'ಬಾಡಿಗೆ' ವಿಷ್ಯ ಕೆದಕಿದ ನಿಖಿಲ್ ಗೆ ಯಶ್ ತಿರುಗೇಟು
Recommended Video

ಮಂಡ್ಯ ಅಖಾಡದಲ್ಲಿ ನಿಖಿಲ್ ಕುಮಾರ್ ವರ್ಸಸ್ ರಾಕಿಂಗ್ ಸ್ಟಾರ್ ಯಶ್ ಎನ್ನುವಂತಾಗಿದೆ. ಆರಂಭದಿಂದಲೂ ಪರೋಕ್ಷವಾಗಿ ವಾಕ್ಸರ ಮಾಡುತ್ತಿದ್ದ ಇವರಿಬ್ಬರು ಈಗ ನೇರಾನೇರ ಮಾತಿನ ಯುದ್ಧಕ್ಕೆ ನಿಂತಿದ್ದಾರೆ. ಸೋಮವಾರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದ ನಿಖಿಲ್ 'ಮನೆ ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ನಟ ಯಶ್ ವಿರುದ್ಧ ಹರಿಹಾಯ್ದಿದ್ದರು.
ಅದಕ್ಕೀಗ ಉತ್ತರ ಕೊಟ್ಟಿರುವ ರಾಜಾಹುಲಿ 'ಹೌದು, ನಮಗೆ ಮನೆ ಬಾಡಿಗೆ ಕಟ್ಟೋಕೆ ಆಗಿಲ್ಲ. ಆ ದುಡ್ಡಿನಲ್ಲಿ ಉತ್ತರ ಕರ್ನಾಟಕದ ಜನತೆಗೆ ಸಹಾಯ ಮಾಡಿದ್ದೀನಿ. ಈ ಸರ್ಕಾರಗಳು ಏನೂ ಮಾಡಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
ಮಂಗಳವಾರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ನಟ ಯಶ್, ಸಿಎಂ ಪುತ್ರನ ಆರೋಪಕ್ಕೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟಿದ್ದು, ಸ್ವಾಭಿಮಾನದ ನಾಡಲ್ಲಿ ಇದು ದೊಡ್ಡ ಚರ್ಚೆಯಾಗಿದೆ. ಹಾಗಿದ್ರೆ, ನಿಖಿಲ್ ಬಗ್ಗೆ ಯಶ್ ಬೇರೆ ಏನು ಹೇಳಿದ್ರು? ಮುಂದೆ ಓದಿ....

ಸರ್ಕಾರಗಳು ಮಾಡಿಲ್ಲ, ನಾನು ಮಾಡಿದೆ
''ಉತ್ತರ ಕರ್ನಾಟಕ ಜನರಿಗೆ ಕುಡಿಯೋಕೆ ನೀರು ಇರಲಿಲ್ಲ. ಬಹಳ ಕಷ್ಟಪಡ್ತಿದ್ರು. ಈ ಸರ್ಕಾರಗಳು ಬಂದಾಗ ಏನೂ ಕೆಲಸ ಮಾಡಿಲ್ಲ. ನಾವು ಆಗ ಸ್ವಲ್ಪ ಕಷ್ಟಪಟ್ಟು ದುಡಿದಿದ್ದ ದುಡ್ಡಿಂದ ಕೆರೆಯಲ್ಲಿ ನೀರು ಸಂಗ್ರಹಿಸುವಂತೆ ಮಾಡಿದ್ವಿ ಅಲ್ವಾ, ಆಗ ನಮ್ಮ ಹತ್ರ ಇದ್ದ ದುಡ್ಡು ಖರ್ಚು ಆಗೋಯ್ತು. ಅದಕ್ಕೆ ಬಾಡಿಗೆ ಕಟ್ಟೋಕೆ ಆಗಿಲ್ಲ'' ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ರು.

ನಾವು ಕಷ್ಟಪಟ್ಟು ದುಡಿಬೇಕು
''ಬೇರೆ ಎಲ್ಲ ಕೆಸಲಗಳಿಗೂ ಹೇಗೆ ದೇವರು ಕೊಡ್ತಾನೆ. ಆದ್ರೆ, ಮನೆ ಬಾಡಿಗೆ ಕಟ್ಟೋಕೆ ನಮಗೆ ಯೋಗ್ಯತೆ ಇಲ್ಲ. ಏನು ಮಾಡ್ತೀರಾ, ಕೆಲವರ ಹಣೆಬರಹ, ಯೋಗದಲ್ಲಿ ಬಂದಿರ್ತಾರೆ. ನಾವು ಕಷ್ಟಪಟ್ಟು ದುಡಿಬೇಕು ಮುಂದಿನ ದಿನದಲ್ಲಿ ನಮಗೆ ಆ ಸ್ಥಿತಿ ಬರಬಾರದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ. ನಾನು ಮಾಡ್ಕೊಳ್ತೀನಿ'' ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಟೀಕೆ ನಾವು ಮಾಡ್ತಿಲ್ಲ
ಟೀಕೆ ಮಾಡ್ಕೊಂಡು ರಾಜಕೀಯ ಮಾಡ್ತಿರೋದು ನಾವಲ್ಲ. ಛತ್ರಿ ಹಿಡ್ಕೊಂಡು ಇದ್ದ ಸಿನಿಮಾದವರು ಬಿಸಿಲಿಗೆ ಬಂದಿದ್ದಾರೆ. ಗಂಡ ಸತ್ತ ಮೇಲೆ ಮನೆಯಲ್ಲಿರಬೇಕು, ಬಾಡಿಗೆ ಕಟ್ಟಿಲ್ಲ ಇದೆಲ್ಲ ಟೀಕೆ ಮಾಡಿದ್ದು ನಾವಲ್ಲ. ಯಾರಾದರೂ ಟೀಕೆ ಮಾಡಿದಾಗ, ನೀವು ನಮ್ಮ ಅಭಿಪ್ರಾಯ ಕೇಳ್ತೀರಾ. ಅದಕ್ಕೆ ನಾವು ಉತ್ತರ ಕೊಟ್ಟಿದ್ದೀವಿ ಅಷ್ಟೇ.

ನಿಖಿಲ್ ಏನು ಹೇಳಿದ್ರು?
'ಛತ್ರಿ ಹಿಡ್ಕೊಂಡು ಶೂಟಿಂಗ್ ಮಾಡುತ್ತಿದ್ದವರಿಗೆ ಕಷ್ಟ ಆಗ್ತಿರಬಹುದು' ಎಂದು ಕುಮಾರಸ್ವಾಮಿ ಅವರು, ಯಶ್ ಮತ್ತು ದರ್ಶನ್ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಯಶ್ 'ಅವರ ಅಭ್ಯರ್ಥಿ ಬಗ್ಗೆ ಹೇಳುತ್ತಿದ್ದಾರೆ' ಎಂದು ವ್ಯಂಗ್ಯ ಮಾಡಿದ್ದರು. ಯಶ್ ಹೇಳಿದ ಆ ಮಾತಿಗೆ ತಿರುಗೇಟು ಕೊಟ್ಟಿದ್ದ ನಿಖಿಲ್, 'ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ, ಮಾತಾಡಲಿ..ಮಾತಾಡಲಿ....ಎಷ್ಟು ದಿನ ಅಂತ ನೋಡೋಣ' ಎಂದು ಟಾಂಗ್ ನೀಡಿದ್ರು.


Click it and Unblock the Notifications











