ಕೊನೆಗೂ ಯಶ್19 ಬಗ್ಗೆ ದೊಡ್ಡ ಸಿಗ್ನಲ್ ಕೊಟ್ಟ ಯಶ್: ಈ ಚಕ್ರದಲ್ಲಿ ಇಷ್ಟೆಲ್ಲಾ ಅರ್ಥ ಇದ್ಯಾ?
ಒಂದೂವರೆ ವರ್ಷದಿಂದ ಯಶ್19 ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. 'KGF'-2 ಬಳಿಕ ಯಶ್ ಸಿನಿಮಾ ಯಾವುದೇ ಎನ್ನುವ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರ ಬಂದಂತೆ ಕಾಣುತ್ತಿದೆ. ಸ್ವತಃ ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಕಳೆದ ವರ್ಷ ಏಪ್ರಿಲ್ 14ಕ್ಕೆ 'KGF' ಚಾಪ್ಟರ್-2 ರಿಲೀಸ್ ಆಗಿತ್ತು. ಬಳಿಕ ಯಶ್ ಸಿನಿಮಾ ಯಾವ್ದು? ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಕತೆ ಏನು? ಎನ್ನುವ ಚರ್ಚೆ ಆರಂಭವಾಗಿತ್ತು. ಆದರೆ ಈ ಬಗ್ಗೆ ಯಶ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲೇಯಿಲ್ಲ. ಈ ವರ್ಷ ಹುಟ್ಟುಹಬ್ಬಕ್ಕೆ ಅಪ್‌ಡೇಟ್ ಸಿಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆ ಕಾದಿತ್ತು. ಅಭಿಮಾನಿಗಳಿಗೆ ಪತ್ರ ಬರೆದು ನನಗೆ ಇನ್ನು ಸ್ವಲ್ಪ ಸಮಯ ಕೊಡಿ ಎಂದಿದ್ದರು.

ಆ ಬಳಿಕ ಕೂಡ ಅಭಿಮಾನಿಗಳು ಗಣೇಶ ಹಬ್ಬ, ದಸರಾ ಹಬ್ಬ, ದೀಪಾವಳಿ ಹಬ್ಬಕ್ಕೆ ಯಶ್19 ಅಪ್‌ಡೇಟ್ ಸಿಗುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಪ್ರತಿ ಬಾರಿ ನಿರಾಸೆ ಎದುರಾಗಿತ್ತು. ಇತ್ತೀಚೆಗೆ ಬಿಜಿಎಸ್ ಉತ್ಸವದಲ್ಲಿ ಕೂಡ ಯಶ್ ಈ ಬಗ್ಗೆ ಮಾತನಾಡಿದ್ದರು. ಅನ್ನ ಸಂಪೂರ್ಣವಾಗಿ ಬೆಂದ ಮೇಲೆ ಬಡಿಸಬೇಕು. ಇನ್ನು ಕೊಂಚ ಸಮಯ ಬೇಕು ಎಂದು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದರು.
ಯಶ್ ಮುಂದಿನ ಹುಟ್ಟುಹಬ್ಬಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿಯಿದೆ. ಇಂತಹ ಹೊತ್ತಲ್ಲೇ ತಮ್ಮ ಮುಂದಿನ ಸಿನಿಮಾ ಅಪ್‌ಡೇಟ್ ಬಗ್ಗೆ ಯಶ್ ಸುಳಿವು ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಡಿಪಿ ಚೇಂಜ್ ಮಾಡಿದ್ದಾರೆ. ಲೋಡಿಂಗ್ ಎನ್ನುವ ಸಾಲು ಇರುವ ಫೋಟೊವನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಶೀಘ್ರದಲ್ಲೇ ತಮ್ಮ 19ನೇ ಸಿನಿಮಾ ಬಗ್ಗೆ ಮಾಹಿತಿ ಕೊಡುವುದನ್ನು ಸ್ಪಷ್ಟಪಡಿಸಿದ್ದಾರೆ.
19 ದಳಗಳಿರುವ ಚಕ್ರ ಸುತ್ತುವಂತೆ ಲೋಡಿಂಗ್ ಎನ್ನುವುದನ್ನು ಫೋಟೊದಲ್ಲಿ ಹೇಳಿದ್ದಾರೆ. ಯಶ್19 ಅಪ್‌ಡೇಟ್ ಲೋಡಿಂಗ್ ಎಂದು ನೇರವಾಗಿಯೇ ಫೋಟೊದಲ್ಲಿ ತಿಳಿಸಿದ್ದಾರೆ. ಶೂನ್ಯ ಮಾಸಕ್ಕೂ ಮುನ್ನ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡುತ್ತಾರಾ? ಅಥವಾ ಜನವರಿ 8ಕ್ಕೆ ತಮ್ಮ ಹುಟ್ಟುಹಬ್ಬದ ದಿನ ಸಿಹಿಸುದ್ದಿ ಕೊಡುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.
ಕಳೆದ 7 ವರ್ಷಗಳಿಂದ ಯಶ್ 'KGF' ಸರಣಿಯ 2 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ನಡುವೆ ಕೊರೊನಾ ಹಾವಳಿಯಿಂದ ಕೊಂಚ ತಡವಾಗಿತ್ತು. ಆದರೂ ಕೂಡ ತಮ್ಮ ಮುಂದಿನ ಸಿನಿಮಾ ಘೋಷಣೆಗೆ ಬಹಳ ತಡ ಮಾಡುತ್ತಿದ್ದಾರೆ. ದೊಡ್ಡ ಸಕ್ಸಸ್ ಬಳಿಕ ಮುಂದಿನ ಕತೆ ಆಯ್ಕೆ ವಿಚಾರದಲ್ಲಿ ಯಶ್ ಒತ್ತಡದಲ್ಲಿದ್ದಾರೆ ಎನ್ನುವುದು ಕೆಲವರ ವಾದ. ಆದರೆ ಅದನ್ನು ಯಶ್ ಒಪ್ಪುತ್ತಿಲ್ಲ. ಇನ್ನು ಯಶ್19 ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ವಿಚಾರದ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ.
ಮೊದಲಿಗೆ 'ಮಫ್ತಿ' ನರ್ತನ್ ಹೆಸರು ಕೇಳಿಬಂದಿತ್ತು. ಆದರೆ ಆ ಕತೆ ಇಷ್ಟವಾಗದೇ ಯಶ್ ಬೇರೆ ಕತೆ ಹುಡುಕಾಟ ಆರಂಭಿಸಿದರು. ಬಳಿಕ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಹೆಸರು ಚಾಲ್ತಿಗೆ ಬಂದಿತ್ತು. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯಶ್19 ಸಿನಿಮಾ ನಿರ್ಮಾಣವಾಗುತ್ತದೆ ಎನ್ನಲಾಗ್ತಿದೆ. ಯಶ್ ಈ ಬಾರಿ ನಟನೆಯ ಜೊತೆಗೆ ತಾವೇ ಸಿನಿಮಾ ನಿರ್ಮಿಸುವ ಸಾಧ್ಯತೆಯಿದೆ. ಹಾಗಾಗಿ ಕೆವಿಎನ್ ಜೊತೆ ಜಂಟಿಯಾಗಿ ಮುಂದಿನ ಸಿನಿಮಾವನ್ನು ತೆರೆಗೆ ತರುವ ಸಾಧ್ಯತೆ ತಟ್ಟವಾಗಿದೆ.
ತಮ್ಮ ಮುಂದಿನ ಚಿತ್ರಕ್ಕೆ ಸೈನ್ಸ್ ಫಿಕ್ಷನ್ ಅಥವಾ ಆಕ್ಷನ್ ಥ್ರಿಲ್ಲರ್ ಕತೆ ಆಯ್ಕೆ ಮಾಡಿಕೊಳ್ಳುವುದಾಗಿ ಹಿಂದೆ ಸಂದರ್ಶನವೊಂದರಲ್ಲಿ ಯಶ್ ಹೇಳಿದ್ದರು. ಈ ನಡುವೆ 70,80 ರ ದಶಕ ಗೋವಾ ಡ್ರಗ್ಸ್ ಮಾಫಿಯಾ ಸುತ್ತ ಸುತ್ತುವ ಕತೆಯಲ್ಲಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಕತೆಗೆ ಮಲಯಾಳಂ ನಿರ್ದೇಶಕಿ ಲತಾ ಮೆನನ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗಿತ್ತು. ಆದರೆ ಗೀತು ಮೋಹನ್ ದಾಸ್ ಹೆಸರು ಮಾತ್ರ ಇನ್ನು ಕೇಳಿಬರುತ್ತಲೇ ಇದೆ.


Click it and Unblock the Notifications











