ಯಶ್-ರಾಧಿಕಾಗೆ ಇಂದು ವಿಶೇಷ: ಪತಿಗಾಗಿ ರಾಧಿಕಾ ಬರೆದರು ವಿಶೇಷ ಸಂದೇಶ!
ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ರಾಕಿಂಗ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿಗೆ ಇಂದು(ಡಿಸೆಂಬರ್ 9) ವಿಶೇಷವಾದ ದಿನ. ಹೌದು ರಾಧಿಕಾ ಹಾಗೂ ಯಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು.
5 ವರ್ಷಗಳ ಹಿಂದೆ ಇದೇ ದಿನ ಯಶ್ ಮತ್ತು ರಾಧಿಕಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಇಬ್ಬರು ತಮ್ಮ ಸಿನಿಮಾ ಜರ್ನಿಯ ಉತ್ತುಂಗದಲ್ಲಿ ಇದ್ದಾಗಲೇ ಮದುವೆ ಆಗಿದ್ದಾರೆ. ಇಬ್ಬರಿಗೂ ಇದ್ದ ದೊಡ್ಡ ಅಭಿಮಾನಿ ಬಳಗ ಇವರ ಮದುವೆಗೆ ಸಾಕ್ಷಿ ಆಗಿತ್ತು.
ರಾಧಿಕಾ ಪಂಡಿತ್ ಮತ್ತು ಯಶ್ ಬಹುವರ್ಷಗಳಿಂದ ಪರಸ್ಪರ ಗುಟ್ಟಾಗಿ ಪ್ರೀತಿಸುತ್ತಿದ್ದರು. 2016ರ ಆಗಸ್ಟ್‌ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿತು. ಬಳಿಕ ಡಿಸೆಂಬರ್‌ನಲ್ಲಿ ಮದುವೆ ನೆರವೇರಿತು.

ರಾಕಿಂಗ್ ಪತಿಗಾಗಿ ರಾಧಿಕಾ ಬರೆದ ಸುಂದರ ಸಂದೇಶ!
ರಾಧಿಕಾ ಪಂಡಿತ್ ತಮ್ಮ ಮದುವೆ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಹಂಚಿಕೊಂಡಿರುವ ಪೋಸ್ಟ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಶುಭಾಯಗಳು ಹರಿದು ಬರುತ್ತಿವೆ. ಯಶ್ ಜೊತೆಗಿರುವ ಫೊಟೋ ಹಂಚಿಕೊಂಡ ರಾಧಿಕಾ ಹೀಗೆ ಬರೆದುಕೊಂಡಿದ್ದಾರೆ.
"ನಿಮ್ಮನ್ನು ಉತ್ತಮಗೊಳಿಸುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ತಳ್ಳಿದವರು, ನಿಸ್ವಾರ್ಥವಾಗಿ ತಮ್ಮ ಸಮಯವನ್ನು ತ್ಯಾಗ ಮಾಡುವವರು, ನೀವು ಧೈರ್ಯಶಾಲಿ ಸುಸಜ್ಜಿತ ವ್ಯಕ್ತಿಯಾಗಲು ಸಹಾಯ ಮಾಡುವವರು ಯಾರಾದರು ಇದ್ದರೆ, ಅದು ಪವಿತ್ರವಾದದ್ದು. ನೀವು ಅಂತಹ ಪ್ರೀತಿಯನ್ನು ಹಿಡಿದುಕೊಳ್ಳಿ" ಎಂದು ರಾಧಿಕಾ ಬರೆದುಕೊಂಡಿದ್ದಾರೆ.

ಯಶ್-ರಾಧಿಕಾ ಪ್ರೀತಿಯ ಕತೆಯೆ ಬಲು ರೋಚಕ!
ಯಶ್ ಮತ್ತು ರಾಧಿಕಾ ಇಬ್ಬರು ಒಟ್ಟಿಗೆ ಬಣ್ಣದ ಬದುಕಿನ ಪಯಣ ಶುರು ಮಾಡಿದವರು. ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ, ಸಿನಿಮಾರಂಗದಲ್ಲೂ ಒಟ್ಟಿಗೆ ಮಿಂಚಿದವರು. ಉತ್ತಮ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಯಶ್ ನಂತರ ಪ್ರೇಮಿಗಳಾಗಿ ಈಗ ಗಂಡ-ಹೆಂಡತಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಇವರು ಪ್ರೀತಿಯ ಬಗ್ಗೆ ಸಿನಿಮಾರಂಗದಲ್ಲಿ ಗುಸುಗುಸು ಇದ್ದರೂ ಮದುವೆ ತನಕ ಎಲ್ಲೂ ಸುದ್ದಿ ಹೊರ ಬಂದಿರಲಿಲ್ಲ. ತಮ್ಮ ಸಿನಿ ಪಯಣದ ಜೊತೆ ಜೊತೆಗೆ ಈ ಜೋಡಿಯ ಪ್ರೇಮ ಪಯಣವು ಸಾಗಿತ್ತು. ಅವರು ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಭಿಮಾನಿಗಳಲ್ಲಿ ಸಂತಸ ತಂದಿತ್ತು.

2016 ಡಿಸೆಂಬರ್ 9ರಂದು ಸಪ್ತಪದಿ!
2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಜೋಡಿಗೆ ಈಗ ಐರಾ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

'ಆದಿ ಲಕ್ಷ್ಮೀ ಪುರಾಣ' ಬಳಿಕ ಬಣ್ಣ ಹಚ್ಚಲಿಲ್ಲ ರಾಧಿಕಾ ಪಂಡಿತ್!
ಮದುವೆ ಬಳಿಕ ನಟನೆಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಗಮನ ನೀಡಿದರು ರಾಧಿಕಾ ಪಂಡಿತ್. ಹಸೆಮಣೆ ಏರಿದ ನಂತರ ಅವರು ನಟಿಸಿದ ಏಕೈಕ ಸಿನಿಮಾ ಎಂದರೆ ಅದು 'ಆದಿ ಲಕ್ಷ್ಮೀ ಪುರಾಣ'. ಆ ಬಳಿಕ ಅವರು ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಳ್ಳಲಿಲ್ಲ. ಈಗ ಯಶ್-ರಾಧಿಕಾ ದಂಪತಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎಂಬ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಮಕ್ಕಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ ರಾಧಿಕಾ. ಆದರೆ ಮತ್ತೆ ಅವರು ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ.


Click it and Unblock the Notifications











