ಯಶ್ ಜಪಾನೀಸ್ ಭಾಷೆ ಮಾತಾಡೋದು ನೋಡಿದ್ದೀರಾ? ವಿಡಿಯೋ ವೈರಲ್
ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಅಪ್‌ಡೇಟ್ ಸಿಗುವ ಸುಳಿವು ಸಿಗುತ್ತಿಲ್ಲ. ಆದರೆ ಯಶ್ ನಟನೆಯ ಸಿನಿಮಾ ಮತ್ತೆ ಥಿಯೇಟರ್‌ಗೆ ಬರ್ತಿದೆ. ಇದು ರಾಕಿ ಹೊಸ ಸಿನಿಮಾ ಅಲ್ಲ, ಕರ್ನಾಟಕದಲ್ಲಿ ರಿಲೀಸ್ ಕೂಡ ಆಗ್ತಿಲ್ಲ. ಸದ್ಯ 'KGF' ಸರಣಿ ಸಿನಿಮಾಗಳು ಜಪಾನ್‌ನಲ್ಲಿ ರಿಲೀಸ್ ಆಗ್ತಿದೆ.
ಭಾರತದ ಸಿನಿಮಾಗಳು ಇದೀಗ ವಿದೇಶಗಳಲ್ಲಿ ಹೆಚ್ಚು ಹೆಚ್ಚು ಸದ್ದು ಮಾಡ್ತಿಲ್ಲ. ಇತ್ತೀಚೆಗೆ 'RRR' ಸಿನಿಮಾ ಜಪಾನೀಸ್ ಭಾಷೆಗೆ ಡಬ್ ಆಗಿ ಅಲ್ಲಿ ರಿಲೀಸ್ ಆಗಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು. ರಜನಿಕಾಂತ್ 'ಮುತ್ತು' ಸಿನಿಮಾ ದಾಖಲೆಯನ್ನು ಮುರಿದಿತ್ತು. ಇದೀಗ 'RRR' ಸಿನಿಮಾ ಹಾದಿಯಲ್ಲಿ 'KGF' ಚಾಪ್ಟರ್-1 ಹಾಗೂ ಚಾಪ್ಟರ್-2 ಜಪಾನ್ ದೇಶದಲ್ಲಿ ಬಿಡುಗಡೆ ಆಗುತ್ತಿದೆ. ಮುಂದಿನ ವಾರವೇ ಅಲ್ಲಿನ ಥಿಯೇಟರ್‌ಗಳಲ್ಲಿ ರಾಕಿ ಭಾಯ್ ಆರ್ಭಟ ಶುರುವಾಗಲಿದೆ.

ಈ ಹಿಂದೆ ನಟಿ ಶ್ರೀನಿಧಿ ಶೆಟ್ಟಿ 'KGF' ಸಿನಿಮಾ ಜಪಾನ್‌ನಲ್ಲಿ ರಿಲೀಸ್ ಆಗುವ ಬಗ್ಗೆ ಮಾತನಾಡಿದ್ದರು. ಇದೀಗ ಸ್ವತಃ ಯಶ್ ಕೂಡ ಸಿನಿಮಾ ರಿಲೀಸ್ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿ ಜಪಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಪಾನ್ ಭಾಷೆಯಲ್ಲಿ ಯಶ್ ಮಾತು
ಸ್ಪೆಷಲ್ ವಿಡಿಯೋ ಮಾಡಿ ಮಾತನಾಡಿರುವ ಯಶ್ ಆರಂಭದಲ್ಲಿ ಜಪಾನೀಸ್ ಭಾಷೆಯಲ್ಲೇ ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ್ದಾರೆ. ನಂತರ ಇಂಗ್ಲೀಷ್‌ನಲ್ಲಿ ಮಾತು ಮುಂದುವರೆಸಿದ್ದಾರೆ. "ನಮಸ್ತೆ ಜಪಾನ್ ನನ್ನ 'ಕೆಜಿಎಫ್ ಚಾಪ್ಟರ್- 1 ಹಾಗೂ 'ಕೆಜಿಎಫ್ ಚಾಪ್ಟರ್-2 ಸಿನಿಮಾಗಳು ಜಪಾನ್‌ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಕ್ತಿ, ಧೈರ್ಯ ಮತ್ತು ದೃಢಸಂಕಲ್ಪವನ್ನು ಒಳಗೊಂಡಿವೆ. ಇದೆಲ್ಲವೂ ಸಾಕಷ್ಟು ಮನರಂಜನೆ ಮತ್ತು ಅದ್ಭುತ ಆಕ್ಷನ್ ತುಂಬಿದೆ. ತಪ್ಪದೇ ಸಿನಿಮಾ ನೋಡಿ" ಎಂದು ಯಶ್ ಮನವಿ ಮಾಡಿದ್ದಾರೆ.

ಬಾಕ್ಸಾಫೀಸ್ ಶೇಕ್ ಮಾಡಿದ್ದ ಸರಣಿ
ಕೆಜಿಎಫ್ ಸರಣಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿತ್ತು. ಸರಣಿಯ ಮೊದಲ ಸಿನಿಮಾ 250 ಕೋಟಿ ರೂ. ಕಲೆಕ್ಷನ್ ಮಾಡಿದರೆ 2ನೇ ಸಿನಿಮಾ 1200 ಕೋಟಿ ರೂ. ಬಾಚಿ ಎಲ್ಲರ ಹುಬ್ಬೇರಿಸಿತ್ತು. ಕನ್ನಡ ಸಿನಿಮಾಗಳು 100 ಕೋಟಿ ರೂ. ಗಳಿಸೋದೇ ಕಷ್ಟ ಎನ್ನುವ ಸಮಯದಲ್ಲಿ 1000 ಕೋಟಿ ಕಲೆಕ್ಷನ್ ಮಾಡಬಹುದು ಎಂದು ಪ್ರಶಾಂತ್ ನೀಲ್- ಯಶ್ ಸಾಧಿಸಿ ತೋರಿಸಿದ್ದರು.
ಮುಂದಿನ ದಿನಗಳಲ್ಲಿ ಕೆಜಿಎಫ್-3
ಅಂದಹಾಗೆ ಕೆಜಿಎಫ್ ಸರಣಿ 2 ಚಿತ್ರಕ್ಕೆ ಮುಕ್ತಾಯವಾಗಿಲ್ಲ. ಮುಂದೆ ಕೂಡ ಈ ಕಥೆಯನ್ನು ಮುಂದುವರೆಸುವ ಪ್ರಯತ್ನ ನಡೀತಿದೆ. ಕೆಜಿಎಫ್-3 ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದೆ. ಈ ಚಿತ್ರದಲ್ಲಿ ಕೆಜಿಎಫ್ ಕಥೆ ಇಣುಕುವ ಸುಳಿವು ಸಿಗುತ್ತಿದೆ. ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಎರಡು ಸಿನಿಮಾಗಳ ಕಥೆ ಸಂಧಿಸುವ ಸಾಧ್ಯತೆಯಿದೆ.
2 ಭಾಗಗಳಾಗಿ 'ಸಲಾರ್'
KGF ಮಾತ್ರವಲ್ಲ 'ಸಲಾರ್' ಚಿತ್ರವನ್ನು ಕೂಡ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸದ್ಯ ಮೊದಲ ಭಾಗದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 83 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ ಭಾರೀ ಕುತೂಹಲ ಕೆರಳಿಸಿದೆ. ಈ ಚಿತ್ರವನ್ನು ಕೂಡ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











