ಅವತ್ತು ತಮಾಷೆಗೆ ಸಾಯುವ ಮಾತು ಆಡಿದ್ದ ನಟ ದಿಲೀಪ್ ರಾಜ್; ಛೇ.. ವಿಧಿಯಾಟ
ಈ ಕ್ಷಣಕ್ಕೂ ಕನ್ನಡ ನಟ ದಿಲೀಪ್ ರಾಜ್ ಅಗಲಿಕೆಯ ಸುದ್ದಿಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. 47 ವರ್ಷಕ್ಕೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಒಳ್ಳೆ ಅವಕಾಶಗಳು ಸಿಗದೇ ಇದ್ದರೂ ತಮ್ಮ ಪ್ರತಿಭೆಯಿಂದ ದಿಲೀಪ್ ರಾಜ್ ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡಿದ್ದರು. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದರು.
ದಿಲೀಪ್ ರಾಜ್ ಒಡನಾಟದ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಅವರ ಪ್ರತಿಭೆ, ಸರಳ ಸಜ್ಜನಿಕೆ ಬಗ್ಗೆ ಕೊಂಡಾಡುತ್ತಿದ್ದಾರೆ. ನುಡಿ ನಮನ ಸಲ್ಲಿಸುತ್ತಿದ್ದಾರೆ. ಲೇಖಕಿ ಕುಸುಮ ಆಯರಹಳ್ಳಿ 3 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ತಮಾಷೆಯಾಗಿ ದಿಲೀಪ್ ರಾಜ್ ಅಂದು ಆಡಿದ ಮಾತು ನಿಜವಾಗಿಬಿಡ್ತಾ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ದಿಲೀಪ್ ನಿಧನದ ಸುದ್ದಿಯನ್ನು ಮಾಧ್ಯಮಗಳು ಕವರೇಜ್ ಮಾಡಿದ್ದು, ಅವರ ಆಪ್ತರ ಪ್ರತಿಕ್ರಿಯೆ ಪಡೆದಿವೆ. ಸಾಮಾನ್ಯವಾಗಿ ಯಾರಾದ್ರೂ ಬಾಯ್ತಪ್ಪಿ ಏನಾದ್ರೂ ನೆಗೆಟಿವ್ ಆಗಿ ಮಾತನಾಡಿಬಿಟ್ರೆ ಏಯ್ ಬಿಡ್ತು ಅನ್ನು, ಅಸ್ತು ದೇವತೆಗಳು ಅಸ್ತು ಎಂದುಬಿಡ್ತಾರೆ. ಮತ್ತೆ ಅಂತಹ ಮಾತು ಆಡಬೇಡ ಎಂದು ಹೇಳುವುದನ್ನು ನೋಡಿರುತ್ತೇವೆ. ಅದ್ಯಾಕೋ ಆ ದಿನ ದಿಲೀಪ್ ರಾಜ್ ಸಾವಿನ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರಂತೆ. ಅದಕ್ಕೆ ಪತ್ನಿ ಶ್ರೀವಿದ್ಯಾ ಕೂಡ ಬೈದಿದ್ರಂತೆ.. ಆದರೆ ಈಗ ಏನು ಹೇಳುವುದು ಎನ್ನುವಂತಾಗಿದೆ.
ಲೇಖಕಿ ಕುಸುಮ ಆಯರಹಳ್ಳಿ ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. "ದಿಲೀಪ್ ಮನೆಯಲ್ಲಿ ಒಂದು ಹೊಸ ಧಾರಾವಾಹಿಯ ಚರ್ಚೆ ಇತ್ತು. ಯಾವುದೋ ಮರಾಠಿಯದ್ದು ಕನ್ನಡಕ್ಕೆ ಮಾಡಬೇಕಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ದಿಲೀಪ್, ಧರಣೀಶ್, ಇನ್ನೂ ಕೆಲವರೆಲ್ಲ ಚರ್ಚೆ ಮಾಡ್ತಿದ್ದೋರು, ಅವರ ಹೆಂಡತಿ ವಿದ್ಯಾ ಕರೆದಾಗ ಊಟಕ್ಕೆದ್ದೆವು. ಅದರ ಹಿಂದಿನ ದಿನವೋ ಏನೋ ಯಾರೋ ಕಿರುತೆರೆ ಕಲಾವಿದರು ತೀರಿಕೊಂಡಿದ್ರು. ಯೂಟ್ಯೂಬ್ ಚಾನೆಲುಗಳಲ್ಲಿ ಅವರ ಒಡನಾಡಿಗಳನ್ನೆಲ್ಲ ಮಾತಾಡಿಸ್ತಾನೇ ಇದ್ರು. ಎಲ್ರ ಫೋನಲ್ಲೂ ಅದೇ ಬರ್ತಿತ್ತು. ದಿಲೀಪ್ ತಮಾಶೆಗೆ 'ಏ ನಾನ್ ಸತ್ರೂ ನಿಮ್ಮನ್ನೆಲ್ಲ ಮಾತಾಡಿಸ್ತಾರೆ ಕಣ್ರೋ' ಅಂದವರು, ಅವರು ತನ್ನ ಹೆಂಡತಿಗೆ, ಸಹ ನಿರ್ದೇಶಕರಿಗೆ ಏನೇನು ಕೇಳಬಹುದು ಅಂತೆಲ್ಲ ತಮಾಶೆ ಮಾಡಿದರು. ವಿದ್ಯಾ 'ಬಿಡೋ, ಅದೇನೂಂತ ಮಾತಾಡ್ತೀಯ' ಅಂತ ಬೈದ್ರು" ಎಂದು ನೆನಪಿಸಿಕೊಂಡಿದ್ದಾರೆ.
ದಿಲೀಪ್- ಶ್ರೀವಿದ್ಯಾ ನಿನ್ನೆ ತಾನೇ ಮದುವೆಯಾದಂತೆ, ಅರೆಪಾವು ಸಹ ಪ್ರೀತಿ ಕಡಿಮೆ ಆಗದೇ ಇದ್ದವರು. ಇವತ್ತು ಬೆಳಗ್ಗೆ ದಿಲೀಪ್ ಸುದ್ದಿ ಕೇಳಿದಾಗಿಂದ ನನಗೆ ಇದು ನೆನಪಾಗುತ್ತಲೇ ಇದೆ ಎಂದು ಕುಸುಮ ಆಯರಹಳ್ಳಿ ವಿಷಾದ ವ್ಯಕ್ತಪಡಿಸಿದ್ದಾರೆ. "ಇನ್ನೂ ಬಹುಕಾಲ ದಿಲೀಪ್ ಇದ್ದು ಹೋಗಿದ್ದರೆ ಈ ಮಾತಿಗೆ ಯಾವ ಅರ್ಥವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ 'ಹೋಗ್ ಎಲ್ಲಾದ್ರೂ ಸಾಯಿ' ಅಂತ ತಮಾಶೆಗೆ ಯಾರು ಯಾರಿಗೋ ಹೇಳುತ್ತಲೇ ಇರಬಹುದು. ಆದರೆ ಹಾಗೆ ಆಗೇಬಿಟ್ಟರೆ ತಮಾಶೆಗೂ ಹಾಗೆಲ್ಲ ಮಾತಾಡಬಾರದೇನೋ ಅನಿಸುತ್ತದೆ" ಎಂದಿದ್ದಾರೆ.
ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ಎಷ್ಟು ಕಷ್ಟಪಟ್ಟು ಬದುಕು ಕಟ್ಟಿಕೊಂಡರು. ಅಷ್ಟು ಸುಂದರವಾದ ಮನೆ ಕಟ್ಟಿದರು. ಎಲ್ಲ ಬಿಟ್ಟು ಇಷ್ಟು ಬೇಗ ಹೊರಟರು. ಮಿಲನ ಸಿನೆಮಾದ ಹೀರೋ, ವಿಲನ್ ಇಬ್ಬರೂ ಇಲ್ಲ. ಇಬ್ಬರಿಗೂ ಒಂದೇ ಬಗೆಯ ಸಾವು, ಅದೇ ವಯಸ್ಸಿನಲ್ಲಿ ಬಂದುಬಿಡ್ತಲ್ಲಾ. ಹೃದಯಾಘಾತ, ಹೃದಯಸ್ತಂಭನ ಎರಡೂ ಬೇರೆ. ಹೃದಯಾಘಾತ (heart attack)ಕ್ಕಿಂತ ಹೃದಯಸ್ತಂಭನ (cardiac arrest) ಅಪಾಯಕಾರಿ. ಒಟ್ಟಿನಲ್ಲಿ ಈ ಸಾವಿಗೆ ಹೃದಯವಿಲ್ಲ. ಮಾನಮರ್ಯಾದೆ, ಲಾಜಿಕ್, ಕರುಣೆ ಯಾವುದಂದರೆ ಯಾವುದೂ ಇಲ್ಲ. ನಮ್ಮೆಲ್ಲರ ನಾಳೆಗಳು ಬೋನಸ್ ಅಷ್ಟೇ ಅನಿಸುತ್ತದೆ ಯೋಚಿಸಿದರೆ" ಎಂದು ಲೇಖಕಿ ಕುಸುಮ ಆಯರಹಳ್ಳಿ ವಿವರಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗ್ತಿದೆ.


Click it and Unblock the Notifications