ಸನ್ನಿ ಲಿಯೋನ್ ಅನ್ನೋದೆ ಭ್ರಮೆ ಎಂದಿದ್ದೇಕೆ ಉಪೇಂದ್ರ ? ವೈರಲ್ ಫೋಟೊಗಳ ಹಿಂದಿನ ಸತ್ಯವೇನು ?
ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ 'ನೀಲಿ' ನೆರಳು ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಟಿಯಾಗಿ ನೆಲೆಯೂರಿದ್ದಾರೆ.
ಇಂಥಾ ಸನ್ನಿ ಲಿಯೋನ್ ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ಬಹುತೇಕ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಳಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಆ ಪೈಕಿ ಉಪೇಂದ್ರ ನಿರ್ದೇಶನದ ಯುಐ ಚಿತ್ರ ಕೂಡ ಒಂದು ಅನ್ನುವುದು ಅನೇಕರ ವಾದ.

ನಿಜಾ. ಉಪೇಂದ್ರ ಆಗಲಿ ಸನ್ನಿ ಲಿಯೋನ್ ಆಗಲಿ ಅಥವಾ ಚಿತ್ರತಂಡದ ಬೇರೆ ಸದಸ್ಯರೇ ಆಗಲಿ ಈ ವಿಚಾರದ ಕುರಿತು ಹಿಂದೆ ಮಾತನಾಡಿಲ್ಲ. ಸನ್ನಿ ಲಿಯೋನ್ ನಮ್ಮ ಚಿತ್ರದಲ್ಲಿ ಸೊಂಟ ಬಳುಕಿಸಿದ್ದಾರೆ ಎಂದು ಹೇಳಿಲ್ಲ. ಆದರೆ. ಯುಐ ಅಂಗಳದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿರುವುದು ನೂರಕ್ಕೆ ನೂರು ಸತ್ಯ. ಇದಕ್ಕೆ ಯುಐ ಚಿತ್ರೀಕರಣದ ಸಮಯದಲ್ಲಿ ತೆಗೆಯಲಾದ ಫೋಟೊಗಳು ಸಾಕ್ಷಿ. ಆ ಫೋಟೊಗಳು ವೈರಲ್ ಆಗಿವೆ ಕೂಡ.
ಹೀಗಾಗಿಯೇ ಯುಐ ಚಿತ್ರವನ್ನು ನೋಡುವಾಗ ಅನೇಕರು ಸನ್ನಿಯ ದರ್ಶನಕ್ಕೆ ಕಾಯುತ್ತಿದ್ದರು. ಹಾಡು ಈಗ ಬರಬಹುದು, ಇನ್ನೂ ಸ್ವಲ್ಪ ಹೊತ್ತು ಆದ ನಂತರ ಬೆಳ್ಳಿ ಪರದೆಯ ಮೇಲೆ ಸನ್ನಿ ಲಿಯೋನ್ ಕಾಣಿಸಿಕೊಳ್ಳಬಹುದೆಂದು ಎಲ್ಲರು ಕಾಯುತ್ತಿದ್ದರು. ಆದರೆ ಈ ಕಾಯುವಿಕೆಗೆ ಉತ್ತರ ಸಿಗಲಿಲ್ಲ. ಸನ್ನಿ ಲಿಯೋನ್ ಹಾಡು ಬರಲೇ ಇಲ್ಲ. ಈ ಕಾರಣಕ್ಕೆ ಸನ್ನಿ ಲಿಯೋನ್ ಹಾಡಿಗೆ ಉಪೇಂದ್ರ ಕತ್ತರಿ ಹಾಕಿರಬಹುದು ಎಂದು ಅನೇಕರು ಅಂದುಕೊಂಡಿದ್ದರು. ಯುಐ ಚಿತ್ರದಲ್ಲಿ ಸನ್ನಿ ಲಿಯೋನ್ ಹಾಡು ತೆಗೆದು ಹಾಕಿದ್ದೇಕೆ ಎನ್ನುವ ಪ್ರಶ್ನೆಯನ್ನು ಉಪೇಂದ್ರ ಅವರಿಗೆ ಕೇಳುತ್ತಿದ್ದರು. ಈ ಪ್ರಶ್ನೆಗಳಿಗೆ ಉಪೇಂದ್ರ ಈಗ ಉತ್ತರವನ್ನು ನೀಡಿದ್ದಾರೆ.
ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಈ ಕುರಿತು ಮಾತನಾಡಿರುವ ಉಪೇಂದ್ರ, ಸನ್ನಿ ಲಿಯೋನ್ ಅನ್ನುವುದೇ ಒಂದು ಭ್ರಮೆ ಎಂದು ಹೇಳಿದ್ಧಾರೆ. ಚಿತ್ರದಲ್ಲಿ ಅವರು ಇಲ್ಲ ಅಂದರೆ ಅವರು ಇಲ್ಲ ಎಂದೇ ಅರ್ಥ ಎಂದು ಹೇಳಿರುವ ಉಪೇಂದ್ರ ಚಿತ್ರದಲ್ಲಿ ಯಾವುದೋ ಒಂದು ವಾಯ್ಸ್ ಬರುತ್ತೆ ಅದನ್ನು ನೀವು ಸನ್ನಿ ಲಿಯೋನ್ ಅಂದುಕೊಂಡಿರಬಹುದು ಎಂದು ಹೇಳಿದ್ದಾರೆ. ನಾನು ಸನ್ನಿ ಲಿಯೋನ್ ನಮ್ಮ ಚಿತ್ರದಲ್ಲಿದ್ದಾರೆ ಎಂದು ಯಾವತ್ತು ಹೇಳಿಯೇ ಇಲ್ಲ ನಾನು ಯಾವತ್ತಾದರೂ ಹೇಳಿದ್ದರೆ ಅದನ್ನು ನನಗೆ ತೋರಿಸಿ ಎಂದಿರುವ ಉಪೇಂದ್ರ ಅದೆಲ್ಲವೂ ನಿಮ್ಮ ಕಲ್ಪನೆಯಷ್ಟೇ ಎಂದಿದ್ದಾರೆ. ನಮ್ಮ ಚಿತ್ರದಲ್ಲಿ ಸನ್ನಿ ಲಿಯೋನ್ ಇದ್ದಾರೆ ಎಂದು ಯಾರೋ ಗಾಳಿ ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಹೇಳಿದ್ದಾರೆ. ವೇದಿಕೆಯಲ್ಲಿಯೇ ಸನ್ನಿ ಲಿಯೋನ್ ಇದ್ದಾರೆ ಎಂದು ಹೇಳಿದ್ದು ಯಾರು ಎಂದು ಚಿತ್ರತಂಡಕ್ಕೆ ಪ್ರಶ್ನೆ ಮಾಡಿದ್ಧಾರೆ.
ಉಪೇಂದ್ರ ಅವರ ಈ ಮಾತುಗಳನ್ನು ಕೇಳಿದ ಅನೇಕರು ಈಗ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯುಐ ಚಿತ್ರದಲ್ಲಿ ಸನ್ನಿ ಲಿಯೋನ್ ಇಲ್ಲವೆಂದ ಮೇಲೆ ಯುಐ ಚಿತ್ರದಲ್ಲಿ ಸನ್ನಿ ಲಿಯೋನ್ ಇದ್ದಾರೆ ಎನ್ನುವಂತೆ ಪೋಸ್ಟರ್‌ನ ಹೊರ ಬಿಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಉಪೇಂದ್ರ ಹೇಳಿರುವಂತೆ ಯುಐ ಚಿತ್ರದಲ್ಲಿ ಸನ್ನಿ ಲಿಯೋನ್ ಇಲ್ಲವೆನ್ನುವುದಾದರೆ ಸನ್ನಿ ಲಿಯೋನ್ ಜೊತೆ ಫೋಟೊ ತೆಗೆಸಿಕೊಂಡಿದ್ದೇಕೆ ಎನ್ನುವ ಪ್ರಶ್ನೆಯನ್ನು ಕೂಡ ಉಪೇಂದ್ರ ಅವರಿಗೆ ಅನೇಕರು ಕೇಳುತ್ತಿದ್ಧಾರೆ. ಉಪೇಂದ್ರ ಕೂಡ ಗಾಂಧಿನಗರದ ಸಂಪ್ರದಾಯಕ್ಕೆ ಒಗ್ಗಿಕೊಂಡು ಗಿಮಿಕ್ ಮಾಡುವುದನ್ನು ಕಲಿತರಾ ಹೇಗೆ ಎಂದು ತಮ್ಮ ತಮ್ಮಲ್ಲಿಯೇ ಪ್ರಶ್ನೆಯನ್ನು ಮಾಡಿಕೊಳ್ಳುತ್ತಿದ್ಧಾರೆ.


Click it and Unblock the Notifications











