ಖ್ಯಾತ ಛಾಯಾಗ್ರಾಹಕನ ಮದುವೆ ಸಮಾರಂಭಕ್ಕೆ ನಟ ಯಶ್ ಹಾಜರ್; ಫೋಟೊಗಳು ವೈರಲ್
ನಟ ಯಶ್ ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಕೆಲಸಗಳಲ್ಲಿ ಮುಳುಗಿದ್ದಾರೆ. ಬೆಂಗಳೂರಿನಲ್ಲಿ ಇರುವುದಕ್ಕಿಂತ ದೇಶ ವಿದೇಶಗಳಿಗೆ ಸುತ್ತಾಡುತ್ತಿರುತ್ತಾರೆ. ಶೂಟಿಂಗ್, ಮೀಟಿಂಗ್ ಅಂತ ಸಖತ್ ಬ್ಯುಸಿಯಾಗಿರ್ತಾರೆ. ಆದರೂ ಹಬ್ಬ, ಕುಟುಂಬ ಹಾಗೂ ಆಪ್ತರ ಕಾರ್ಯಕ್ರಮ ಅಂದಾಗ ಬಿಡುವು ಮಾಡಿಕೊಂಡು ಹಾಜರಾಗುತ್ತಾರೆ.
'ಕೆಜಿಎಫ್' ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡು ನವಜೋಡಿಗೆ ಶುಭಾಶಯ ಕೋರಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಸಿರು ಬಣ್ಣದ ಉದ್ದನೆಯ ಕುರ್ತಾ ಧರಿಸಿ ಕೂಲಿಂಗ್ ಗ್ಲಾಸ್ ತೊಟ್ಟು ಎಂದಿನ ತಮ್ಮ ರಗಡ್ ಲುಕ್‌ನಲ್ಲಿ ಯಶ್ ಆಗಮಿಸಿದ್ದರು.

ನಿಖಿತಾ ಎಂಬುವವರ ಜೊತೆ ಛಾಯಾಗ್ರಾಹಕ ಭುವನ್ ಗೌಡ ಮದುವೆ ನಿನ್ನೆ (ಅಕ್ಟೋಬರ್ 24) ನೆರವೇರಿದೆ. 'ಕೆಜಿಎಫ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀಲೀಲಾ, ನಟಿ ಶಾನ್ವಿ ಶ್ರೀವತ್ಸವ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಈ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ನಗರದ ಜಾಲಹಳ್ಳಿಯ ಬಳಿಯ ರೆಸಾರ್ಟ್‌ವೊಂದರಲ್ಲಿ ಈ ಮದುವೆ ಸಮಾರಂಭ ನೆರವೇರಿದೆ.
ಸ್ಟಿಲ್ ಫೋಟೊಗ್ರಫರ್ ಆಗಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಫೋಟೊಶೂಟ್ ಮಾಡುತ್ತಿದ್ದವರು ಭುವನ್ ಗೌಡ. 'ಉಗ್ರಂ' ಚಿತ್ರದ ಸಮಯದಲ್ಲಿ ಪ್ರಶಾಂತ್ ನೀಲ್ ಅವರಿಗೆ ಪರಿಚಿತರಾಗಿದ್ದರು. ಆ ಚಿತ್ರಕ್ಕೆ ರವಿವರ್ಮನ್ ಹಾಗೂ ರವಿಕುಮಾರ್ ಸನಾ ಛಾಯಾಗ್ರಾಹಕರಾಗಿದ್ದರು. ಅನಿವಾರ್ಯ ಕಾರಣಗಳಿಂದ ಅವರಿಬ್ಬರು ಹೊರ ಬಂದಾಗ ಭುವನ್ ಗೌಡಗೆ ಸಿನಿಮಾ ಛಾಯಾಗ್ರಹಣದ ಅವಕಾಶ ಸಿಕ್ಕಿತ್ತು. ತಮ್ಮ ಅದ್ಭುತ ಫ್ರೇಮ್‌ಗಳಿಂದ ನೀಲ್ ಮನಸ್ಸು ಗೆದ್ದರು. ಬಳಿಕ ಹಿಂತಿರುಗಿ ನೋಡಲಿಲ್ಲ.
'ಲೊಡ್ಡೆ', 'ರಥಾವರ' ಹಾಗೂ 'ಪುಷ್ಪಕ ವಿಮಾನ' ಚಿತ್ರಗಳಲ್ಲಿ ತಮ್ಮ ಛಾಯಾಗ್ರಹಣದ ಪಟ್ಟುಗಳನ್ನು ಪ್ರದರ್ಶಿಸಿದ್ದರು. ಯಶ್ ಕಾಂಬಿನೇಷನ್‌ನಲ್ಲಿ ಪ್ರಶಾಂತ್ ನೀಲ್ 'ಕೆಜಿಎಫ್' ಸಿನಿಮಾ ಆರಂಭಿಸಿದಾಗ ಮತ್ತೆ ಛಾಯಾಗ್ರಹಕರಾಗಿ ನೆನಪಾಗಿದ್ದು ಭುವನ್ ಗೌಡ. ಅಲ್ಲಿಂದ ಮುಂದೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ನೀಲ್ ಸಿನಿಮಾಗಳ ಖಾಯಂ ಛಾಯಾಗ್ರಾಹಕರಾಗಿಬಿಟ್ಟರು.
'ಕೆಜಿಎಫ್- 2', 'ಸಲಾರ್- 1' ಸಿನಿಮಾಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದರು. ಸದ್ಯ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಡುವೆ ಶ್ರೀಮುರಳಿ ನಟನೆಯ 'ಭರಾಟೆ' ಚಿತ್ರಕ್ಕೂ ಛಾಯಾಗ್ರಾಹಕರಾಗಿ ದುಡಿದಿದ್ದರು. ಇವತ್ತು ಭಾರತೀಯ ಚಿತ್ರರಂಗದಲ್ಲಿ ಭುವನ್ ಹೆಸರು ದೊಡ್ಡದಾಗಿ ಸದ್ದು ಮಾಡ್ತಿದೆ. ಮುಂದೆ 'ಸಲಾರ್- 2' ಚಿತ್ರಕ್ಕೂ ಅವರು ಕೆಲಸ ಮಾಡಲಿದ್ದಾರೆ.
ಮದುವೆ ಮಂಟಪದ ಬಳಿ ಯಶ್ ಆಗಮಿಸುತ್ತಿದ್ದಂತೆ 'ಬಾಸ್ ಬನ್ನಿ ಬಾಸ್' ಎಂದು ಭುವನ್ ಗೌಡ ಖುಷಿಯಾಗಿದ್ದಾರೆ. ಇನ್ನು ಮದುವೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳು ಅಭಿಮಾನಿಗಳು ಮುಗಿಬಿದ್ದರು. ಯಶ್, ಪ್ರಶಾಂತ್, ಶಾನ್ವಿ, ಶ್ರೀಲೀಲಾ, ಶ್ರೀನಿಧಿ ಶೆಟ್ಟಿ ಎಲ್ಲರೂ ಗ್ರೂಪ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
'ಕೆಜಿಎಫ್- 3' ಸಿನಿಮಾ ಕೂಡ ಘೋಷಣೆ ಆಗಿದೆ. ಆ ಚಿತ್ರಕ್ಕೂ ಪ್ರಶಾಂತ್ ನೀಲ್- ಯಶ್ ಕೈ ಜೋಡಿಸಲಿದ್ದಾರೆ. ಭುವನ್ ಗೌಡ ಮತ್ತೆ ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕಿದೆ. ಅದಕ್ಕೂ ಮುನ್ನ ತೆಲುಗು ಚಿತ್ರರಂಗದಲ್ಲಿ ಭುವನ್ ಕ್ರೇಜ್ ಶುರುವಾಗಿದ್ದು ದೊಡ್ಡ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಸದ್ಯಕ್ಕೆ ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಮಾತ್ರ ಅವರು ತೊಡಗಿಸಿಕೊಂಡಿದ್ದಾರೆ.


Click it and Unblock the Notifications











