ರಮ್ಯಾಗೆ ಅವಹೇಳನಕಾರಿ ಸಂದೇಶ; ಮಹಿಳಾ ಆಯೋಗದ ಬಳಿಕ ಗೃಹ ಸಚಿವರಿಗೆ ಫೈರ್ ಸಂಸ್ಥೆ ಪತ್ರ
ಚಂದನವನದಲ್ಲಿ ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇದೀಗ ಮಹಿಳಾ ಆಯೋಗ ಈ ಬಗ್ಗೆ ಪ್ರತಿಕ್ರಿಯಿಸಿದೆ. ನಟಿ ರಮ್ಯಾ ಅವರಿಗೆ ಅವಹೇಳನಕಾರಿ ಸಂದೇಶ ಕಳುಹಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ರಾಜ್ಯ ಮಹಿಳಾ ಆಯೋಗ ಕ್ರಮಕ್ಕೆ ಆಗ್ರಹಿಸಿದೆ.
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಬರೆದ ಪತ್ರವನ್ನು ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಅವರನ್ನು ಕೆಲ ಕಿಡಿಗೇಡಿಗಳು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಆಕೆಗೆ ನೇರವಾಗಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದಾರೆ. ಇದನ್ನು ಸ್ಕ್ರೀನ್‌ಶಾಟ್ ಸಮೇತ ರಮ್ಯಾ ಬಹಿರಂಗಪಡಿಸಿದ್ದರು. ಪವಿತ್ರಾ ಗೌಡಗೆ ಕೊನೆಯಾದ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್‌ಗೂ ಈಗ ಡಿಬಾಸ್ ಫ್ಯಾನ್ಸ್ ನನಗೆ ಕಳುಹಿಸಿರುವ ಮೆಸೇಜ್‌ಗಳಿಗೂ ವ್ಯತ್ಯಾಸವಿಲ್ಲ ಎಂದು ರಮ್ಯಾ ಪೋಸ್ಟ್ ಮಾಡಿದ್ದರು.

ಮಹಿಳೆಯರ ಬಗ್ಗೆ ಕೆಲವರು ಇಂಥ ಕೀಳು ಮನಸ್ಥಿತಿ ಹೊಂದಿರುವುದರಿಂದಲೇ ಅವರ ಮೇಲೆ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ರಮ್ಯಾ ಅಸಮಾಧಾನ ಹೊರ ಹಾಕಿದ್ದರು. ವಕೀಲರ ಜೊತೆ ಚರ್ಚಿಸಿ ಸೈಬರ್ ಕ್ರೈಂಗೆ ದೂರು ನೀಡುವುದಾಗಿ ನಟಿ ರಮ್ಯಾ ಟಿವಿ9 ವಾಹಿನಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೆ ರಮ್ಯಾ ಪರವಾಗಿ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.
"ಸಮೂಹ ಮಾಧ್ಯಮ ಹಾಗೂ ದಿನಪತ್ರಿಕೆಗಳ ವರದಿ ದಿನಾಂಕ: 27.07.2025
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ.
ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ" ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳಾ ಆಯೋಗದ ಬಳಿಕ ಇದೀಗ ಫೈರ್(Film industry for Rights and Equality) ಸಂಸ್ಥೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದೆ. ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿರುವ ವಿಚಾರ ಸಂಂಧ ಆಕೆಯ ಪರ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ ಸಂಸ್ಥೆ ನಿಂತಿದೆ.
"ಭಾರತದ ಸಂವಿಧಾನದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಹಕ್ಕುಗಳು (ಆರ್ಟಿಕಲ್ 19) ನಮ್ಮ ಪ್ರಜಾಪ್ರಭುತ್ವದ ಬಾಳಿಗೆ ಆಧಾರಸ್ತಂಭವಾಗಿವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಅವುಗಳ ನಡುವೆ ಸಂವಾದ ನಡೆಯಬೇಕು. ಆದರೆ ಆ ಸಂವಾದ ಸಭ್ಯತೆಯೊಂದಿಗೆ ಮತ್ತು ಗೌರವಪೂರ್ಣವಾಗಿ ನಡೆಯಬೇಕು.
ರಮ್ಯ ಅವರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ದೌರ್ಜನ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದೆ ಮತ್ತು ಇದು ಆನ್‌ಲೈನ್ ಮಹಿಳಾ ದ್ವೇಷದ ಆಳವಾದ ಸಮಸ್ಯೆಯನ್ನು ತೋರಿಸುತ್ತದೆ" ಪತ್ರದಲ್ಲಿ ತಿಳಿಸಲಾಗಿದೆ.
"ಮಹಿಳೆಯರ ವಿರುದ್ಧದ ಅವಮಾನಕಾರಕ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಭಾರತ ದಂಡಸಂಹಿತೆಯ ಸೆಕ್ಷನ್‌ಗಳು (499, 500, 505(2), 509) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (ಸೈಬರ್ ಕಾನೂನು) ಅಡಿಯಲ್ಲಿ
ದಂಡನೀಯವಾಗಿವೆ. ಕರ್ನಾಟಕ ಗೃಹ ಇಲಾಖೆ ಮತ್ತು ಸೈಬರ್ ಕ್ರೈಮ್ ಪ್ರಾಧಿಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು FIRE ಸಂಸ್ಥೆಯು ಒತ್ತಾಯಿಸುತ್ತಿದೆ" ಎಂದು ಫೈರ್ ಸಂಸ್ಥೆ ಮನವಿ ಮಾಡಿದೆ.


Click it and Unblock the Notifications











