'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ 'ಯುವ' ಆಗಿ ಚಿತ್ರರಂಗಲ್ಲೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಡ್ಯಾನ್ಸ್, ಸ್ಟಂಟ್ಸ್‌ನಿಂದ ಸಿನಿರಸಿಕರ ಮನಗೆದ್ದಿದ್ದಾರೆ. ಅದ್ಧೂರಿಯಾಗಿ ಯುವ ಆರಂಗೇಟ್ರಂ ಆಗಿದೆ. ಆದರೆ ಇದಕ್ಕೂ ಮುನ್ನ 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಅವರು ಚಿತ್ರರಂಗಕಕೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತಿದೆ.
ಐತಿಹಾಸಿಕ ಕಥಾಹಂದರದ 'ಯುವ ರಣಧೀರ ಕಂಠೀರವ' ಟೀಸರ್ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಲಾಗಿತ್ತು. ಪುನೀತ್ ರಾಜ್‌ಕುಮಾರ್ ಟೀಸರ್ ನೋಡಿ ಮೆಚ್ಚಿಗೆ ಸೂಚಿಸಿದ್ದರು. ಆದರೆ ಅವರ ಅಗಲಿಕೆ ಬಳಿಕ ಆ ಸಿನಿಮಾ ಸಂಪೂರ್ಣವಾಗಿ ನಿಂತೇ ಹೋಯಿತು. ಸದ್ಯಕ್ಕೆ ಆ ಸಿನಿಮಾ ನಿರ್ಮಾಣವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದ ಬರಹಗಾರ ಭಗೀರಥ ಕೂಡ ಇದೇ ಮಾತು ಹೇಳಿದ್ದಾರೆ.

ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್ ಐತಿಹಾಸಿಕ ಪಾತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ಬರಲು ಮುಂದಾಗಿದ್ದರು. 'KGF' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದರು. ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಟೀಸರ್ ಚಿತ್ರೀಕರಣ ಮಾಡಲಾಗಿತ್ತು. ಪುನೀತ್ ರಾಜ್‌ಕುಮಾರ್ ಚಿತ್ರತಂಡ ಬೆನ್ನಿಗೆ ನಿಂತಿದ್ದರು.
ವೀರ ಯೋಧನ ಲುಕ್‌ನಲ್ಲಿ ಭರ್ಜಿ ಹಿಡಿದು ಯುವ ರಾಜ್‌ಕುಮಾರ್ ಅಬ್ಬರಿಸಿದ್ದರು. ಅಭಿಮಾನಿಗಳಂತು 'ಯುವ ರಣಧೀರ ಕಂಠೀರವ' ಲುಕ್ ನೋಡಿ ಫಿದಾ ಆಗಿದ್ದರು. ಆದಷ್ಟು ಬೇಗ ಸಿನಿಮಾ ಸಿನಿಮಾ ನೋಡಬೇಕು ಎಂದು ಕೊಂಡಿದ್ದರು. ಆದರೆ ಭಾರೀ ಬಜೆಟ್ ಸಿನಿಮಾ ಆಗಿದ್ದರಿಂದ ನಿರ್ಮಾಪಕರು ಹಣ ಹೂಡಲು ಹಿಂದೇಟು ಹಾಕಿದ್ದರು. ಬಳಿಕ ಅಪ್ಪು ಬೆಂಬಲವಿಲ್ಲದೇ ಸಿನಿಮಾ ಮುಂದುವರಿಯಲಿಲ್ಲ.
'ಯುವ ರಣಧೀರ ಕಂಠೀರವ' ಸಿನಿಮಾ ನಿಂತ ಬಳಿಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಯುವ' ಸಿನಿಮಾ ಶುರುವಾಯಿತು. ಆ ಸಿನಿಮಾ ಸಕ್ಸಸ್ ಬಳಿಕ ಯುವ ರಾಜ್‌ಕುಮಾರ್ ಬೇರೆ ಬೇರೆ ಕಥೆಗಳನ್ನು ಕೇಳುತ್ತಿದ್ದಾರೆ. ಇದೆಲ್ಲದರ ನಡುವೆ 'ಯುವ ರಣಧೀರ ಕಂಠೀರವ' ಸಿನಿಮಾ ಬರುತ್ತಾ? ಇಲ್ವಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಬರಹಗಾರ ಭಗೀರಥ ಈ ಬಗ್ಗೆ ಗೌರೀಶ್ ಅಕ್ಕಿ ಯೂಟ್ಯೂಬ್ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. 'ವಿರಾಟ್', 'ಬೃಂದಾವನ', ಸ್ವೀಟಿ ಹೀಗೆ ಕೆಲ ಸಿನಿಮಾಗಳಿಗೆ ಬರಹಗಾರರಾಗಿ ಅವರು ಕೆಲಸ ಮಾಡಿದ್ದಾರೆ. "ಯುವ ರಣಧೀರ ಕಂಠೀರವ' ಚಿತ್ರ ಸದ್ಯಕ್ಕೆ ಬರುವುದು ಕಷ್ಟ ಎನಿಸುತ್ತಿದೆ. ದೊಡ್ಡ ಬಂಡವಾಳ ಬೇಕಾಗಿರುವುದು ಅದಕ್ಕೆ ಮುಖ್ಯ ಕಾರಣ. ಹಾಗಾಗಿ ಆ ಕಥೆಯನ್ನು ಪುಸ್ತಕದ ರೂಪದಲ್ಲಿ ಹೊರ ತರಲು ಮುಂದಾಗಿದ್ದೇನೆ" ಎಂದಿದ್ದಾರೆ.
"ಅಪ್ಪು ಸರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಕಥೆ ಅದು. ಅವರಿಗೆ ಕಥೆ ಹೇಳಬೇಕು ಎಂದು ಬರೆದಿದ್ದೆ. ಅದಕ್ಕಾಗಿ ಒಂದು ವರ್ಷ ರೀಸರ್ಚ್ ಮಾಡಿದ್ದೆ. ನವೆಂಬರ್ ವೇಳೆಗೆ ಆ ಕಥೆಯನ್ನು ಪುಸ್ತಕದ ರೂಪದಲ್ಲಿ ಅಪ್ಪು ಸರ್‌ಗೆ ಡೆಡಿಕೇಟ್ ಮಾಡುತ್ತೇನೆ" ಎಂದು ಭಗೀರಥ ತಿಳಿಸಿದ್ದಾರೆ. 'ಯುವ ರಣಧೀರ ಕಂಠೀರವ' ಸಿನಿಮಾ ಬಂದೇ ಬರುತ್ತದೆ ಎಂದು ಕಾಯುತ್ತಿರುವ ಸಾಕಷ್ಟು ಜನ ಅಭಿಮಾನಿಗಳು ಇದು ಬೇಸರದ ಸಂಗತಿ.
ಮತ್ತೊಂದು ಕಡೆ ಯುವ ರಾಜ್‌ಕುಮಾರ್ 2ನೇ ಸಿನಿಮಾ ಯಾವುದು? ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯುವ ಸಿನಿಮಾ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ. ಮೊನ್ನೆ(ಏಪ್ರಿಲ 23) ಯುವ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡರು. ಆ ಸಂಭ್ರಮದಲ್ಲೇ 2ನೇ ಸಿನಿಮಾ ಘೋಷಣೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.


Click it and Unblock the Notifications











