Yash19: ಸೇಮ್ ಟು ಸೇಮ್ ಸೀನ್ ರಿಪೀಟ್? ಶೀಘ್ರದಲ್ಲೇ ಯಶ್19 ಕಲಾಶ್ನಿಕೋವ್ ಅಪ್‌ಡೇಟ್!
ರಾಕಿ ವಿದೇಶದಿಂದ ವಾಪಸ್ ಬಂದಾಯ್ತು. ಕಲಾಶ್ನಿಕೋವ್ ರೇಂಜ್ ಅಪ್‌ಡೇಟ್ ಬರ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗ್ತಿದೆ. ಹುಟ್ಟುಹಬ್ಬಕ್ಕೆ ವಿದೇಶಕ್ಕೆ ಹೋಗಿದ್ದ ಯಶ್ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಇದನ್ನು KGF ಚಾಪ್ಟರ್- 2 ಸನ್ನಿವೇಶಕ್ಕೆ ಹೋಲಿಸಿ ಬಿಸಿ ಬಿಸಿ ಚರ್ಚೆ ನಡೀತಿದೆ.
'KGF ಚಾಪ್ಟರ್- 2' ಚಿತ್ರ ರಿಲೀಸ್ ಆಗಿ 9 ತಿಂಗಳು ಕಳೆದರೂ ಯಶ್ ಮುಂದಿನ ಸಿನಿಮಾ ಅಪ್‌ಡೇಟ್ ಸಿಕ್ಕಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್19 ಅನೌನ್ಸ್ ಆಗುತ್ತಾ ಎಂದು ಕಾದಿದ್ದವರಿಗೆ ನಿರಾಸೆ ಕಾದಿತ್ತು. ಎರಡು ದಿನ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ನಟ ಯಶ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು. ಬಹಳ ದೊಡ್ಡದಾಗಿ "ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ" ಎಂದಿದ್ದರು. ಹುಟ್ಟುಹಬ್ಬಕ್ಕೆ ಊರಿನಲ್ಲಿ ಇರಲ್ಲ, ನಿಮಗೆ ಸಿಗುವುದು ಇಲ್ಲ ಎಂದು ಹೇಳಿದ್ದರು.
ಕುಟುಂಬ ಸದಸ್ಯರು, ಸ್ನೇಹಿತರ ಜೊತೆ ದುಬೈಗೆ ಪ್ರವಾಸ ಹೋಗಿದ್ದ ಯಶ್ ತಮ್ಮ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಂಡಿದ್ದರು. ನೆಚ್ಚಿನ ನಟನ ಅನುಪಸ್ಥಿತಿಯಲ್ಲೇ ಅಭಿಮಾನಿಗಳು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದರು. 'ಮಿ & ಮಿ ರಾಮಾಚಾರಿ' ಹಾಗೂ 'KGF ಚಾಪ್ಟರ್- 2' ಸಿನಿಮಾಗಳು ರೀ ರಿಲೀಸ್ ಆಗಿ ಅಭಿಮಾನಿಗಳನ್ನು ರಂಜಿಸಿತ್ತು.

ಶೀಘ್ರದಲ್ಲೇ ಯಶ್19 ಅನೌನ್ಸ್‌ಮೆಂಟ್
ವಿದೇಶಕ್ಕೆ ಪ್ರವಾಸ ಹೋಗಿದ್ದ ನಟ ಯಶ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಿಮಾನ ನಿಲ್ದಾಣಕ್ಕೆ ಯಶ್ ಬಂದಿಳಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'KGF ಚಾಪ್ಟರ್- 2' ಚಿತ್ರದಲ್ಲಿ ಅಧೀರನಿಂದ ಭಾರೀ ಪೆಟ್ಟು ತಿಂದು ಸೈಲೆಂಟ್ ಆಗಿ ವಿದೇಶದ ಹೊರಟುಬಿಡುವ ರಾಕಿಭಾಯ್ ಅಲ್ಲಿ ಇನಾಯತ್ ಖಲೀಲ್‌ನ ಭೇಟಿ ಮಾಡ್ತಾನೆ. ಮತ್ತಷ್ಟು ಬಲಶಾಲಿಯಾಗಿ ಕಲಾಶ್ನಿಕೋವ್ ಗನ್ ಹಿಡ್ದು ವಾಪಸ್ ಬರ್ತಾನೆ. ಅಲ್ಲಿಂದ ಬರ್ತಿದ್ದಂತೆ ಅಧೀರನಿಗೆ ತಿರುಗೇಟು ಕೊಡುತ್ತಾನೆ. ಇದೇ ಸನ್ನಿವೇಶವನ್ನು ಈಗ ಯಶ್ ಬೆಂಗಳೂರಿಗೆ ಬಂದಿಳಿದ ಸನ್ನಿವೇಶಕ್ಕೆ ಹೋಲಿಸಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ದೊಡ್ಡ ಸಿಗ್ನಲ್ ಕೊಟ್ನಾ ರಾಕಿ?
ಯಶ್ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ರೇಂಜ್‌ನಲ್ಲಿ ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಈ ಹಿಂದೆ ಹಾಲಿವುಡ್ ಆಕ್ಷನ್ ಡೈರೆಕ್ಟರ್ ಜೊತೆ ಯಶ್ ಗನ್ ಹಿಡ್ದು ಅಬ್ಬರಿಸಿದ್ದರು. ಅವತಾರ್ ಸೇರಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಜೆ. ಜೆ ಪೇರಿ ಜೊತೆ ಕಾಣಿಸಿಕೊಂಡಿದ್ದ ಆ ವಿಡಿಯೋ ಫುಲ್ ವೈರಲ್ ಆಗಿತ್ತು. ಇದೀಗ ಯಶ್ ಸೈಲೆಂಟ್ ಆಗಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಇದರ ಹಿಂದೆ ತಮ್ಮ ಮುಂದಿನ ಸಿನಿಮಾ ಲೆಕ್ಕಾಚಾರವು ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಬಹಳ ದೊಡ್ಡದಾಗಿ ಯಶ್ ಏನೋ ಪ್ಲ್ಯಾನ್ ಮಾಡ್ತಿದ್ದಾರೆ. ಕೆಲವೇ ದಿನಗಳಲ್ಲಿ ಯಶ್19 ಅಪ್‌ಡೇಟ್ ಸಿಗುತ್ತೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡ್ತಿದ್ದಾರೆ.

ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ ಯಶ್19
'KGF ಚಾಪ್ಟರ್- 2' ಚಿತ್ರದಲ್ಲಿ ರಾಕಿ ವಿದೇಶದಿಂದ ವಾಪಸ್ ಬರುವ ಸನ್ನಿವೇಶದ ಸ್ಕ್ರಿನ್‌ಶಾಟ್ ಜೊತೆ ಯಶ್ ಬೆಂಗಳೂರಿಗೆ ಬಂದಿಳಿದ ಫೋಟೊಗಳನ್ನು ಸೇರಿಸಿ ಕೊಲಾಜ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸದ್ಯ ಟ್ವಿಟ್ಟರ್‌ನಲ್ಲಿ ಯಶ್19 ಹ್ಯಾಷ್‌ಟ್ಯಾಗ್ ಈಗ ಟ್ರೆಂಡ್ ಆಗ್ತಿದೆ. ಯಶ್ ಮುಂದಿನ ಚಿತ್ರಕ್ಕಾಗಿ ಬರೀ ಸ್ಯಾಂಡಲ್‌ವುಡ್ ಮಾತ್ರ ಅಲ್ಲ ಬಾಲಿವುಡ್ ಮಂದಿ ಕೂಡ ಕಾಯ್ತಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿ ಫಿಲ್ಮ್ ಮೇಕರ್ಸ್ ಕೂಡ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

ಅಂತೆ ಕಂತೆ ಸುದ್ದಿ ನಿಜವಾಗ್ಲಿಲ್ಲ
ಯಶ್19 ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳ್ತಾರೆ, ಇವ್ರು ಚಿತ್ರಕ್ಕೆ ಬಂಡವಾಳ ಹಾಕ್ತಾರೆ ಎನ್ನುವ ಹತ್ತು ಹಲವು ಸುದ್ದಿ ವೈರಲ್ ಆಗುತ್ತಲೇ ಇದೆ. ಆದರೆ ಯಾವುದು ಕೂಡ ಪಕ್ಕಾ ಆಗಿಲ್ಲ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್ ಮುಂದಿನ ಸಿನಿಮಾ ಎನ್ನುವ ಸುದ್ದಿ ಮಾತ್ರ ಬಲವಾಗಿ ಕೇಳಿಬರ್ತಿದೆ. ಆದರೆ ಈ ಬಗ್ಗೆ ರಾಕಿಂಗ್ ಸ್ಟಾರ್ ವಲಯದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಸ್ವತಃ ಯಶ್, "ನಾನು ಹೇಳುವವರೆಗೂ ಯಾವುದನ್ನು ನಂಬಬೇಡಿ, ಎಲ್ಲಾ ಫೈನಲ್ ಆದಮೇಲೆ ನಾನೇ ಹೇಳ್ತೀನಿ" ಎಂದು ಹೇಳಿದ್ದರು. ಹಾಗಾಗಿ ಎಲ್ಲಾ ಸುದ್ದಿಗಳು ಸದ್ಯಕ್ಕೆ ಅಂತೆಕಂತೆ ಸುದ್ದಿಗಳಾಗಿ ಅಷ್ಟೇ ಇದೆ.


Click it and Unblock the Notifications











