ಯಶ್ ಅಭಿಮಾನಿಗಳ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ: ಕುಟುಂಬಕ್ಕೆ ಆರ್ಥಿಕ ನೆರವು
"ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ. ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದೆ" ಎಂದು ಯಶ್ ಅಭಿಮಾನಿಗಳ ದುರಂತ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಕಟೌಟ್ ಕಟ್ಟುವ ವೇಳೆ ಮೂವರು ಯುವಕರು ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಬರ್ತ್‌ಡೇ ಪ್ರಯುಕ್ತ ಊರಿನ ಬೀದಿಯಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೂವರು ಯಶ್ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ಯುವಕರ ಸಾವಿಗೆ ಇಡೀ ಊರಿಗೆ ಸೂತಕದ ಛಾಯೆ ಆವರಿಸಿದೆ. ಇದೆ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.

ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
"ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ. ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದ್ದು ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಮೃತ ದುರ್ದೈವಿಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಆದೇಶ ಪ್ರತಿಯನ್ನು ಹಂಚಿಕೊಂಡಿದ್ದಾರೆ.

ಯಶ್ ಕಟೌಟ್ ಕಟ್ಟುವಾಗ ಮೂರು ಸಾವು, ಮೂವರ ಸ್ಥಿತಿ ಗಂಭೀರ
"ಗದಗ ಜಿಲ್ಲೆ, ಲಕ್ಷೇಶ್ವರ ತಾಲ್ಲುಕು ಸೂರಣಗಿ ಗ್ರಾಮದ ಅಂಬೇಡ್ಕರ ನಗರದ ಹತ್ತಿರ ಚಿತ್ರನಟ ಯಶ್ ಅವರ ಹುಟ್ಟುಹಬ್ಬದ ನಿಮಿತ್ತ ಯಶ್ ಅವರ ಭಾವಚಿತ್ರದ ಕಟೌಟ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಲುವಾಗಿ ರಾತ್ರಿ 12.30 ಗಂಟೆಗೆ ಕಟೌಟ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಷವಾಗಿ ಹದಿಹರೆಯು ಮೂರು ಜನರು 8.1.2024ರ ಮಧ್ಯರಾತ್ರಿಯ ಮರಣ ಹೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ".
ಮೃತಪಟ್ಟವರು
* ಹನುಮಂತಪ್ಪ ಮಟ್ಟೂರಪ್ಪ ಹರಿಜನ(21 ವರ್ಷ)
* ಮುರಳಿ ತಂದೆ ನೀಲಪ್ಪ ನಡುವಿನಮನಿ(20 ವರ್ಷ)
* ನವೀನ ತಂದೆ ನೀಲಪ್ಪ ಗಾಜಿ (19 ವರ್ಷ) ಈ ಮೂವರು ಯುವಕರು ವಿದ್ಯುತ್ ಸಂಪರ್ಕದಿಂದ ಮೃತಪಟ್ಟಿರುತ್ತಾರೆ.
ಗಾಯಗೊಂಡವರು
* ಮಂಜುನಾಥ ಸಿದ್ದಪ್ಪ ಹರಿಜನ
* ಹನಮಂತ ಗಾಳೆಪ್ಪ ಹರಿಜನ
* ಪ್ರಕಾಶ ಶಿವಪ್ಪ ಮ್ಯಾಗೇರಿ
ಘಟನೆಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಯುವಕರ ಕುಟುಂಬಗಳು ಬಡಕುಟುಂಬಗಳಾಗಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಬಡ ಕುಟುಂಬಗಳ ನೆರವಿಗೆ ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ನೀಡಬೇಕೆಂದು ಸಚಿವ ಎಚ್‌ಕೆ ಪಾಟೀಲ್ ವಿನಂತಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ತಲಾ 2 ಲಕ್ಷ ರೂಪಾಯಿ ಪರಿಹಾರ
ಯುವಕರ ಸಾವಿಗೆ ಸಂತಾಪ ಸೂಚಿಸಿರುವ ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್, "ಸರ್ಕಾರ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದೆ" ಎಂದು ಮಧ್ಯಾಹ್ನ ಮಾಹಿತಿ ನೀಡಿದ್ದರು. ಇಂದು ಸಂಜೆ ನಟ ಯಶ್ ಮೃತರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.


Click it and Unblock the Notifications











