ಬಳ್ಳಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ 'ಅಭಿಮಾನಿ'ಗೆ ಏನಾಯಿತು..?
ಗಂಧದ ಗುಡಿಯಲ್ಲಿ ನಿಜವಾದ ಅಭಿಮಾನ ಪಡೆದ ಕನ್ನಡದ ಅದೆಷ್ಟೋ ಜನ ಹೀರೋಗಳಿದ್ದಾರೆ. ಆ ಪೈಕಿ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ಬೆಲ್ಲಕ್ಕೆ ನೊಣ ಮುತ್ತಿಕೊಂಡತೆ, ಯಶ್ ಹೋದಲ್ಲಿ ಬಂದಲ್ಲಿ ಮುತ್ತಿಕೊಳ್ಳುವ ಅಭಿಮಾನಿಗಳಿಂದ ಯಶ್ ಅನೇಕ ಬಾರಿ ಕಿರಿಕಿರಿಗೆ ಒಳಗಾಗಿದ್ದು ಇದೆ.
ಅತಿರೇಕದ ಅಭಿಮಾನವನ್ನ ಕಂಡು ಅಭಿಮಾನಿಗಳಲ್ಲಿ ಕೈ ಮುಗಿದು ಬೇಡಿಕೊಂಡಿದ್ದು ಇದೆ. ಆದರೆ ಅಭಿಮಾನ ಈ ಮಾತುಗಳನ್ನ ಎಲ್ಲಿ ಕೇಳಿಸಿಕೊಳ್ಳುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಯಶ್ ಅವರ ಅಪ್ಪಟ ಅಭಿಮಾನಿಯ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ.

ಹೌದು, ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ತೆರಳಿದ್ದರು. ಇನ್ನೂ ಹೇಳಿ..ಕೇಳಿ..ಯಶ್ ಈಗ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಈ ಕಾರಣಕ್ಕೆ ಆಕಾಶ ನೋಡಲು ನೂಕುನುಗ್ಗಲು ಯಾಕೆ ಎಂಬ ಮಾತನ್ನ ಮರೆತ ಅನೇಕರು, ಯಶ್ ಅವರನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.
ಯಶ್ ಹಿಂದೆ ಅನೇಕ ಸಾರಿ ಬೇಡವೆಂದು ಹೇಳಿದ್ದರೂ ಕೂಡ, ಯಶ್ ಅವರ ಬೆನ್ನು ಹತ್ತಿದ್ದರು. ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ. ಕಾಲಿನ ಮೇಲೆ ರಕ್ತ ಚಿಮ್ಮಿದೆ. ಆ ನಂತರ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನೀಡಲಾಗಿದೆ.

ವಸಂತ ಗಾಯಗೊಂಡಿರುವ ಅಭಿಮಾನಿ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣ ಇವರ ಮೂಲ. ಮಿಕ್ಕಂತೆ ದೇವಾಲಯವನ್ನ ಈಗ ಚಿತ್ರದ ಖ್ಯಾತಿಯ ನಿರ್ಮಾಪಕ ಕೊರಪಾಟಿ ಸಾಯಿ ಈ ದೇವಾಲಯ ನಿರ್ಮಿಸಿದ್ದು ಶಿವಲಿಂಗದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಇಂದು ನಡೆಯಿತು. ಎಸ್.ಎಸ್.ರಾಜಮೌಳಿ ಕೂಡ ಈ ಕಾರ್ಯಕ್ರಮದಲ್ಲಿ ಇದ್ದರು.
ಬಳ್ಳಾರಿ ಪೊಲೀಸರ ಜೊತೆ ಹಿಂದೆ ಕೈ ಜೋಡಿಸಿದ್ದ ಯಶ್..!
ಹೆಚ್ಚು ಕಡಿಮೆ ಆರು ವರ್ಷದ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ಸೇರಿ ಯಶ್ ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ್ದರು. ರಸ್ತೆ ಅಪಘಾತದಲ್ಲಿ ಸಿಲುಕಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಪೊಲೀಸ್ ತನಿಖೆಯ ಹೆಸರಿನಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.
ಅಪಘಾತವಾದಾಗ ಗೊಲ್ಡನ್ ಅವರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಎಂಬ ಸಂದೇಶ ಸಾರುವ ಉದ್ದೇಶದಿಂದ ಬಳ್ಳಾರಿ ಪೊಲೀಸರಿಂದ ನಡೆದಿದ್ದ ಜಾಗೃತಿಗೆ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಕೈ ಜೋಡಿಸಿದ್ದರು.


Click it and Unblock the Notifications











