ಗಡಿಗಳ ಒಡೆದು ವಿಶ್ವದೆಲ್ಲೆಡೆ ಹವಾ ಎಬ್ಬಿಸಿರುವ 'ಕೆಜಿಎಫ್ 2'
ಕೆಜಿಎಫ್ (ಕೋಲಾರ ಗೋಲ್ಡ್ ಫೀಲ್ಡ್ಸ್) ಎಂಬ ಕರ್ನಾಟಕದ ಒಂದೂವರೆ ಲಕ್ಷಕ್ಕಿಂತ ತುಸುವೇ ಹೆಚ್ಚು ಜನಸಂಖ್ಯೆಯುಳ್ಳ ಸಣ್ಣ ತಾಲ್ಲೂಕಿನ ಹೆಸರನ್ನು ಸಿನಿಮಾ ಮೂಲಕ ವಿಶ್ವದ ಮೂಲೆ-ಮೂಲೆಗೆ ತಲುಪಿಸಿದ್ದಾರೆ ಪ್ರಶಾಂತ್ ನೀಲ್-ವಿಜಯ್ ಕಿರಗಂದೂರು ಹಾಗೂ ಯಶ್.
'ಕೆಜಿಎಫ್ 2' ಸಿನಿಮಾದ ಹವಾ ಊಹೆಗೂ ನಿಲುಕದಷ್ಟು ಎತ್ತರಕ್ಕೆ ಏರಿಬಿಟ್ಟಿದೆ. ಕರ್ನಾಟಕ, ಭಾರತ ಬಿಟ್ಟು ವಿದೇಶಗಳಲ್ಲಿಯೂ 'ಕೆಜಿಎಫ್ 2' ಹವಾ ಅದ್ಯಾವ ಮಟ್ಟಿಗೆ ಇದೆಯೆಂದರೆ ವಿಶ್ವ ಪ್ರಸಿದ್ಧ ಫುಟ್‌ಬಾಲ್ ತಂಡ ಸಹ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ 'ಕೆಜಿಎಫ್' ಬಗ್ಗೆ ಟ್ವೀಟ್ ಮಾಡಿದೆ!
ಹೌದು, ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮೂರನೇ ಫುಟ್‌ಬಾಲ್ ಕ್ಲಬ್ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಸಿಟಿಯ 'ಮ್ಯಾಂಚೆಸ್ಟರ್ ಯುನೈಟೆಡ್' ಫುಟ್‌ಬಾಲ್ ಕ್ಲಬ್‌ನ ಅಧಿಕೃತ ಟ್ವೀಟ್ ಖಾತೆಯಲ್ಲಿ 'ಕೆಜಿಎಫ್' ಬಗ್ಗೆ ಟ್ವೀಟ್ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಹೇಗೆ ಆರ್‌ಸಿಬಿ ತಂಡವು, 'ಕೆಜಿಎಫ್' ನಲ್ಲಿ 'ಕೆ' ಎಂದರೆ ಕೊಹ್ಲಿ, 'ಜಿ' ಎಂದರೆ ಗ್ಲೇನ್ ಮ್ಯಾಕ್ಸ್‌ವೆಲ್, 'ಎಫ್' ಎಂದರೆ ಫಾಫ್ ಡುಪ್ಲಿಸಿಸ್ ಎಂದು ಟ್ವೀಟ್ ಮಾಡಿತ್ತೊ ಹಾಗೆಯೇ ಈಗ ಮ್ಯಾಂಚೆಸ್ಟರ್ ಯುನೈಟೆಡ್ ಸಹ ತಮ್ಮ ತಂಡದ ಆಟಗಾರರಾದ ಕೆವಿನ್, ಗುಂಡೊ ಹಾಗೂ ಫೋಡನ್ ಅವರ ಹೆಸರುಗಳನ್ನು ಸೇರಿಸಿ 'ಕೆಜಿಎಫ್' ಎಂದು ಟ್ವೀಟ್ ಮಾಡಿದೆ. ಜೊತೆಗೆ 'ಇದು ನಮ್ಮ ಕೆಜಿಎಫ್' ಎಂದು ಹೇಳಿಕೊಂಡಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ಸಖತ್ ವೈರಲ್ ಆಗಿವೆ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮ್ಯಾಂಚೆಸ್ಟರ್ ಯುನೈಟೆಡ್ ಕನ್ನಡ ಸಿನಿಮಾ ಬಗ್ಗೆ ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಹೊಂಬಾಳೆ ಫಿಲಮ್ಸ್ ಸಹ ಈ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದು, 'ಕೆಜಿಎಫ್ ಎನ್ನುವುದು ದೈತ್ಯ ಶಕ್ತಿ, ಮಾನ್‌ಸ್ಟರ್ ಕಡೆಯಿಂದ ನಿಮಗೆ ಹಲೊ' ಎಂದು ಪ್ರತಿಕ್ರಿಯೆ ನೀಡಿದೆ.
ಮ್ಯಾಂಚೆಸ್ಟರ್ ಯುನೈಟೆಡ್ 144 ವರ್ಷ ಇತಿಹಾಸ ಇರುವ ಫುಟ್‌ಬಾಲ್ ಕ್ಲಬ್ ಆಗಿದೆ. ಇದರ ಸ್ಥಾಪನೆ ಆಗಿದ್ದು 1878 ರಲ್ಲಿ 1902 ರಲ್ಲಿ ಇದಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ಎಂದು ಹೆಸರು ಬದಲಾಯಿಸಲಾಯ್ತು. ಅಂದಿನಿಂದ ಇಂದಿನವರೆಗೆ ಹಲವಾರು ಫುಟ್‌ಬಾಲ್ ಕ್ಲಬ್ ಟೂರ್ನಿಗಳಲ್ಲಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ.
ವಿಶ್ವದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈಗ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಆಡುತ್ತಿದ್ದಾರೆ.
'ಕೆಜಿಎಫ್ 2' ಸಿನಿಮಾ ಈವರೆಗೆ ಕನ್ನಡದ ಯಾವ ಸಿನಿಮಾಗಳೂ ಬಿಡುಗಡೆ ಆಗದ ದೇಶಗಳಲ್ಲಿ ಸಹ ಬಿಡುಗಡೆ ಆಗಿದೆ. ಯೂರೋಪ್‌ನ ಹಲವು ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಗ್ರೀಸ್‌ನಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡ ಸಿನಿಮಾ 'ಕೆಜಿಎಫ್ 2' ಆಗಿದೆ. ಇಂಗ್ಲೆಂಡ್‌ನ ಲಂಡನ್‌ನಲ್ಲಿ ಸಹ ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಅಮೆರಿಕದಲ್ಲಿ ಮೊದಲನೇ ದಿನವೇ 8 ಕೋಟಿಗೂ ಹೆಚ್ಚು ಹಣ ಗಳಿಸಿ ದಾಖಲೆ ನಿರ್ಮಿಸಿದೆ. ಒಟ್ಟಾರೆ ಭಾರತದಲ್ಲಿ ಮಾತ್ರವೇ ಅಲ್ಲದೆ, ವಿದೇಶದಲ್ಲಿ ಸಹ 'ಕೆಜಿಎಫ್ 2' ಕಮಾಲ್ ಮಾಡುತ್ತಿದೆ.


Click it and Unblock the Notifications











