠ ಕೈಯ್ಯ ಅಷ್ಟೂ ನರಗಳು ಉಬ್ಬುವಂತೆ ಮಾಡಿ, ಇಷ್ಟಗಲ ಬಾಯ್ತೆರೆದು ಜಿಗಿಯುವ 18 ನೇ ನಂಬರ್ ಜೆರ್ಸಿಯ ಸೆಲೆಬ್ರೇಷನ್ ಕಾಣಸಿಗುವುದಿಲ್ಲ.
ಒಂದು ರನ್ ಇದ್ದಲ್ಲಿ ಎರಡು, ಎರಡಿದ್ದಲ್ಲಿ ಮೂರು ರನ್ನಿಗೆ ಓಡಿಸುತ್ತಾ ಸಹ ಆಟಗಾರರನ್ನು ಅಂಕಣದಲ್ಲೇ ಲೈವ್ ಫಿಟ್ನೆಸ್ ಟೆಸ್ಟ್ ಮಾಡುವುದು ಕಾಣಸಿಗುವುದಿಲ್ಲ. ಎದುರಾಳಿ ಆಟಗಾರರು ಯಾರ್ಯಾರು ಯಾವ್ಯಾವ ಶೈಲಿಯಲ್ಲಿ ಕೆಣಕುತ್ತಾರೋ ಅದೇ ಶೈಲಿಯಲ್ಲಿ ತಿರುಗೇಟು ಕೊಡುವ ದ'ಬ್ಯಾಂಗ್' ಆಟಗಾರ ಇರುವುದಿಲ್ಲ. ಚೇಸಿಂಗ್ ಎಂದರೆ ಏನೇ ಒತ್ತಡ ಇದ್ದರು ಪಕ್ಕಾ ಲೆಕ್ಕಾಚಾರದಲ್ಲಿ ಬೆನ್ನಟ್ಟಿ ಮಿಸ್ಸೇ ಇಲ್ಲದಂತೇ ಗುರಿಮುಟ್ಟಿಸುವ ಛಲಗಾರ ಚೇಸ್ ಮಾಸ್ಟರ್ ಇನ್ನು ಆಡುವುದಿಲ್ಲ.
ಪ್ರೀತಿಯ ಕೊಹ್ಲಿ, ಒಟ್ಟಾರೆ ಕ್ರಿಕೆಟ್ ಈವರೆಗೂ ನೂರಾರು GREAT ಗಳನ್ನು ಕಂಡಿದೆ. ಆದರೆ ನೀನು ಅವರೆಲ್ಲರನ್ನು ಮೀರಿದ 'GOAT' ಇನ್ನೂ ಏಕದಿನ ಕ್ರಿಕೆಟ್ ಅಲ್ಲಿ ನಿನ್ನನ್ನು ನೋಡಬಹುದು ಎಂಬುದೇ ಸದ್ಯದ ಸಾಂತ್ವನ. ಎಲ್ಲಕ್ಕೂ ಕಳಶವಿಟ್ಟಂತೆ , ಈ ಬಾರಿ ಗಟ್ಟಿ ನಂಬಿಕೆ ಹುಟ್ಟಿಸಿರುವ 'ಈ ಸಲ ಕಪ್ ನಮ್ದೇ ಅನ್ನುವ ಮಂತ್ರ' ನಿಜವಾಗಲಿ ಅನ್ನೋದೇ ಹಾರೈಕೆ.ಯಾಕೆಂದರೆ ಅದೊಂದು ಮಾತು ನಿಜವಾಗಲೆಂದು ನಮ್ಮೆಲರಿಗಿಂತ ನೀನು ಹೆಚ್ಚು ಹಪಹಪಿಸಿರುವೆ ಎಂಬುದು ನಮಗೆಲ್ಲ ಗೊತ್ತು.
ಹೀಗೆ ಕವಿರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಕುರಿತು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕವಿರಾಜ್ ಅವರ ಈ ಬರಹಕ್ಕೆ ಹಲವಾರು ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು ಕೊಹ್ಲಿ ಕ್ರಿಕೆಟ್ ಲೋಕದ ನಿಜವಾದ ಕಿಂಗ್ ಎನ್ನುತ್ತಿದ್ದಾರೆ. ಕೊಹ್ಲಿಗೆ ಬಹುಪರಾಕ್ ಹಾಕುತ್ತಿದ್ದಾರೆ.


Click it and Unblock the Notifications











