ಮಲೇಷ್ಯಾದಲ್ಲಿ ಯಶ್ ಗೋಲ್ಡನ್ ಬಿಸ್ಕೆಟ್ ಹಾಗೂ ಗೋಲ್ಡನ್ ಕಾಯಿನ್; ಕನ್ನಡ ನಟನಿಗೆ ಇದೇ ಮೊದಲು!
ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಎಂ ಎಸ್ ಗೋಲ್ಡ್ ಚಿನ್ನದ ಅಂಗಡಿ ಉದ್ಘಾಟನೆ ಕಾರ್ಯಕ್ರಮಕ್ಕೆಂದು ರಾಕಿ ಭಾಯ್ ತೆರಳಿದ್ದರು. ಯಶ್ ಕೆಜಿಎಫ್ ಸಿನಿಮಾ ಮಾದರಿಯ ನೀಲಿ ಬ್ಲೇಜರ್ ಧರಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ತನ್ನ ಎರಡನೇ ಬ್ರಾಂಚ್ ಅನ್ನು ಕೌಲಾಲಂಪುರದಲ್ಲಿ ಸ್ಥಾಪಿಸಿದ್ದು, ಇದನ್ನು ಉದ್ಘಾಟಿಸಲು ಯಶ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹೀಗೆ ಯಶ್ ಈ ಚಿನ್ನದ ಅಂಗಡಿಯನ್ನು ಉದ್ಘಾಟಿಸಿದ ಬಳಿಕ ಅದೇ ಅಂಗಡಿಯಲ್ಲಿ ಯಶ್ ಫೋಟೊ ಲೇಪನವಿದ್ದ ಚಿನ್ನದ ಕಾಯಿನ್ ಹಾಗೂ ಗೋಲ್ಡ್ ಬಾರ್‌ಗಳನ್ನು ತಯಾರಿಸಿತ್ತು.

ಯಶ್ ಫೋಟೊ ಇದ್ದ ಈ ಚಿನ್ನದ ಕಾಯಿನ್ ಹಾಗೂ ಬಾರ್‌ಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇನ್ನು ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಈ ಗೋಲ್ಡನ್ ಬಾರ್‌ಗಳ ಮೇಲೆ ಯಶ್ ಸಹಿಯನ್ನು ಹಾಕಿಸಿದ್ದು, ಅವುಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಹತ್ತು ಚಿನ್ನದ ಬಾರ್‌ಗಳಿಗೆ ಯಶ್ ಸಹಿ ಹಾಕಿದ್ದು, ಈ ಚಿನ್ನದ ಬಾರ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ, ಈ ಚಿನ್ನದ ಬಾರ್‌ಗಳನ್ನು ಖರೀದಿಸುವ ವಿಶ್ವದ ಹತ್ತು ಜನರಲ್ಲಿ ನೀವೂ ಸಹ ಒಬ್ಬರಾಗಿ ಎಂದು ಟ್ವೀಟ್ ಮಾಡಿದೆ.
ಇನ್ನು ಈ ಒಂದು ಚಿನ್ನದ ಬಾರ್ ಒಂದು ಕೆಜಿ ತೂಕವಿದ್ದು, ಒಟ್ಟು ಹತ್ತು ಕೆಜಿ ತೂಕವುಳ್ಳ ಹತ್ತು ಗೋಲ್ಡನ್ ಬಾರ್ ಮೇಲೆ ಯಶ್ ಚಿತ್ರ ಹಾಗೂ ಹೆಸರನ್ನು ಹಾಕಿ ತಯಾರಿಸಲಾಗಿದೆ. ಈ ರೀತಿ ಮಲೇಷ್ಯಾದಲ್ಲಿ ಹಾಗೂ ವಿದೇಶದಲ್ಲಿ ಇಷ್ಟು ದೊಡ್ಡ ಮಟ್ಟದ ಚಿನ್ನದ ಬಾರ್‌ಗಳಲ್ಲಿ ಕನ್ನಡ ನಟನ ಫೋಟೊ ಹಾಗೂ ಸಹಿಯನ್ನು ಮುದ್ರಿಸಿರುವುದು ಇದೇ ಮೊದಲಾಗಿದ್ದು, ಚಿನ್ನದಲ್ಲಿ ಅವನ ಹೆಸರು ಹಾಗೂ ಫೋಟೊವನ್ನು ಕೆತ್ತಿದ್ದಾರೆ ಎಂದರೆ ಅವನೇನೋ ದೊಡ್ಡ ಸಾಧನೆಯನ್ನೇ ಮಾಡಿರಬೇಕು ಎಂದು ಕೆಜಿಎಫ್ ಡೈಲಾಗ್ ಅನ್ನು ಬರೆದುಕೊಂಡು ಬಿಲ್ಡಪ್ ಕೊಡ್ತಿದ್ದಾರೆ ಯಶ್ ಅಭಿಮಾನಿಗಳು.


Click it and Unblock the Notifications











