ರೇಣುಕಾಸ್ವಾಮಿ ಪ್ರಕರಣ; ಸಾಕ್ಷ್ಯಗಳ ವಿಚಾರಣೆಗೆ ಮುಂದಾದ ಕೋರ್ಟ್, ಡಲ್ಲಾದ ದರ್ಶನ್
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪ್ರಕರಣ ಪ್ರಮುಖ ತಿರುವಿಗೆ ಬಂದು ನಿಂತಿದೆ. ಅಂತೂ ಇಂತೂ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಸಿಸಿಎಚ್ 57 ನ್ಯಾಯಾಲಯದಲ್ಲಿ ಇಂದು(ಡಿಸೆಂಬರ್ 3) ವಿಚಾರಣೆ ನಡೆಯಿತು. ದರ್ಶನ್ ಸೇರಿ ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಈಗಾಗಲೇ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ದೋಷಾರೋಪ ಹೊರಿಸಿದ್ದು ತಮ್ಮ ಮೇಲಿನ ಆರೋಪಗಳನ್ನು ಎಲ್ಲರೂ ತಳ್ಳಿ ಹಾಕಿದ್ದರು. ಹಾಗಾಗಿ ಸಾಕ್ಷಿಗಳ ವಿಚಾರಣೆ ಆರಂಭವಾಗಬೇಕಿದೆ. ಪ್ರಕರಣದಲ್ಲಿ ಒಟ್ಟು 250ಕ್ಕೂ ಅಧಿಕ ಸಾಕ್ಷಿಗಳಿವೆ. ಸಹಾಯಕ ಎಸ್‌ಪಿಪಿ ಸಚಿನ್ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. FSL ಸಾಕ್ಷಿಗಳ ಜೊತೆಗೆ ಪ್ರತ್ಯಕ್ಷ ಸಾಕ್ಷಿಗಳು ಹಾಗೂ ತಾಂತ್ರಿಕ ಸಾಕ್ಷಿಗಳನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ. ಡಿಸೆಂಬರ್ 17ರಿಂದ ಸಾಕ್ಷ್ಯ ವಿಚಾರಣೆಗೆ ನ್ಯಾಯಾಲಯ ಮುಂದಾಗಿದೆ. ಮೊದಲಿಗೆ ಸಾಕ್ಷಿ ನಂಬರ್ 7 ಮತ್ತು 8ಕ್ಕೆ ಸಮನ್ಸ್ ನೀಡಿದ್ದಾರೆ. ಅದೇ ದಿನ ರೇಣುಕಾಸ್ವಾಮಿ ಪೋಷಕರು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

ವಿಚಾರಣೆ ವೇಳೆ ದರ್ಶನ್ ಮೌನವಾಗಿದ್ದರು ಎಂದು ವರದಿಯಾಗಿದೆ. ಇನ್ನು ಆರೋಪಿ ಜಗದೀಶ್ ತಮ್ಮನ್ನು ಚಿತ್ರದುರ್ಗದ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಆದರೆ ಅರ್ಜಿ ವಜಾ ಆಗಿದೆ. ಮತ್ತೊಬ್ಬ ಆರೋಪಿ ಅನುಕುಮಾರ್ ಕೂಡ ತಾಯಿಯ ಆರೋಗ್ಯ ಸಮಸ್ಯೆ ನೆಪವೊಡ್ಡಿ ಚಿತ್ರದುರ್ಗದ ಜೈಲಿಗೆ ಸ್ಥಳಾಂತರಿಸುವಂತೆ ಕೇಳಿದ್ದು ಅದಕ್ಕೂ ನ್ಯಾಯಾಲಯ ಸಮ್ಮತಿ ಸೂಚಿಸಿಲ್ಲ. ಐ ವಿಟ್ನೆಸ್ ವಿಚಾರಣೆ ಮುಗಿಯುವರೆಗೂ ಅದೆಲ್ಲಾ ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆರೋಪಿ ಲಕ್ಷ್ಮನ್ ಜೈಲಿನ ಕೋಣೆಯಲ್ಲಿ ಟಿವಿ ಬೇಕು ಎಂದು ಮನವಿ ಮಾಡಿದ್ದು ಅದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಟಿವಿ ಕೊಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಇನ್ನು ಆರೋಪಿಗಳ ಪರ ವಕೀಲರಿಗೆ ಸಾಕ್ಷ್ಯಗಳ ಪಟ್ಟಿಯನ್ನು ಹಂಚಿಕೆ ಮಾಡಲಾಗಿದೆ. ಸಾಕ್ಷಿಗಳಿಗೆ ಸಮನ್ಸ್ ನೀಡುವ ಬಗ್ಗೆ ನಾಳೆ ಆದೇಶ ಹೊರ ಬೀಳಲಿದೆ. ಇನ್ನು ದರ್ಶನ್ ಸೇರಿದಂತೆ ಆರೋಪಿಗಳ ಮನೆಯಲ್ಲಿ ದೊರೆತಿದ್ದ 82 ಲಕ್ಷ ರೂ. ಹಣವನ್ನು ಆದಾಯ ಇಲಾಖೆಗೆ ನೀಡುವಂತೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಪ್ರಕರಣದ ಬೆಳಕಿಗೆ ಬಂದಾಗ ಶವ ವಿಲೇವಾರಿ ಹಾಗೂ ಪ್ರಕರಣ ಮುಚ್ಚಿಹಾಕಲು ದರ್ಶನ್ ಮುಂದಾಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಆರೋಪಿಗಳ ಮನೆಗಳಲ್ಲಿ ಪೊಲೀಸರು ಹಣ ವಶಪಡಿಸಿಕೊಂಡಿದ್ದರು. ದರ್ಶನ್ ಮನೆಯಲ್ಲಿ 37.40 ಲಕ್ಷ ರೂ. ಸಿಕ್ಕಿತ್ತು. ನಿಯಮದ ಪ್ರಕಾರ ಒಬ್ಬ ವ್ಯಕ್ತಿ 10 ಲಕ್ಷ ರೂ. ನಗದು ಇಟ್ಟುಕೊಳ್ಳಲು ಅವಕಾಶವಿದೆ. ಅಪರಾಧ ಪ್ರಕರಣಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದರನ್ನು ಆದಾಯ ಇಲಾಖೆಗೆ ನೀಡಬೇಕು.
ಆ ಹಣವನ್ನು ತಮಗೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಆದೇಶದ ಪ್ರಕಾರ ಈಗ ಆ ಹಣ ಆದಾಯ ಇಲಾಖೆಗೆ ಹೋಗುವಂತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಆರೋಪಿಗಳೆಲ್ಲಾ ಮತ್ತೆ ಜೈಲು ಸೇರಿ 100 ದಿನ ಕಳೆದಿದೆ. ದರ್ಶನ್ ಅನುಪಸ್ಥಿತಿಯಲ್ಲೇ ಮುಂದಿನ ವಾರ 'ಡೆವಿಲ್' ಸಿನಿಮಾ ಬಿಡುಗಡೆ ಆಗ್ತಿದೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದನು. ಅದು ದರ್ಶನ್ ಗಮನಕ್ಕೆ ಬಂದು ಆತನನ್ನು ಅಪಹರಿಸಿ ಬುದ್ಧಿಕಲಿಸಲು ಮುಂದಾಗಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿದಾಗ ಆತನ ಪ್ರಾಣವೇ ಹೋಗಿತ್ತು ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿಯಾಗಿ ಜೈಲು ಸೇರುವಂತಾಗಿದೆ.


Click it and Unblock the Notifications











