ಟಾಕ್ಸಿಕ್ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್, ಹೊಸ ಬಿಡುಗಡೆ ದಿನಾಂಕ ಘೋಷಿಸಿದ ರಾಕಿಂಗ್ ಸ್ಟಾರ್ ಯಶ್..!
ಕೆಲ ಸಿನಿಮಾಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ಟಾಕ್ಸಿಕ್ ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ಕೆ.ಜಿ.ಎಫ್ ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ರಾಕಿಂಗ್ ಭಕ್ತಗಣದ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ ಕೂಡ.
ಇನ್ನು ಟಾಕ್ಸಿಕ್ ಚಿತ್ರಕ್ಕೆ ಕೇವಲ ಕೆ.ವಿ.ಎನ್ ಸಂಸ್ಥೆ ಹಣ ಹೂಡುತ್ತಿಲ್ಲ. ಯಶ್ ಪಾಲು ಕೂಡ ನಿರ್ಮಾಣದಲ್ಲಿದೆ.ಈ ಕಾರಣಕ್ಕೆ ತಮ್ಮ ಚಿತ್ರಕ್ಕೆ ಯಾರು ಬೇಕು ಯಾರು ಬೇಡ ಎನ್ನುವ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಯಶ್ ಅವರಿಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನದಿಂದನೇ ಟಾಕ್ಸಿಕ್ ಚಿತ್ರಕ್ಕೆ ಈ ಪಾತ್ರಕ್ಕೆ ಇವರೇ ಬೇಕು ಎಂದು ಪಟ್ಟು ಹಿಡಿದು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಯಶ್ ಪ್ರತಿಭಾವಂತರನ್ನು ಹುಡುಕುತ್ತಿದ್ದಾರೆ. ಹೆಕ್ಕಿ ಹೆಕ್ಕಿ ತಮ್ಮ ಚಿತ್ರಕ್ಕೆ ಆಯ್ಕೆ ಮಾಡುತ್ತಾ ಬಂದಿರುವ ಯಶ್ ಹಾಗೇ ನೋಡಿದರೆ ಈ ಏಪ್ರಿಲ್ ಹತ್ತರಂದು ತಮ್ಮ ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ದರ್ಶನ ನೀಡಬೇಕಿತ್ತು. ಟಾಕ್ಸಿಕ್ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಮನರಂಜನೆಯ ರಸದೌತಣ ಬಡಿಸಬೇಕಿತ್ತು.

ಆದರೆ, ಯಶ್ ಕನಸುಗಾರ. ಹಾಲಿವುಡ್‌ಗೆ ಸೆಡ್ಡು ಹೊಡೆಯಲು ನಿಂತ ಕನ್ನಡದ ರಣಬೇಟೆಗಾರ. ಹೀಗಾಗಿಯೇ ಅವಸರವೇ ಅಪಾಯಕ್ಕೆ ಕಾರಣವೆನ್ನುವುದನ್ನು ಅರಿತ ಯಶ್ ಈ ಬಾರಿ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ನೀಡಲು ಸಿದ್ಧರಾಗಿದ್ದಾರೆ. ತಮ್ಮ ಚಿತ್ರದ ಹೊಸ ಬಿಡುಗಡೆಯ ದಿನಾಂಕ ದಿನಾಂಕವನ್ನು ಘೋಷಿಸಿದ್ದಾರೆ. ಈ ವರ್ಷ ಅಲ್ಲ ಬದಲಿಗೆ ಮುಂದಿನ ವರ್ಷ ಮಾರ್ಚ್ 19-2026ರಂದು ಈದ್/ಯುಗಾದಿ ಹಬ್ಬದ ಪ್ರಯುಕ್ತ ತಮ್ಮ ಕನಸಿನ ಕೂಸನ್ನು ನಿಮ್ಮೆಲ್ಲರ ಮಡಿಲಿಗೆ ಹಾಕುವ ನಿರ್ಧಾರವನ್ನು ಮಾಡಿದ್ದಾರೆ.
ಸಹಜವಾಗಿ ಯಶ್ ಅವರ ಈ ಸೋಶಿಯಲ್ ಮೀಡಿಯಾ ಪ್ರಕಟಣೆಯಿಂದ ಅಭಿಮಾನಿಗಳು ಹುಚ್ಚೆದ್ದಿದ್ದಾರೆ. ಇವತ್ತಿಂದ ಐಪಿಎಲ್ ಪಂದ್ಯಾವಳಿ ಶುರುವಾಗಿರುವುದನ್ನು ಮರೆತು ಟಾಕ್ಸಿಕ್ ಚಿತ್ರದ ಬಿಡುಗಡೆಯ ಸುದ್ದಿಯನ್ನು ಕೇಳಿ ಸಂಭ್ರಮಿಸುತ್ತಿದ್ಧಾರೆ. ಎಕ್ಸ್ { ಟ್ವಿಟರ್ } ನಲ್ಲಿ ToxicTheMovie ಎಂಬ ಹ್ಯಾಶ್ ಟ್ಯಾಗ್ ಅಡಿ ಟ್ರೆಂಡ್ ಕೂಡ ಮಾಡುತ್ತಿದ್ದಾರೆ.
ಆದರೆ, ಇದೇ ಸಮಯದಲ್ಲಿ ಯಶ್ ಅವರ ಅಭಿಮಾನಿಗಳಲ್ಲಿ ಒಳಗೊಳಗೇ ಅಸಹನೆಯೊಂದು ಹಬೆಯಾಡುತ್ತಿರುವಂತಿದೆ. ಕಾಯುವುದೊಂದೇ ನಮ್ಮ ಕೆಲಸ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇನ್ನು, ಎಲ್ಲರಿಗೆ ಗೊತ್ತಿರುವಂತೆ ಕನ್ನಡದಲ್ಲಿರುವುದೇ ಬೆರಳಣಿಕೆಯಷ್ಟು ಸ್ಟಾರ್‌ಗಳು. ಆ ಪೈಕಿ ಯಶ್ ಕೂಡ ಒಬ್ಬರು. ಆದರೆ ಈಗ ಯಶ್ ಪಂಚವಾರ್ಷಿಕ ಮತ್ತು ತ್ರೈವಾರ್ಷಿಕ ಯೋಜನೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದಾರೆ. ಹೀಗಾಗಿ ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಅನೇಕರು ಕೇಳಲು ಶುರು ಮಾಡಿದ್ದಾರೆ. ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಹವಾಸ ಸಾಕು ಮರಳಿ ಕನ್ನಡ ಚಿತ್ರರಂಗಕ್ಕೆ ಬಂದು ಬಿಡಿ ಎನ್ನುತ್ತಿದ್ದಾರೆ.
ಇನ್ನುಳಿದಂತೆ ಮಾರ್ಚ್ 19ರಿಂದ ಮಾರ್ಚ್ 22ರಿಂದ ನಿರಂತರ ರಜೆಗಳಿವೆ. ಈ ಹಿನ್ನೆಲೆ ಟಾಕ್ಸಿಕ್ ಚಿತ್ರಕ್ಕೆ ದೇಶದೆಲ್ಲೆಡೆ ಅಭೂತಪೂರ್ವ ಸ್ವಾಗತ ಸಿಗುವ ನಿರೀಕ್ಷೆ ಇದೆ. ಇನ್ನು ಟಾಕ್ಸಿಕ್ ಕೇವಲ ಪಂಚ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ಕೂಡ ಇಂಗ್ಲೀಷ್‌ನಲ್ಲಿ ಬಿಡುಗಡೆಯಾಗಲಿದೆ. ಏಕಕಾಲಕ್ಕೆ ಕನ್ನಡದ ಜೊತೆಯಲ್ಲಿ ಇಂಗ್ಲೀಷ್‌ನಲ್ಲಿ ಕೂಡ ಚಿತ್ರೀಕರಣವಾಗುತ್ತಿದೆ. ಒಟ್ನಲ್ಲಿ ಸದ್ಯ ಟಾಕ್ಸಿಕ್ ಚಿತ್ರದ ಹೊಸ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು ಅನೇಕರು ಈಗ್ಲೇ ಚಿತ್ರದ ಗಳಿಕೆ ಎಷ್ಟಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ಧಾರೆ. ಮೊದಲ ದಿನದ ಮೊದಲ ಶೋನಲ್ಲಿಯೇ ಟಾಕ್ಸಿಕ್ ಚಿತ್ರವನ್ನು ನೋಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











