Yash Birthday: ರಾಕಿಂಗ್ ಸ್ಟಾರ್‌ಗೆ ಹುಟ್ಟುಹಬ್ಬಕ್ಕೂ ಮೊದಲೇ ಗಿಫ್ಟ್ ಕೊಟ್ಟ ಸೆಂಚುರಿ ಸ್ಟಾರ್ ಶಿವಣ್ಣ!
ರಾಕಿಂಗ್ ಸ್ಟಾರ್ ಯಶ್ ಈಗ ಬರಿ ಕರ್ನಾಟಕಕ್ಕೆ ಸೌತ್ ಇಂಡಿಯಾಗೆ ಮಾತ್ರ ಸೀಮಿತವಾಗಿಲ್ಲ. ಕೆಜಿಎಫ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಭಾರತದಾದ್ಯಂತ ಅವರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಅವರ 'ಟಾಕ್ಸಿಕ್' ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈಗ ವಾರ ಹಟ್ಟುಹಬ್ಬ ಬರುತ್ತಿದ್ದು, ಕಾಮನ್ ಡಿಪಿ ಬಿಡುಗಡೆಯಾಗಿದೆ.
ಯಶ್ ಅವರ ಹುಟ್ಟುಹಬ್ಬವನ್ನು ಅವರ ಫ್ಯಾನ್ಸ್ ಈಗಾಗಲೇ ಆರಂಭಿಸಿದ್ದಾರೆ. ಜನವರಿ 8 ಯಶ್ ಹುಟ್ಟುಹಬ್ಬವಿದ್ದು, ಅಂದು ನೆಚ್ಚಿನ ನಟನ ಫೋಟೋವನ್ನು ಪ್ರೊಫೈಲ್ ಫಿಕ್ಚರ್ ಮಾಡಿಕೊಳ್ಳಲು ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ. ಇಲ್ಲಿ ವಿಶೇಷವೆಂದರೇ ಈ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿರುವುದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್.

ಯಶ್ ಬರ್ತ್‌ಡೇಗೂ ಮೊದಲೆ ಶಿವಣ್ಣನ ಗಿಫ್ಟ್!
ನಟ ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಣೆ ಮಾಡಿಕೊಳ್ಳುತ್ತಿಲ್ಲ. ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಸಮಯದಲ್ಲಿ ಹುಟ್ಟುಹಬ್ಬವನ್ನು ಫ್ಯಾನ್ಸ್ ಜೊತೆಗೆ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ಬೇಸರವನ್ನು ಶಿವಣ್ಣ ತೊಡೆದು ಹಾಕಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಯಶ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಹುಟ್ಟುಹಬ್ಬಕ್ಕೂ ಮೊದಲೇ ರಾಕಿಂಗ್ ಸ್ಟಾರ್‌ಗೆ ಸೆಂಚುರಿ ಸ್ಟಾರ್ ಗಿಫ್ಟ್ ನೀಡಿದ್ದಾರೆ. ಶಿವರಾಜ್‌ಕುಮಾರ್ ಅವರು ಸಿಡಿಪಿ (ಕಾಮನ್ ಡಿಪಿ) ಅನಾವರಣ ಮಾಡಿರುವುದು ಯಶ್ ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದೆ.
"ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು! CDP ತುಂಬಾ ಚೆನ್ನಾಗಿದೆ" ಎಂದು ನಟ ಶಿವರಾಜ್‌ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಡಿಪಿ ಹಂಚಿಕೊಂಡಿದ್ದಾರೆ. ಇದಕ್ಕೆ ನಟ ಯಶ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಶಿವಣ್ಣನ ನಡೆಗೆ ಫ್ಯಾನ್ಸ್ ಸಕತ್ ಖುಷ್ ಆಗಿದ್ದಾರೆ.
ಕಾಮನ್ ಡಿಪಿ ಪೋಸ್ಟರ್‌ನಲ್ಲಿ ಯಶ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ಶಿವಣ್ಣಗೆ ಧನ್ಯವಾದ ಹೇಳುತ್ತಿದ್ದಾರೆ. "ಮೊದಲನೆಯದಾಗಿ ಪ್ರತಿಯೊಬ್ಬ ಯಶ್ ಬಾಸ್ ಅಭಿಮಾನಿಗಳಿಂದ ಶಿವರಾಜ್‌ಕುಮಾರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಸ್ಸಂದೇಹವಾಗಿ ನೀವು ನಮಗೆ ಮತ್ತು ನಮ್ಮ ಬಾಸ್‌ಗೆ ದೊಡ್ಡ ಸ್ಫೂರ್ತಿ. ನಿಮ್ಮ ಕಾಳಜಿ, ಬೆಂಬಲ ಮತ್ತು ಡೌನ್ ಟು ಅರ್ಥ್ ನೇಚರ್‌ನಿಂದಾಗಿಯೇ ನೀವು ಹೀಗಿದ್ದಿರಿ" ಎಂದು ಅಭಿಮಾನಿಯೊಬ್ಬರು ಭಾವನಾತ್ಮಕವಾಗಿ ಧನ್ಯವಾದ ಹೇಳಿದ್ದಾರೆ.
ಹುಟ್ಟುಹಬ್ಬಕ್ಕೆ ಭೇಟಿ ಸಾಧ್ಯವಿಲ್ಲ ಎಂದ ಯಶ್!
ಇನ್ನು, ಈ ಬಾರಿ ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ನಟ ಯಶ್ ಹೇಳಿದ್ದಾರೆ. ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. "ಜನವರಿ 8, ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ... ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಸದಾಕಾಲ ನನ್ನ ಜತೆ ಇರುವ ನಿಮ್ಮ ಪ್ರೀತಿ ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ- ನಿಮ್ಮ ಪ್ರೀತಿಯ ಯಶ್" ಎಂದು ಟ್ವೀಟ್ ಮಾಡಿದ್ದರು.


Click it and Unblock the Notifications











