ಕೊಡಗು ನೆಪದಲ್ಲಿ 'ಯಶೋಮಾರ್ಗ' ಹೆಸರು ದುರ್ಬಳಕೆ: ಯಶ್ ಎಚ್ಚರಿಕೆ
Recommended Video

ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಣಾಮ ಅಲ್ಲಿನ ಜನತೆಗೆ ಕನ್ನಡ ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳ ಮುಖಾಂತರ ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಶಿವಣ್ಣ, ಹರ್ಷಿಕಾ ಪೂಣಚ್ಚ, ಸಂಯುಕ್ತಾ ಹೆಗಡೆ, ಜಗ್ಗೇಶ್ ಹೀಗೆ ಎಲ್ಲರೂ ಟ್ರಕ್ ಮೂಲಕ ಅಕ್ಕಿ, ಬಟ್ಟೆ, ಅಗತ್ಯ ವಸ್ತುಗಳನ್ನ ಕಳುಹಿಸಿದ್ದಾರೆ.
ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಕೂಡ ತಮ್ಮ 'ಯಶೋಮಾರ್ಗ ಫೌಂಡೇಶನ್' ಮೂಲಕ ಕೊಡಗಿನ ಜನತೆಗೆ ಬೇಕಾದ ವಸ್ತುಗಳನ್ನ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
ಹೀಗಿದ್ದರೂ, ರಾಕಿಂಗ್ ಸ್ಟಾರ್ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗಿನ ಸಹಾಯ ಮಾಡುವ ನೆಪದಲ್ಲಿ ಯಶೋಮಾರ್ಗ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ರಾಜಾಹುಲಿ ಗರಂ ಆಗಿದ್ದಾರೆ.. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಬೇಸರ ಹೊರಹಾಕಿದ್ದಾರೆ. ಏನೆಂದು ಬರೆದುಕೊಂಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.....

ನನ್ನ ಕೈಯಾರೆ ಮಾಡುವ ಕೆಲಸಕ್ಕೆ 'ಯಶೋಮಾರ್ಗ'
'ಯಶೋಮಾರ್ಗ' ಸಂಸ್ಥೆಯ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಯಾವುದೇ ದೇಣಿಗೆ/ವಂತಿಗೆಯನ್ನು ಜನರಿಂದ ಸ್ವೀಕರಿಸುತ್ತಿಲ್ಲ'' ಎಂದು ಯಶ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಉದ್ದೇಶ ಒಳ್ಳೆಯದು, ಆದ್ರೆ ಬೇಡ
''ಆದರೆ, ಇತ್ತೀಚೆಗೆ ಭಾರಿ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗಿನ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕಾಗಿ ಯಶೋಮಾರ್ಗದ ಹೆಸರನ್ನು ಬಳಸಬಾರದೆಂದು ವಿನಂತಿಸುತ್ತೇನೆ''

ದಯವಿಟ್ಟು ಕೊಡಬೇಡಿ
'ಸಾರ್ವಜನಿಕರ ನೆರವು ಯಶೋಮಾರ್ಗಕ್ಕೆ ಅವಶ್ಯಕವೆನಿಸುವ ಸಂದರ್ಭದಲ್ಲಿ ನಾನೇ ಖುದ್ದು ನಿಮ್ಮ ಮುಂದೆ ಬರುತ್ತೇನೆ. ಸದ್ಯಕ್ಕೆ ಯಶೋಮಾರ್ಗದ ಹೆಸರಿನಲ್ಲಿ ದೇಣಿಗೆ ಕೇಳಲು ಬಂದವರಿಗೆ ದೇಣಿಗೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ' ಎಂದು ಯಶ್ ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೊಡಗಿಗೆ ಕಳುಹಿಸಿದ್ದು ಸ್ವಂತ ಹಣದಿಂದ
ಹಾಗಿದ್ರೆ, 'ಯಶೋಮಾರ್ಗ ಫೌಂಡೇಶನ್' ವತಿಯಿಂದ ಕೊಡಗಿಗೆ ತಲುಪಿದ ಅಗತ್ಯವಸ್ತುಗಳು ಯಾವುದು ಗೊತ್ತಾ.? ಅದು ಸ್ವತಃ ಯಶ್ ಅವರೇ ಕಳುಹಿಸಿರುವುದು. ಟ್ರಕ್ ಪೂರ ಯಶೋಮಾರ್ಗ ಟೀಂ ಹೊತ್ತು ಹೊರಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಯಶ್ ಆಗಲಿ ಅಥ್ವಾ ಯಶೋಮಾರ್ಗ ಸಂಸ್ಥೆಯಾಗಲಿ ದೇಣಿಗೆ ಸಂಗ್ರಹಿಸಿ ಖರೀದಿಸಿದ್ದಲ್ಲ. ಬದಲಿಗೆ ನಟ ಯಶ್ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಖರೀದಿ ಮಾಡಿದ ವಸ್ತುಗಳು.


Click it and Unblock the Notifications











