ಇನ್ನೊಂದ್ 10 ಮಾಸ್ ಡೈಲಾಗ್ ಬಿಟ್ರೆ ಕರ್ನಾಟಕನೇ ನಮ್ದು, ಕೊಂಡ್ಕೊಬಹುದು ಎಂದ ರಕ್ಷಕ್ ಬುಲೆಟ್!

ಕನ್ನಡ ಚಲನಚಿತ್ರರಂಗ ಕಂಡ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಕಳೆದ ವರ್ಷ ಬಿಡುಗಡೆಗೊಂಡಿದ್ದ ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ನಾಯಕನಾಗಿ ಶರಣ್ ಕಾಣಿಸಿಕೊಂಡರೆ, ನಾಯಕಿಯಾಗಿ ನಿಶ್ವಿಕಾ ನಾಯ್ಡು ಇದ್ದರು.
ಈ ಚಿತ್ರ ಸಕ್ಸಸ್ ಕೂಡ ಕಂಡಿತ್ತು. ಚಿತ್ರದಲ್ಲಿ ಸೆಲೆಬ್ರಿಟಿಗಳ ಮಕ್ಕಳೂ ಸಹ ನಟಿಸಿದ್ದರು. ಈ ಪೈಕಿ ರಕ್ಷಕ್ ಬುಲೆಟ್‌ಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಬಾಷಾ ಎಂಬ ಪಾತ್ರದಲ್ಲಿ ರಕ್ಷಕ್ ಬುಲೆಟ್ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಕೆಲ ನಿಮಿಷಗಳ ಕಾಲ ಇರುವ ಈ ಪಾತ್ರ ತನಗೆ ಸಿಕ್ಕಿದ್ದು ತನಗೆ ಸಂತಸ ಹಾಗೂ ಈ ಚಿತ್ರ ತನಗೆ ಯಾವಾಗಲೂ ಸ್ಪೆಷಲ್ ಎಂದು ಹಲವಾರು ಬಾರಿ ಹೇಳಿಕೊಂಡಿದ್ದಾರೆ ರಕ್ಷಕ್.
ಇನ್ನು ಇತ್ತೀಚೆಗಷ್ಟೆ ರಕ್ಷಕ್ ಬುಲೆಟ್ ತಮ್ಮ 21ನೇ ವಯಸ್ಸಿನ ಹುಟ್ಟುಹಬ್ಬವನ್ನೂ ಸಹ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದ ದಿನದಂದು ತನ್ನನ್ನು ಭೇಟಿಯಾಗಿ ವಿಶ್ ಮಾಡಲು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದರ ಕುರಿತು ರಕ್ಷಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ವೀಕ್ಷಕ ನ್ಯೂಸ್ ಎಂಬ ಯುಟ್ಯೂಬ್ ಚಾನೆಲ್ ಕಳೆದ ಕೆಲ ದಿನಗಳ ಹಿಂದಷ್ಟೇ ರಕ್ಷಕ್ ಬುಲೆಟ್ ಅವರ ಸಂದರ್ಶನವನ್ನು ಮಾಡಿತ್ತು. ಈ ಸಂದರ್ಶನದಲ್ಲಿ ಮಾತನಾಡಿದ್ದ ರಕ್ಷಕ್ ಬುಲೆಟ್ "ಎರಡು ವರ್ಷಗಳ ಹಿಂದೆ ಫ್ಯಾಮಿಲಿ ಜತೆ ಕೇಕ್ ಕಟ್ ಮಾಡಿಕೊಂಡು 4ರಿಂದ 5 ಜನ ಅಷ್ಟೇ ಬರ್ತ್‌ಡೇ ಮಾಡ್ತಿದ್ವಿ. ಆದರೆ ಈ ಸಲ ಎಲ್ಲಾ ಊರುಗಳಿಂದ ಎಲ್ಲಾ ಹುಡುಗರೂ ಬಂದಿದ್ದಾರೆ. ಯಾವ ಯಾವ ಊರೋ ಗೊತ್ತಿಲ್ಲ ಪಾಪ. ಬೆಳಗಾವಿ ಹುಬ್ಬಳ್ಳಿ, ಧಾರಾವಾಡಗಳಿಂದ ಅಣ್ಣ ಸಿಕ್ತಾರಾ ಮೀಟ್ ಮಾಡಬೇಕು ಎಂದು ಬಂದಿದ್ರು. ತುಂಬಾ ಖುಷಿ ಅನ್ಸುತ್ತೆ. ಯಾಕೆಂದರೆ ಇನ್ನ ಮೊದಲ ಚಿತ್ರ ಆಗಿರೋದು ಅಷ್ಟೇ ನಂದು. ಅದೂ ಮೈನ್ ಅಪೀರಿಯನ್ಸ್ ಕೂಡ ಅಲ್ಲ. ಇವಾಗ ಮೈನ್ ಲೀಡಲ್ಲಿ ಮಾಡಬೇಕು ಅಂದುಕೊಂಡಿದ್ದೇನೆ. ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಅವಾಗ ಬಂದ್ರೆ 100% ಜನರ ಪ್ರೀತಿ ಜಾಸ್ತಿ ಆಗುತ್ತೆ" ಎಂದು ಹೇಳಿಕೊಂಡರು.
ಮುಂದುವರೆದು ಮಾತನಾಡಿದ ರಕ್ಷಕ್ ಬುಲೆಟ್ "ಮೊದಲ ಸಿನಿಮಾ ಗುರು ಶಿಷ್ಯರು ಅರ್ಧಗಂಟೆ ಕಾಣಿಸಿಕೊಂಡಿದ್ದಕ್ಕೆ ಇಷ್ಟೆಲ್ಲಾ ಪ್ರೀತಿ ಕೊಡುತ್ತಿದ್ದಾರೆ. ಇನ್ನೆರಡೂವರೆ ಕಾಣಿಸಿಕೊಂಡು ಜನಕ್ಕೆ ಎಂಟರ್‌ಟೈನ್‌ಮೆಂಟ್ ಕೊಟ್ಟು ನಂದೇ ಫೈಟು, ನಂದೇ ಡಾನ್ಸು, ನಾನೇ ಎಲ್ಲಾ ಮಾಡ್ತೀನಿ ಅಂದಾಗ ಜನ ಇನ್ನ ಇಷ್ಟಪಡೋಕೆ ಶುರು ಮಾಡ್ತಾರೆ. ಆ ಪ್ರೀತಿ ಗಳಿಸೋಕೆ ನಮ್ಮ ತಂದೆ ಹಾಗೂ ತಾಯಿಯ ಆಶೀರ್ವಾದ" ಎಂದು ತಿಳಿಸಿದರು.
ಇನ್ನು ನಾಯಕನಾಗಿ ನಟಿಸಲಿರುವ ಚಿತ್ರದ ಮಾತುಕತೆ ಏನಾದರೂ ಆಗಿದೆಯಾ ಎಂಬ ಪ್ರಶ್ನೆ ಎದುರಾದಾಗ ಮಾತನಾಡಿದ ರಕ್ಷಕ್ ಬುಲೆಟ್ "ನಾನು ಏನು ಮಾಡದೇನೇ ಜನ ಇಷ್ಟು ಪ್ರೀತಿ ಕೊಡ್ತಾ ಇದ್ದಾರೆ. ನಾನು ಹೇಳಿರೋದೆ ಎರಡು ಡೈಲಾಗ್ ಗುರು ಶಿಷ್ಯರು ಚಿತ್ರದಲ್ಲಿ. ಇನ್ನೊಂದು ಹತ್ತು ಮಾಸ್ ಡೈಲಾಗ್ ಬಿಟ್ರೆ ಇಡೀ ಕರ್ನಾಟಕನೇ ನಮ್ದು, ಕೊಂಡ್ಕೊಬಹುದು. 100% ಅದನ್ನು ಮಾಡೇ ಮಾಡ್ತೀನಿ. ಯಾಕೆಂದರೆ ಅಪ್ಪ ಹೇಳಿಕೊಟ್ಟಿರೋ ಒಂದಷ್ಟು ಮಾತುಗಳು, ಆ ಧೈರ್ಯ, ತಂದೆ - ತಾಯಿ ಆಶೀರ್ವಾದ ಹಾಗೂ ಜನರ ಪ್ರೀತಿ ನನ್ನ ಜತೆ ಇದೆ" ಎಂದು ರಕ್ಷಕ್ ಬುಲೆಟ್ ಹೇಳಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಕ್ಷಕ್ ಬುಲೆಟ್ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











