ಕೋಮಲ್ ಹುಟ್ಟುಹಬ್ಬಕ್ಕೆ 'ಯಲಾಕುನ್ನಿ' ವಿಶೇಷ ಪೋಸ್ಟರ್ ರಿಲೀಸ್; ವಜ್ರಮುನಿ ರೋಲ್‌ನಲ್ಲಿ ಕೋಮಲ್ ನಟನೆ?
ಇಂದು ( ಜುಲೈ 4 ) ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 1973ರ ಜುಲೈ 4ರಂದು ಜನಿಸಿದ ಕೋಮಲ್ ಕುಮಾರ್ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೋಮಲ್ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರಗಳ ವಿಶೇಷ ಪೋಸ್ಟರ್‌ಗಳು ಬಿಡುಗಡೆಗೊಂಡಿವೆ.
ಕೋಮಲ್ ಕುಮಾರ್ ಕಳೆದ ವರ್ಷ ಉಂಡೆನಾಮ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುವ ಮೂಲಕ ಮತ್ತೆ ನಟನೆಯತ್ತ ಮುಖ ಮಾಡಿದ್ದು ಇದೀಗ ಯಲಾಕುನ್ನಿ ಹಾಗೂ ನಮೋ ಭೂತಾತ್ಮ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ಎರಡೂ ತಂಡಗಳೂ ಕೋಮಲ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸುವುದರ ಮೂಲಕ ಶುಭ ಕೋರಿವೆ. ಅದರಲ್ಲಿಯೂ ಯಲಾಕುನ್ನಿ ಚಿತ್ರತಂಡ ಶುಭ ಕೋರಿರುವ ಪೋಸ್ಟರ್ ಸಿನಿ ರಸಿಕರ ಗಮನ ಸೆಳೆದಿದೆ. ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳ ನಟ ವಜ್ರಮನಿ ಅವರ ಫೇಮಸ್ ಡೈಲಾಗ್ 'ಯಲಾಕುನ್ನಿ'ಯನ್ನೇ ಶೀರ್ಷಿಕೆಯನ್ನಾಗಿ ಇಟ್ಟುಕೊಂಡಿರುವ ಈ ತಂಡ ವಜ್ರಮುನಿ ಅವರ ಲುಕ್‌ನಲ್ಲಿಯೇ ಕೋಮಲ್ ಅವರ ಪೋಸ್ಟರ್ ಅನ್ನು ವಿಶೇಷವಾಗಿ ಎಡಿಟ್ ಮಾಡಿದೆ. ಈ ಪೋಸ್ಟರ್ ಕಂಡ ಸಿನಿ ರಸಿಕರು ಕೋಮಲ್ ವಜ್ರಮುನಿ ಪಾತ್ರದಲ್ಲೇನಾದರೂ ನಟಿಸಲಿದ್ದಾರಾ ಎಂಬ ಪ್ರಶ್ನೆಗೆ ಒಳಗಾಗಿದ್ದಾರೆ.
ಕೋಮಲ್ ಅವರ ವಜ್ರಮುನಿ ಲುಕ್ ಕಂಡ ಚಿತ್ರ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಮಲ್ ಅವರಿಗೆ ಈ ಚಿತ್ರ ಯಶಸ್ಸನ್ನು ತರಲಿ, ಮತ್ತಷ್ಟು ಹೆಚ್ಚಿನ ಚಿತ್ರಗಳಲ್ಲಿ ಅವರು ನಟಿಸಿ, ನಗಿಸಿ, ಮನರಂಜನೆ ನೀಡುವಂತಾಗಲಿ ಎಂದು ಹರಸಿದ್ದಾರೆ. ಯಲಾಕುನ್ನಿ ಚಿತ್ರಕ್ಕೆ ಎನ್ ಆರ್ ಪ್ರದೀಪ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಕೋಮಲ್ ಹುಟ್ಟುಹಬ್ಬದ ದಿನ ಕೋಮಲ್ ಕುಮಾರ್ ಸಹೋದರ ನವರಸ ನಾಯಕ ಜಗ್ಗೇಶ್ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯ ನಲ್ಮೆಯ ಸಹೋದರ. ಕೆಸಿಜಿ ಆಸ್ಪತ್ರೆಯಲ್ಲಿ ಕೋಮಲ್ ಜನಿಸಿದಾಗ ನಾನು ಅಕ್ಕ ಮಹಾದೇವಿ ಸೋದರ ಅತ್ತೆ ಹೋದಾಗ ತೊಟ್ಟಿಲಲ್ಲಿ ಒಂದುದಿನದ ಮಗು ಅವನ ಮುಖಲಕ್ಷಣ ಹಾಗು ಅವನಿಗೆ ನೀಡಿದ ಮುತ್ತು ನೆನಪಿದೆ..ಸಾದ್ವಿ ಗುಣದ ತಮ್ಮನ ಕೋಪ ನೋಡಿದ ನೆನಪಿಲ್ಲಾ..ನಾನು ಅಣ್ಣನಾದರು ಅವನನ್ನ ಮಗನಂತೆ ಪ್ರೀತಿಸುವೆ. ನೂರ್ಕಾಲ ಸುಖವಾಗಿ ಬಾಳು" ಎಂದು ಬರೆದುಕೊಂಡಿರುವ ಜಗ್ಗೇಶ್ ತಮ್ಮ ಸಹೋದರ ಕೋಮಲ್ ಜತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











