ಎಲ್ಲಿದ್ದಾರೆ ರಾಕಿಂಗ್ ಸ್ಟಾರ್ ಯಶ್? ವೈರಲ್ ಆಗ್ತಿರೋ ಫೋಟೊಗಳ ಅಸಲಿಯತ್ತೇನು?
ಅಭಿಮಾನಿಗಳ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಕೆಲಸಕ್ಕಾಗಿ ಯಶ್ ಸದ್ಯ ವಿದೇಶದಲ್ಲಿದ್ದಾರೆ. ಇನ್ನು ಅಭಿಮಾನಿಗಳು ನೆಚ್ಚಿನ ನಟನಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಇನ್ನು ಗದಗದಲ್ಲಿ ಮೂವರು ಅಭಿಮಾನಿಗಳು ಯಶ್ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಕಹಿ ಘಟನೆ ನಡೆದಿದೆ.
'KGF' ಸರಣಿ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಲು ಯಶ್ ಬಹಳ ಸಮಯ ತೆಗೆದುಕೊಂಡಿದ್ದರು. ಕಳೆದ ತಿಂಗಳಷ್ಟೇ 19ನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು. ಯಶ್19 ಎಂದೇ ಟ್ರೆಂಡ್ ಆಗಿದ್ದ ಸಿನಿಮಾ ಟೈಟಲ್ 'ಟಾಕ್ಸಿಕ್' ಎನ್ನುವುದು ಬಹಿರಂಗವಾಗಿತ್ತು. ಯಶ್ ಹುಟ್ಟುಹಬ್ಬಕ್ಕೆ 'ಟಾಕ್ಸಿಕ್' ಟೀಸರ್ ನಿರೀಕ್ಷೆ ಮಾಡಿದ್ದರು ಅಭಿಮಾನಿಗಳು. ಆದರೆ ಸಣ್ಣ ಪೋಸ್ಟರ್ ಕೂಡ ಬಂದಿಲ್ಲ. ಇದು ಸಹಜವಾಗಿಯೇ ಬೇಸರ ಮೂಡಿಸಿದೆ.

ಕೆವಿನ್ ಪ್ರೊಡಕ್ಷನ್ಸ್ ಸಂಸ್ಥೆ 'ಟಾಕ್ಸಿಕ್' ಟೈಟಲ್ ಅನೌನ್ಸ್‌ಮೆಂಟ್ ವಿಡಿಯೋದ ಸಣ್ಣ ಝಲಕ್ ಅನ್ನು ಶೇರ್ ಮಾಡಿ ನಟ ಯಶ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಅಂದಹಾಗೆ ಯಶ್ ವಾರದ ಹಿಂದೆಯೇ ಅಭಿಮಾನಿಗಳು ಪತ್ರ ಬರೆದು ಹುಟ್ಟುಹಬ್ಬವನ್ನು ನಿಮ್ಮೊಟ್ಟಿಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿನಿಮಾ ಕೆಲಸದ ನಿಮಿತ್ತ ಹೊರ ದೇಶಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಗದಗದಲ್ಲಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್‌ನಿಂದ ಕೊನೆಯುಸಿರೆಳೆದ ಅಭಿಮಾನಿಗಳ ಮನೆಗಳಿಗೆ ಸಂಜೆ ನಟ ಯಶ್ ಭೇಟಿ ನೀಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ನಟ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಂದಿದ್ದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಜೊತೆಗೆ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುವ ಸಾಧ್ಯತೆಯಿದೆ.
ಇನ್ನು 'ಟಾಕ್ಸಿಕ್' ಟೈಟಲ್ ಟೀಸರ್ ನೋಡಿದವರಿಗೆ ಇದು ಡ್ರಗ್ಸ್ ಮಾಫಿಯಾ ಕಥೆ, ಗ್ಯಾಂಗ್‌ಸ್ಟರ್ ಕಥೆ ಎನ್ನುವ ಅಂದಾಜು ಸಿಕ್ಕಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಚಿತ್ರತಂಡ ಘೋಷಣೆ ಮಾಡಿದೆ. ಸದ್ಯ 'ಟಾಕ್ಸಿಕ್' ಟೀಂ ಬ್ಯಾಂಕಾಕ್‌ನಲ್ಲಿದೆ ಎನ್ನುವ ಚರ್ಚೆ ನಡೀತಿದೆ. ಅದಕ್ಕೆ ಕಾರಣ ಡಿಸೈನರ್ ಸಾನಿಯಾ ಸರ್ದಾರಿಯಾ ಇತ್ತೀಚಿನ ಇನ್‌ಸ್ಟಾ ಪೋಸ್ಟ್.

ಯಶ್ ಸಿನಿಮಾಗಳಿಗೆ ಹಾಗೂ ಪರ್ಸನಲ್ ಕಾಸ್ಟ್ಯೂಮ್ ಡಿಸೈನರ್ ಆಗಿ ಸಾನಿಯಾ ಸರ್ದಾರಿಯಾ ಕೆಲಸ ಮಾಡುತ್ತಾ ಬರ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೂ ಸಾನಿಯಾ ಕೆಲಸ ಮಾಡುವ ಸಾಧ್ಯತೆಯಿದೆ. ಬ್ಯಾಂಕಾಕ್‌ನಿಂದ ಆಕೆ ಫೋಟೊವೊಂದನ್ನು ಇನ್‌ಸ್ಟಾ ಸ್ಟೋರಿಗೆ ಹಾಕಿದ್ದರು. ಅದನ್ನು ನೋಡಿ 'ಟಾಕ್ಸಿಕ್' ಟೀಂ ಬ್ಯಾಂಕಾಕ್‌ನಲ್ಲಿದೆ ಎನ್ನುವ ಊಹಾಪೋಹ ಶುರುವಾಗಿತ್ತು. ಒಂದಷ್ಟು ಮೇಕಿಂಗ್ ಸ್ಟಿಲ್ಸ್ ವೈರಲ್ ಆಗ್ತಿದ್ದು ಇದು ಟಾಕ್ಸಿಕ್ ಸಿನಿಮಾ ಶೂಟಿಂಗ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಕೆಲವರು ಇದು ಜಾಹೀರಾತು ಚಿತ್ರೀಕರಣ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಪೋಸ್ಟರ್‌ವೊಂದು ವೈರಲ್ ಆಗ್ತಿದೆ. ಕೆವಿಎನ್ ಪ್ರೊಡಕ್ಷನ್ ಹೆಸರಿನ ಟ್ವಿಟರ್ ಪೇಜ್‌ನಲ್ಲಿ ಇದು ಪೋಸ್ಟ್ ಆಗಿದೆ. ಕೆಲವರು ಚಿತ್ರತಂಡವೇ ಇದನ್ನು ರಿವೀಲ್ ಮಾಡಿದೆ ಎಂದುಕೊಂಡಿದ್ದಾರೆ. ಆದರೆ ಯಾರೋ ಅಭಿಮಾನಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಪೋಸ್ಟರ್ ತೇಲಿ ಬಿಟ್ಟಿದ್ದಾರೆ.
ಹಾಲಿವುಡ್ ಗಾಡ್ ಫಾದರ್ ಶೈಲಿಯ ಸೂಟ್, ಹ್ಯಾಟ್‌ನಲ್ಲಿ ಅಭಿಮಾನಿಗಳು ಯಶ್‌ನ ಕಲ್ಪಿಸಿಕೊಂಡು ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಕೆಲವರು ಇದು ಅಫೀಷಿಯಲ್ ಪೋಸ್ಟರ್ ಎಂದು ವೈರಲ್ ಮಾಡುತ್ತಿದ್ದಾರೆ. ಒಟ್ನಲ್ಲಿ 'ಟಾಕ್ಸಿಕ್' ಸಿನಿಮಾ ಕನ್ನಡ ಮಾತ್ರವಲ್ಲದೆ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಭಾರೀ ಕ್ರೇಜ್ ಹುಟ್ಟಾಕ್ಕಿದೆ.


Click it and Unblock the Notifications











