Toxic: ತಮ್ಮಿಷ್ಟದ ಸ್ಥಳದಲ್ಲೇ 'ಟಾಕ್ಸಿಕ್' ಚಿತ್ರೀಕರಣ ಆರಂಭಿಸಿದ ಯಶ್; ಫೋಟೊ, ವಿಡಿಯೋ ಲೀಕ್
'ಕೆಜಿಎಫ್'-2 ಸಿನಿಮಾ ಬಂದು ಹೆಚ್ಚು ಕಡಿಮೆ 2 ವರ್ಷ ಆಯಿತು. ಆ ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ಪ್ರೇಕ್ಷಕರ ಮುಂದೆ ಇನ್ನು ಬಂದಿಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಚಿತ್ರೀಕರಣ ಮುಗಿಯುವ ಮುನ್ನ ಸ್ಟಾರ್ ನಟರು ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ಳುತ್ತಾರೆ. ಆದರೆ ಯಶ್ 'ಕೆಜಿಎಫ್'-2 ನಂತರ ಹೊಸ ಸಿನಿಮಾ ಘೋಷಿಸಲು ಬಹಳ ಸಮಯ ತೆಗೆದುಕೊಂಡಿದ್ದರು.
3 ತಿಂಗಳ ಹಿಂದೆಯಷ್ಟೇ ಯಶ್ 'ಟಾಕ್ಸಿಕ್' ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 'ಕೆಜಿಎಫ್' ಸರಣಿ ಬ್ಲಾಕ್‌ಬಸ್ಟರ್ ಬಳಿಕ ರಾಕಿ ಭಾಯ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ? ನಿರ್ದೇಶಕಿ ಯಾರು? ನಿರ್ಮಾಪಕರು ಯಾರು? ಸಿನಿಮಾ ಕಥೆ? ಜಾನರ್? ಹೀಗೆ ಸಾಕಷ್ಟು ಕುತೂಹಲವಿತ್ತು. ಈ ವರ್ಷ ಹುಟ್ಟುಹಬ್ಬಕ್ಕೂ ಮುನ್ನವೇ ಆ ಕುತೂಹಲಕ್ಕೆ ತೆರೆ ಬಿದ್ದಿತ್ತು.
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದರು. 'ಟಾಕ್ಸಿಕ್' ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದಿದ್ದರು. ಇತ್ತೀಚೆಗೆ ಚಿತ್ರತಂಡ ಒಂದೆಡೆ ಸೇರಿ ಮಾತುಕತೆ ನಡೆಸಿರುವ ಫೋಟೊ ವೈರಲ್ ಆಗಿತ್ತು. ಇದೀಗ ಗೋವಾದಲ್ಲಿ ಚಿತ್ರತಂಡ ಬೀಡುಬಿಟ್ಟಿರುವುದು ಕಂಡು ಬಂದಿದೆ.

ಗೋವಾದ ರೆಸಾರ್ಟ್‌ವೊಂದರಲ್ಲಿ 'ಟಾಕ್ಸಿಕ್' ಟೀಂ ಕಾಣಿಸಿಕೊಂಡಿದೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಜೊತೆಗೆ ನಿರ್ದೇಶಕಿ ಗೀತು ಮೋಹನ್‌ದಾಸ್ ಕೂಡ ಇದ್ದಾರೆ. ಒಂದಷ್ಟು ಜನ ತಂತ್ರಜ್ಞರ ಜೊತೆ ದೃಶ್ಯವೊಂದರ ಚಿತ್ರೀಕರಣದ ಬಗ್ಗೆ ಯಶ್ ಸಮಾಲೋಚನೆ ನಡೆಸುತ್ತಿರುವುದನ್ನು ನೋಡಬಹುದು. ಮೊದಲ ದಿನದ ಚಿತ್ರೀಕರಣಕ್ಕಾಗಿ ಚಿತ್ರತಂಡ ತಯಾರಿ ನಡೆಸುತ್ತಿರುವಂತೆ ಕಾಣುತ್ತಿದೆ. ಶೀಘ್ರದಲ್ಲೇ ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಸಿಗುವ ನಿರೀಕ್ಷೆಯಿದೆ.
ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಸಿನಿಮಾ ಕಥೆ ಸುತ್ತತ್ತದೆ ಎನ್ನಲಾಗುತ್ತಿದೆ. ಇನ್ನು ಕಥೆಯ ಕೇಂದ್ರಬಿಂದು ಗೋವಾ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ಹಾಗಾಗಿ ಅಲ್ಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗುತ್ತಿದೆ. ಬೀಚ್‌ಗಳ ನಾಡು ಗೋವಾ ಅಂದರೆ ನಟ ಯಶ್‌ಗೆ ಬಹಳ ಅಚ್ಚುಮೆಚ್ಚು. ಪದೇ ಪದೆ ಅಲ್ಲಿಗೆ ರಾಕಿಂಗ್ ಸ್ಟಾರ್ ಭೇಟಿ ಕೊಡುತ್ತಿರುತ್ತಾರೆ.
ರಾಧಿಕಾ ಪಂಡಿತ್ ತಾಯಿ ಗೋವಾ ಮೂಲದವರು. ಹಾಗಾಗಿ ಆಕೆಯ ಆ ಊರಿನ ನಂಟು ಬಹಳ ಹಳೆಯದು. ಇನ್ನು ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಕೂಡ ಅಲ್ಲೇ ನಡೆದಿತ್ತು. ಮಕ್ಕಳ ಸಮೇತ ರಾಕಿಂಗ್ ಜೋಡಿ ಆಗಿಂದಾಗ್ಗೆ ಗೋವಾಕ್ಕೆ ಹೋಗುತ್ತಿರುತ್ತಾರೆ. ಹಾಗಾಗಿ ರಾಕಿಂಗ್ ಫ್ಯಾಮಿಲಿಗೆ ಗೋವಾ ಮತ್ತೊಂದು ಮನೆಯೇ ಆಗಿಬಿಟ್ಟಿದೆ. ಇದೀಗ ಅಲ್ಲಿಂದಲೇ 'ಟಾಕ್ಸಿಕ್' ಸಿನಿಮಾ ಶುರುವಾಗುತ್ತಿದೆ.
ಗೋವಾ ಬಳಿಕ ಕರ್ನಾಟಕ ಹಾಗೂ ಶ್ರೀಲಂಕಾದಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಮಾಡುವ ಸಾಧ್ಯತೆಯಿದೆ. ಇನ್ನು 'ಟಾಕ್ಸಿಕ್' ಚಿತ್ರತಂಡಕ್ಕೆ ಹಾಲಿವುಡ್ ತಂತ್ರಜ್ಞರು, ಕಲಾವಿದರು ಸೇರಿಕೊಳ್ಳುವ ನಿರೀಕ್ಷೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಕೆಲ ದಿನಗಳಿಂದ ನಟ ಯಶ್ ತಮ್ಮ ಹೇರ್‌ಸ್ಟೈಲ್ ರಿವೀಲ್ ಮಾಡುತ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 'ಟಾಕ್ಸಿಕ್' ಚಿತ್ರಕ್ಕೆ ಯಶ್ ಲುಕ್ ಬದಲಾಗಿದೆ. ಅದು ಗೊತ್ತಾಗಬಾರದು ಎಂದು ತಲೆಗೆ ಮಫ್ಲರ್ ಹಾಗೂ ಲಾಂಗ್ ಉಲ್ಲನ್ ಕ್ಯಾಪ್ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಸದ್ಯ ಸೆಟ್‌ನಲ್ಲಿ ಕೂಡ ಇದೇ ರೀತಿ ಕಾಣಿಸಿಕೊಂಡಿರುವುದನ್ನು ನೋಡಬಹುದು.


Click it and Unblock the Notifications











