»   » ಕಾವೇರಿಯಲ್ಲಿ ಕಾಲ್ಜಾರಿದ ಎನ್‌.ಎಸ್‌. ಶಂಕರ್ರೂ

ಕಾವೇರಿಯಲ್ಲಿ ಕಾಲ್ಜಾರಿದ ಎನ್‌.ಎಸ್‌. ಶಂಕರ್ರೂ

Posted By: Super
Subscribe to Filmibeat Kannada

ಉಲ್ಟಾ - ಪಲ್ಟಾ ಚಿತ್ರ ನಿಮಗೆ ನೆನಪಿರಬೇಕಲ್ಲ. ಹತ್ತಿರ ಹತ್ತಿರ ಐದು ವರ್ಷಗಳ ಹಿಂದೆ ತೆರೆಕಂಡ ರಮೇಶ್‌ ದ್ವಿಪಾತ್ರಾಭಿನಯದ ಈ ಚಿತ್ರ ಹಿಂದಿಯ ರೀಮೇಕ್‌ ಆದರೂ, ಕನ್ನಡದಲ್ಲಿ ಕ್ಲಿಕ್‌ ಆಯ್ತು. ಈ ಚಿತ್ರ ನಿರ್ದೇಶಿಸಿದ್ದು, ಪತ್ರಕರ್ತ ಕಮ್‌ ನಿರ್ದೇಶಕ ಎನ್‌.ಎಸ್‌. ಶಂಕರ್‌.

ಆನಂತರ ಶಂಕ್ರೂ ಮತ್ತೊಂದು ದೊಡ್ಡ ಚಿತ್ರವನ್ನೇ ನಿರ್ದೇಶಿಸಬೇಕಿತ್ತು. ಆಗ ಆ ಚಿತ್ರದ ಹೆಸರು ಕಾವೇರಿ. ಶಂಕರ್‌ಗೆ ಆ ಚಿತ್ರ ಉಲ್ಟಾ ಹೊಡೆದು, ಕಾವೇರಿಯಲ್ಲಿ ಕಾಲು ಜಾರಿದ ಬಳಿಕ, ಚಿತ್ರದ ಹೆಸರೇ ಬದಲಾಯ್ತು. ಕಾವೇರಿ ಎಚ್‌2ಓ ಆಗಿ ಹೋಯ್ತು.

ಇದ್ಯಾಕಪ್ಪ ಇದೆಲ್ಲ ಈಗ ನೆನಪಾಯ್ತು ಅಂತೀರಾ? ಈಗ ಎನ್‌. ಎಸ್‌. ಶಂಕರ್‌ ಹೊಸದೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಕಾವೇರಿ ಉರುಫ್‌ ಎಚ್‌2ಓ ಅವರಿಗೆ ರಾಂಗ್‌ನಂಬರ್‌ ಆದಮೇಲೆ, ಆ ಹೆಸರಲ್ಲೇ ಒಂದು ಚಿತ್ರ ಮಾಡುವ ಆಲೋಚನೆ ಅವರದು. ಹೀಗಾಗೆ ಅವರು ಈ ಹೊತ್ತು ನಿರ್ದೇಶಿಸುತ್ತಿರುವ ಚಿತ್ರಕ್ಕೆ 'ರಾಂಗ್‌ ನಂಬರ್‌" ಎಂದೇ ನಾಮಕರಣ ಮಾಡಿದ್ದಾರೆ.

ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಚಾಮರಾಜಪೇಟೆಯ ಅರುಣಾ ಸ್ಟುಡಿಯೋದಲ್ಲಿ ನಡೆಯುತ್ತಿದೆ. ವಿ. ಮನೋಹರ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪಟ್ಟುಕೊಟ್ಟೈ ಪ್ರಭಾಕರನ್‌ ಎಂಬ ತಮಿಳು ಲೇಖಕರ ಸಸ್ಪೆನ್ಸ್‌ ತುಂಬಿದ ಕಥೆಯನ್ನು ಆಧರಿಸಿ ಶಂಕರ್‌ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಬೆಂಗಳೂರು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, ರಾಂಗ್‌ನಂಬರ್‌ ಇದೇ 15ರಂದು ಸೆಟ್ಟೇರಲಿದೆ. ಈ ಚಿತ್ರವಾದರೂ ಶಂಕರ್‌ಗೆ ರಾಂಗ್‌ ನಂಬರ್‌ ಆಗದಿರಲಿ.

English summary
Ultapalta director n.s. shankar directing a new film Wrong number after 5 years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada