ಕೆಜಿಎಫ್ ಬಳಿಕ ಯಶ್ ಲೆಜೆಂಡ್ ಎಂದ ಪೂಜಾ ಹೆಗ್ಡೆ ರಾಕಿ ಭಾಯ್ ಜತೆ ನಟಿಸುವ ಕುರಿತು ಹೀಗಂದ್ರು
ಪೂಜಾ ಹೆಗ್ಡೆ ಟಾಲಿವುಡ್ ಚಿತ್ರರಂಗದ ಮೂಲಕ ಸ್ಟಾರ್ ನಟಿಯ ಪಟ್ಟವನ್ನು ಗಿಟ್ಟಿಸಿಕೊಂಡ ಕರಾವಳಿ ಬೆಡಗಿ. ಹೌದು, ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಪೂಜಾ ಹೆಗ್ಡೆ ಗಟ್ಟಿಯಾಗಿ ನೆಲೆಯೂರಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗಿನ ಒಕ ಲೈಲಾ ಕೋಸಂ ಹಾಗೂ ಮುಕುಂದ ಚಿತ್ರಗಳಲ್ಲಿ ನಟಿಸಿ ತಕ್ಕಮಟ್ಟಿಗೆ ಸದ್ದು ಮಾಡಿದ್ದ ಪೂಜಾ ಹೆಗ್ಡೆ ಹೃತಿಕ್ ರೋಷನ್ ನಟನೆಯ ಮೊಹೆಂಜೊ ದಾರೋ ಸಿನಿಮಾ ಮೂಲಕ ಬಾಲಿವುಡ್‌ಗೂ ಸಹ ಕಾಲಿಟ್ಟರು.
ಬಳಿಕ ಅಲ್ಲು ಅರ್ಜುನ್ ನಟನೆಯ ದುವ್ವುಡ ಜಗನ್ನಾಥಂ ಎಂಬ ಚಿತ್ರದ ಮೂಲಕ ಬ್ರೇಕ್ ಪಡೆದುಕೊಂಡ ಪೂಜಾ ಹೆಗ್ಡೆ ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು, ರಾಮ್ ಚರಣ್ ಹಾಗೂ ಪ್ರಭಾಸ್ ರೀತಿಯ ತೆಲುಗಿನ ಬಿಗ್ಗೆಸ್ಟ್ ನಟರ ಚಿತ್ರಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿದ್ದರು. ಅಲ್ಲದೇ ವಿಜಯ್ ನಟನೆಯ ಬೀಸ್ಟ್ ಚಿತ್ರದಲ್ಲಿಯೂ ಸಹ ನಟಿಸಿದ್ದರು.

ಸದ್ಯ ಹಿಂದಿಯ ಬಹು ನಿರೀಕ್ಷಿತ ಚಿತ್ರ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದು, ಈ ವಾರ ಈ ಚಿತ್ರ ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದು, ಯುಟ್ಯೂಬ್ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಹೀಗೆ ಪಿಂಕ್ ವಿಲ್ಲಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಭಾಗವಹಿಸಿರುವ ಪೂಜಾ ಹೆಗ್ಡೆ ತಾವು ಇಲ್ಲಿಯವರೆಗೂ ನಟಿಸಿರುವ ನಟರ ಬಗ್ಗೆ ಹಾಗೂ ನಟಿಸದೇ ಇರುವ ಕೆಲ ನಟರ ಬಗ್ಗೆ ಮಾತನಾಡಿದರು. ಫನ್ ರೌಂಡ್‌ನಲ್ಲಿ ವಿವಿಧ ನಟರ ಫೋಟೊಗಳು ಬಂದಾಗ ಅವರ ಬಗ್ಗೆ ಮಾತನಾಡಿದ ಪೂಜಾ ಹೆಗ್ಡೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕುರಿತಾಗಿಯೂ ಸಹ ಮಾತನಾಡಿದರು.
ನಿರೂಪಕರು ಯಶ್ ಚಿತ್ರವನ್ನು ತೋರಿಸಿದಾಗ ಮಾತನಾಡಿದ ಪೂಜಾ ಹೆಗ್ಡೆ "ಕೆಜಿಎಫ್ ಬಳಿಕ ರಾಕಿ ಭಾಯ್ ಕೂಡ ಲೆಜೆಂಡ್ ಆಗಿದ್ದಾರೆ. ನಾನು ಅವರ ಜತೆ ಹೆಚ್ಚೇನೂ ಮಾತನಾಡಿಲ್ಲ. ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ. ಆದಷ್ಟು ಬೇಗ ಅವರ ಜತೆ ನಟಿಸುತ್ತೇನೆ ಎಂದು ಹೇಳಬಹುದು" ಎಂದು ಹೇಳಿಕೆ ನೀಡಿದರು.

ಈ ಮೂಲಕ ಯಶ್ ಲೆಜೆಂಡ್ ಎಂದ ಪೂಜಾ ಹೆಗ್ಡೆ ಯಶ್ ಜತೆ ನಟಿಸುವ ಆಸೆಯನ್ನೂ ಸಹ ವ್ಯಕ್ತಪಡಿಸಿದ್ದಾರೆ. ಇನ್ನು ಯಶ್ ಜತೆ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬ ಸುದ್ದಿಗಳು ಹಲವಾರು ಬಾರಿ ಹರಿದಾಡಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮ ನಡೆದಿದ್ದಾಗ ಆಗಮಿಸಿದ್ದ ಪೂಜಾ ಹೆಗ್ಡೆ ಯಶ್ 19 ಚಿತ್ರದಲ್ಲಿ ನೀವೇ ನಾಯಕಿ ಎನ್ನಲಾಗ್ತಿದೆ, ಯಶ್ ಜತೆ ತೆರೆ ಹಂಚಿಕೊಳ್ತಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ್ದರು.
ಹೌದು, ಕೈಸನ್ನೆ ಮಾಡುವ ಮೂಲಕ ತನಗೇನು ಐಡಿಯಾ ಇಲ್ಲ ಎಂಬಂತೆ ಏನೂ ಮಾತನಾಡದೇ ಪೂಜಾ ಹೆಗ್ಡೆ ತೆರಳಿದ್ದರು. ಈ ರಿಯಾಕ್ಷನ್ ಕಂಡಿದ್ದ ನೆಟ್ಟಿಗರು ಪೂಜಾ ಹೆಗ್ಡೆ ಯಶ್ ಜತೆ ನಟಿಸಲಿದ್ದು, ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಹಂಚಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ರೀತಿ ಮೌನದಿಂದ ತೆರಳಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.


Click it and Unblock the Notifications











