'ಕಾಟೇರ' ಚಿತ್ರದಲ್ಲಿ ದರ್ಶನ್ ಪಾತ್ರ ಏನು? ಸೀಕ್ರೆಟ್ ರಿವೀಲ್ ಮಾಡಿದ್ರು ಜಡೇಶ್ ಹಂಪಿ
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಆರಾಧನಾ ನಟಿಸಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗಿದೆ. 50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ.
'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ 'ಕಾಟೇರ' ಕಥೆ ಸುತ್ತುತ್ತದೆ ಎಂದು ಈಗಾಗಲೇ ಚಿತ್ರತಂಡ ಹೇಳಿದೆ. ನಿರ್ದೇಶಕ ಜಡೇಶ್ ಹಂಪಿ ಜೊತೆ ಸೇರಿ ತರುಣ್ ಸುಧೀರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ 'ಗುರುಶಿಷ್ಯರು' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಕಥೆಯ ಬಗ್ಗೆ ಚಿತ್ರತಂಡ ಬಹಳ ನಂಬಿಕೆಯಿಂದ ಇದೆ.

ಪೋಸ್ಟರ್, ಟೀಸರ್ ಹಾಗೂ ಸಾಂಗ್ಸ್ ನೋಡಿದಾಗ ಚಿತ್ರದಲ್ಲಿ ದರ್ಶನ್ ಹಳ್ಳಿಹೈದನಾಗಿ ನಟಿಸಿದ್ದಾರೆ ಎನ್ನುವುದು ಗೊತ್ತಾಗಿತ್ತು. ಆದರೆ ಚಿತ್ರದಲ್ಲಿ ಅವರ ಪಾತ್ರ ಏನು ಎನ್ನುವುದನ್ನು ಇದೀಗ ಜಡೇಶ್ ಹಂಪಿ ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ದರ್ಶನ್ ಪಾತ್ರ ಏನು ಹಾಗೂ ಅದು ಎಷ್ಟು ಪವರ್‌ಫುಲ್ ಎನ್ನುವುದನ್ನು ವಿವರಿಸಿದ್ದಾರೆ.
"ದರ್ಶನ್ ಅವರ ಪಾತ್ರ ಬಹಳ ಪವರ್‌ಫುಲ್ ಪಾತ್ರ. ಬಹಳ ಫೋರ್ಸ್ ಇರುವಂತಹ ಪಾತ್ರ. ಕುಲುಮೆಯಲ್ಲಿ ಕೆಲಸ ಮಾಡುವಂತಹ ಪಾತ್ರ ಅದು. ಕಬ್ಬಿಣದ ಜೊತೆ ಬೆಳೆದಂತಹ ಪಾತ್ರ. ಮೋಷನ್ ಟೀಸರ್‌ನಲ್ಲೇ ನಾವು ಹೇಳಿದ್ವಿ. ಪ್ರತೀ ಮಚ್ಚು ಎರಡ್ ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ.. ರಕ್ತದಲ್ಲಿ ನೆಂದಾಗ ಅಂತ. ಅಂದ್ರೆ ಆ ಪಾತ್ರ ಎರಡನ್ನು ನೋಡಿರುತ್ತೆ. ಹಾಗಾಗಿ ಆ ಪಾತ್ರ ಅಷ್ಟು ಮಾಸ್."
"ಆ ಪಾತ್ರದ ಮುಂದೆ ಅನ್ಯಾಯವಾಗಬಾರ್ದು. ಯಾಕಂದ್ರೆ ಸುಮ್ನೆ ಇರಲ್ಲ. ಆ ಪಾತ್ರಕ್ಕೆ ಗೊತ್ತಾಗಬಾರದು. ಅದು ಹಳ್ಳಿಯಲ್ಲಿ ಒಂದು ವಾಡಿಕೆಯಾಗಿರಬೇಕು. ಗೊತ್ತಾದರೆ ಆ ಪಾತ್ರ ರೆಬಲ್ ಆಗುತ್ತದೆ. ಈ ವಿಚಾರ ಇಟ್ಟುಕೊಂಡು ಪಾತ್ರ, ಕಥೆ ಬರೆಯೋದು ಬಹಳ ಚಾಲೆಂಜಿಂಗ್ ಆಗಿತ್ತು" ಎಂದು ಜಡೇಶ್ ಹೇಳಿದ್ದಾರೆ.

ದರ್ಶನ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ಜಡೇಶ್, ಇದೀಗ ಅವರ ಚಿತ್ರಕ್ಕೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. 'ದಾಸ' ಸಿನಿಮಾ ನೋಡಿದಾಗಲೇ ದರ್ಶನ್ ಅವರ ಅಭಿಮಾನಿಯಾಗಿಬಿಟ್ಟೆ. ತರುಣ್ ಸುಧೀರ್ ಸಹೋದರನ ಸಮಾನ. ನಮ್ಮಿಬ್ಬರ ನಡುವೆ ಬಹಳ ಆತ್ಮೀಯ ಒಡನಾಟವಿದೆ. ಸಿನಿಮಾ ಬಗ್ಗೆ ಸಾಕಷ್ಟು ಮಾತುಕತೆ ನಡೆಸುತ್ತಿರುತ್ತೇವೆ ಎಂದು ತಿಳಿಸಿದ್ದಾರೆ.
ಸದ್ಯ 'ಕಾಟೇರ' ಟ್ರೈಲರ್ ರಿಲೀಸ್‌ಗೆ ವೇದಿಕೆ ಸಿದ್ಧವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಇದೇ ಶನಿವಾರ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. ಇಡೀ ಚಿತ್ರತಂಡ ಆ ದಿನ ಹುಬ್ಬಳ್ಳಿಗೆ ಹೋಗಲಿದೆ. ಇನ್ನು ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದೆ ಸದ್ದು ಮಾಡ್ತಿವೆ. ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಟ್ರೈಲರ್ ರಿಲೀಸ್ ಬಳಿಕ ಪ್ರಮೋಷನ್ ಮತ್ತಷ್ಟು ಹೆಚ್ಚಿಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.
'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣವಿದೆ. ಇನ್ನು ಚಿತ್ರದಲ್ಲಿ ಸ್ವತಃ ದರ್ಶನ್ 'ಕಾಟೇರ' ಟೈಟಲ್ ಸಲಹೆ ನೀಡಿದ್ದಾರೆ. ಪವರ್‌ಫುಲ್ ಟೈಟಲ್‌ನಲ್ಲಿ ಜಬರ್ದಸ್ತ್ ಸಿನಿಮಾ ಮಾಡಲಾಗಿದೆ. ಮೇಕಿಂಗ್ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಂಪ್ಲೀಟ್ ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಕನಕಪುರ ರಸ್ತೆ ಬಳಿ ಹಳ್ಳಿ ಸೆಟ್ ನಿರ್ಮಿಸಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇನ್ನುಳಿದಂತೆ ರಾಮೋಜಿ ಫಿಲ್ಮ್ ಸಿಟಿ, ಮೈಸೂರು, ಗುಜರಾತಿನ ಕಚ್ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಕುಮಾರ್ ಗೋವಿಂದ್, ಶ್ರುತಿ, ಅವಿನಾಶ್, ಬಿರಾದಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











