ದರ್ಶನ್ ರೀತಿ 2ನೇ ಮದುವೆ ಆಗ್ತೀನಿ; ಪತಿ ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ
ಪತಿಯ ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಳಿಮಾವು ಬಳಿಯ ಅಕ್ಷಯ ನಗರದ ಅನುಷಾ ಮೃತ ದುರ್ದೈವಿ. 5 ವರ್ಷಗಳ ಹಿಂದೆ ಶ್ರೀಹರಿ ಎಂಬಾತನ ಜೊತೆ ಆಕೆಯ ಮದುವೆ ನಡೆದಿತ್ತು.
ಶ್ರೀಹರಿಯ ಅನೈತಿಕ ಸಂಬಂಧದಿಂದ ಪದೇ ಪದೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಡಿವೋರ್ಸ್ ಕೊಡುವಂತೆ ಆತ ಪಟ್ಟು ಹಿಡಿದಿದ್ದ. ಇದೇ ಕಾರಣಕ್ಕೆ ಜಗಳ ಮತ್ತಷ್ಟು ಹೆಚ್ಚಾಗಿತ್ತು. ಗುರುವಾರ(ಸೆಪ್ಟೆಂಬರ್ 5) ಸಂಜೆ ಅನುಷಾ ಮನೆಯ ಬಾತ್‌ರೂಮ್‌ನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಅಕ್ಷಯನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ದಂಪತಿ ವಾಸವಾಗಿದ್ದರು. ದಂಪತಿಗೆ 2 ವರ್ಷದ ಮಗು ಇದೆ. ಶ್ರೀಹರಿ ಸದಾ ನೈಟ್ ಶಿಫ್ಟ್ ಎಂದು ಹೋಗುತ್ತಿದ್ದ ಕಾರಣ ಅನುಷಾ ಪೋಷಕರು ಮಗಳ ಜೊತೆ ಮನೆಯಲ್ಲಿ ಇದ್ದರು. ಆ ದಿನ ತಂದೆ ಎಲ್ಲೋ ಹೊರಗೆ ಹೋಗಿದ್ದರು. ತಾಯಿ ಹೊರಗೆ ಮಗುವಿಗೆ ಊಟ ತಿನ್ನಿಸುತ್ತಿದ್ದರು. ಈ ವೇಳೆ ಗಂಡ ಹೆಂಡತಿ ರೂಮ್ ಬಾಗಿಲು ಹಾಕಿಕೊಂಡು ಜಗಳವಾಡಿದ್ದಾರೆ.
ಬಾತ್‌ರೂಮ್‌ಗೆ ಹೋಗಿದ್ದ ಅನುಷಾ ಪತಿಗೆ ವೀಡಿಯೋ ಕಾಲ್ ಮಾಡಿ ಬೆಂಕಿ ಹಚ್ಚಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಸಾಯಿ ಎಂದು ಶ್ರೀಹರಿ ಹೇಳಿದಾಗ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ಅನುಷಾ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಗೊತ್ತಿದ್ದು ಗೊತ್ತಿಲ್ಲದಂತೆ ಶ್ರೀಹರಿ ಸುಮ್ಮನಿದ್ದು ಕೆಲ ನಿಮಿಷಗಳ ಬಳಿಕ ಅತ್ತೆಯನ್ನು ಕರೆದು ನಿಮ್ಮ ಮಗಳು ಏನೋ ಮಾಡ್ಕೊಂಡಿದ್ದಾಳೆ ನೋಡಿ ಎಂದಿದ್ದಾನೆ.
ಕೊನೆಗೆ ಅನುಷಾ ತಾಯಿಯೇ ಬಾತ್‌ರೂಮ್ ಬಾಗಿಲು ಮುರಿದು ಮಗಳನ್ನು ಹೊರಗೆ ಎಳೆದು ತಂದಿದ್ದಾರೆ. ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಅನುಷಾ ಜೀವ ಹೋಗಿದೆ. ಕೆಲ ದಿನಗಳ ಹಿಂದೆ ಇದೇ ರೀತಿ ಜಗಳ ನಡೆದು ಮಗಳು ಜೈ ಕುಯ್ದುಕೊಂಡಿದ್ದಳು ಎಂದು ತಾಯಿ ಅರುಣಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅರುಣಾ ತಮ್ಮ ಸೋದರಿ ಸಂಬಂಧಿ ಶ್ರೀಹರಿಗೆ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ಆತನ ಪೋಷಕರು ಶಿರಸಿಯಲ್ಲಿದ್ದರು. ಡಿವೋರ್ಸ್ ಕೊಡಲು ಸಾಧ್ಯವಿಲ್ಲ ಎಂದು ಅನುಷಾ ಹೇಳಿದಾಗ ನಟ ದರ್ಶನ್ 2ನೇ ಮದುವ ಆಗಿಲ್ವಾ? ನಾನು ಆದರೆ ತಪ್ಪೇನು? ಎಂದು ಶ್ರೀಹರಿ ಹೇಳುತ್ತಿದ್ದನಂತೆ. ಈ ವಿಚಾರವನ್ನು ಅನುಷಾ ತಾಯಿ ವಿವರಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಇರುವವರು ಎಲ್ಲರಿಗೂ ಮಾದರಿ ಆಗಬೇಕು. ಸೆಲೆಬ್ರೆಟಿಗಳನ್ನು ನೋಡಿ ಕೆಲವರು ಅನುಕರಣೆ ಮಾಡುತ್ತಾರೆ. ಇದೇ ಕಾರಣಕ್ಕೆ ನಟ ದರ್ಶನ್ ವರ್ತನೆಗಳ ಬಗ್ಗೆ ಕೆಲವರು ಆಗಾಗ್ಗೆ ಟೀಕಿಸುತ್ತಿದ್ದರು. ಆದರೆ ಇಲ್ಲಿ ದರ್ಶನ್ ವೈಯಕ್ತಿಕ ಜೀವನ ಅನುಸರಿಸಲು ಹೋಗಿ ಪತ್ನಿಯ ಸಾವಿಗೆ ಕಾರಣವಾಗಿದ್ದಾನೆ.
ಅನುಷಾ ಆತ್ಮಹತ್ಯೆ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಶ್ರೀಹರಿಯನ್ನು ವಶಕಕ್ಕೆ ಪಡೆದುಕೊಂಡಿದ್ದಾರೆ. ಅನುಷಾ ತಂದೆ ಹೇಮಂತ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ 2ನೇ ಮದುವೆ ಆಗಿದ್ದಾರೆ. ಅವರು ಸಂತೋಷವಾಗಿ ಇಲ್ವಾ? ಎಂದು ಶ್ರೀಹರಿ ನಮ್ಮ ಮಗಳಿಗೆ ಹೇಳುತ್ತಿದ್ದ ಎಂದು ಹೇಮಂತ್ ತಿಳಿಸಿದ್ದಾರೆ.


Click it and Unblock the Notifications











